ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮೇಲೆ ಎಫ್ಐಆರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಧಾರವಾಡ ಗ್ರಾಮೀಣ ಠಾಣೆಯ ಇನ್ಸ್ಪೆಕ್ಟರ್ ಅನ್ನು ಅಮಾನತುಗೊಳಿಸಲಾಗಿದೆ. ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅಮಾನತು ಆದೇಶ ಹೊರಡಿಸಿದ್ದಾರೆ.
ಶ್ರೀಧರ ಸತಾರೆ ಅಮಾನತಾದ ಇನ್ಸ್ಪೆಕ್ಟರ್. ಸರ್ವೋದಯ ಶಿಕ್ಷಣ ಸಂಸ್ಥೆ ಹಾಗೂ ವಾಲ್ಮೀಕಿ ಮಹಾಸಭಾ ನಡುವಿನ ವಿವಾದಕ್ಕೆ ಸಂಬಂಧಿಸಿದಂತೆ ಮುಗದ ಗ್ರಾಮದಲ್ಲಿ ಗಲಾಟೆಯೊಂದು ನಡೆದಿತ್ತು. ಈ ವೇಳೆ ಮೋಹನ್ ಗುಡಸಲಮನಿ ಎಂಬುವವರು ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಜನವರಿ 25ರಂದು ಸರ್ವೋದಯ ಶಿಕ್ಷಣ ಸಂಸ್ಥೆಯ ಶಿಕ್ಷಕರ ಜೊತೆ ಹೊರಟ್ಟಿಯವರನ್ನ 5ನೇಯ ಆರೋಪಿಯಾಗಿ ಶ್ರೀಧರ ಸತಾರೆ ಪ್ರಕರಣ ದಾಖಲಿಸಿಕೊಂಡಿದ್ದರು.
ಹೊರಟ್ಟಿ ಅವರು ಗಲಾಟೆಗೆ ಕುಮ್ಮಕ್ಕು ನೀಡಿದ್ದಾರೆಂದು ಅವರ ಮೇಲೆ ಅಟ್ರಾಸಿಟಿ ಕೇಸ್ ಬುಕ್ ಮಾಡಲಾಗಿತ್ತು. ಕಳೆದ ಎರಡು ದಿನಗಳ ಹಿಂದೆ ಮೇಲ್ಮನೆಯಲ್ಲಿ ಈ ಬಗ್ಗೆ ಚರ್ಚೆ ಕೂಡ ನಡೆದಿತ್ತು. ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ಸರ್ಕಾರದ ವಿರುದ್ಧ ಗುಡುಗಿದ್ದರು. ಈ ವೇಳೆ ಎಸ್ಪಿ ಹಾಗೂ ಇನ್ಸ್ಪೆಕ್ಟರ್ ಮೇಲೆ ಕ್ರಮಕ್ಕೆ ಆಗ್ರಹಿಸಲಾಗಿತ್ತು.ಅಲ್ಲದೇ, ಗೃಹಸಚಿವ ಆರಗ ಜ್ಞಾನೇಂದ್ರ ಸಹ ಎರಡು ಮೂರು ದಿನದಲ್ಲಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಗ್ರಾಮೀಣ ಠಾಣೆಯ ಇನ್ಸ್ಪೆಕ್ಟರ್ ಶ್ರೀಧರ ಸತಾರೆ ಅವರನ್ನು ಅಮಾನತುಗೊಳಿಸಲಾಗಿದೆ.