ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತವು ರಷ್ಯಾದ ಆಕ್ರಮಣವನ್ನು ಖಂಡಿಸದ ಕಾರಣ, ಉಕ್ರೇನಿಯನ್ ಭದ್ರತಾ ಸಿಬ್ಬಂದಿ ತಮ್ಮನ್ನು ತುಚ್ಛವಾಗಿ ನಡೆಸಿಕೊಳ್ಳುತ್ತಿದ್ದಾರೆ ಎಂದು ಭಾರತೀಯ ವಿದ್ಯಾರ್ಥಿಗಳು ಅಳಲು ತೋಡಿಕೊಳ್ಳುತ್ತಿದ್ದಾರೆ.
ಉಕ್ರೇನ್-ಪೋಲೆಂಡ್ ಗಡಿಗಳಲ್ಲಿ 72 ಗಂಟೆಗಳಿಗೂ ಹೆಚ್ಚು ಕಾಲ ಕೊರೆಯುವ ಚಳಿಯಲ್ಲಿ ಸಿಲುಕಿಕೊಂಡಿದ್ದ ಈ ವಿದ್ಯಾರ್ಥಿಗಳಲ್ಲಿ ಅನೇಕರು ತಮ್ಮನ್ನು ಉಕ್ರೇನ್ ಭದ್ರತಾ ಸಿಬ್ಬಂದಿ ಎಳೆದು ಒದ್ದು ಹಾಕಿದ್ದಾರೆ, ತಮ್ಮ ಫೋನುಗಳನ್ನು ಕಸಿದುಕೊಳ್ಳುತ್ತಿದ್ದಾರೆ ಎಂದು ಸಂಕಷ್ಟವನ್ನು ಹಂಚಿಕೊಂಡಿದ್ದಾರೆ.
ಆರಂಭದಲ್ಲಿ ಕೆಲವು ವಿದ್ಯಾರ್ಥಿಗಳನ್ನು ಗಡಿ ದಾಟಿ ಬರಲು ಉಕ್ರೇನ್ ಸಹಾಯ ಮಾಡಿತ್ತು. ಆದರೆ ನಂತರ ಪೋಲೆಂಡ್ ಪ್ರವೇಶಿಸುವುದಕ್ಕೆ ತಡೆಯೊಡ್ಡಲಾಯಿತು. ನಾನು ನನ್ನ ಸೋದರ ಮತ್ತು ಕೆಲವು ಸ್ನೇಹಿತರ ಜೊತೆಗೆ ಗುಂಪಿನಲ್ಲಿ ನಿಂತುಕೊಂಡಿದ್ದೆ. ಮೊದಲಿಗೆ ಅಧಿಕಾರಿಗಳು ನಮಗೆ ಸರದಿ ಸಾಲಿನಲ್ಲಿ ನಿಂತುಕೊಳ್ಳಲು ಹೇಳಿದರು, ಅದರಂತೆ ಮಾಡಿದೆವು. ನಂತರ ಹುಡುಗಿಯರು ಪ್ರತ್ಯೇಕ ಸಾಲು ಮಾಡುವಂತೆ ಹೇಳಿದರು. ನಂತರ ನನ್ನನ್ನು ಗಡಿ ದಾಟಲು ಹೇಳಿ ನನ್ನ ಸೋದರ ಆಚೆ ಕಡೆ ಕಾಯುತ್ತಿದ್ದನು. ನನ್ನ ಸೋದರ ಸರದಿ ಸಾಲಿನಲ್ಲಿ ನಿಂತಿರುವಾಗ ಆತನನ್ನು ಎಳೆದು ಲಾಠಿಯಿಂದ ಹೊಡೆದರು ಎಂದು ಸಂದೀಪ್ ಕೌರ್ ಸುದ್ದಿ ಪತ್ರಿಕೆಗಳಿಗೆ ಪ್ರತಿಕ್ರಿಯಿಸಿದ್ದಾರೆ.
ಪೋಲೆಂಡ್ ಗಡಿಯಲ್ಲಿ ಉಕ್ರೇನಿಯನ್ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಲು ಭಾರತೀಯ ರಾಯಭಾರ ಕಚೇರಿಯಿಂದ ಯಾರೂ ಇಲ್ಲ ಎಂದು ವಿದ್ಯಾರ್ಥಿಯು ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ನಾವು ಪೋಲೆಂಡ್ ಗಡಿಯನ್ನು ದಾಟಿದ ನಂತರ, ನಾವು ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಗಳನ್ನು ಭೇಟಿಯಾದೆವು ಆದರೆ ಉಕ್ರೇನ್ ಕಡೆಯಿಂದ ಯಾರೂ ಇರಲಿಲ್ಲ. ಉಕ್ರೇನಿಯನ್ ಭಾಗದಲ್ಲಿ ವಿದ್ಯಾರ್ಥಿಗಳನ್ನು ಕೆಟ್ಟದಾಗಿ ನಡೆಸಿಕೊಳ್ಳಲಾಗಿದೆ. ಈಗ, ಪರಿಸ್ಥಿತಿ ಹದಗೆಟ್ಟಿದ್ದರಿಂದ ನನ್ನ ಸಹೋದರ ತನ್ನ ಸ್ನೇಹಿತರೊಂದಿಗೆ ಕಾಲೇಜು ಹಾಸ್ಟೆಲ್ಗೆ ಹಿಂತಿರುಗುತ್ತಿದ್ದಾನೆ ಎಂದು ವಿದ್ಯಾರ್ಥಿ ಹೇಳಿದ್ದಾನೆ.