ವೈದ್ಯಕೀಯ ಶಿಕ್ಷಣ ವ್ಯವಸ್ಥೆ ಎನ್ನುವುದು ದೇಶದಲ್ಲಿ ದಂಧೆಯಾಗಿ ಮಾರ್ಪಟ್ಟಿದೆ. ನೀಟ್ ವ್ಯವಸ್ಥೆ ಧನದಾಹಕ್ಕೆ ನೀರು ಹಾಕಿ ಪೋಷಣೆ ಮಾಡುತ್ತಿದೆ. ಇದರ ವಿರುದ್ಧ ರಾಜ್ಯ ವಿಧಾನಮಂಡಲಗಳಲ್ಲಿ ನಿರ್ಣಯ ಕೈಗೊಳ್ಳಬೇಕು ಎಂದು ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿಯವರು ಆಗ್ರಹಿಸಿದ್ದಾರೆ.
ಉಕ್ರೇನ್ಗೆ ವೈದ್ಯಕೀಯ ಅಧ್ಯಯನ ಮಾಡಲು ಹೋಗಿದ್ದ ಹಾವೇರಿಯ ನವೀನ್ ಯುದ್ಧದಲ್ಲಿ ಸಾವಿಗೀಡಾಗಿದ್ದು, ಇಂದು ಮೃತದೇಹ ಸ್ವಗ್ರಾಮಕ್ಕೆ ಬಂದಿದೆ. ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ಉನ್ನತ ಶಿಕ್ಷಣವನ್ನು ಉಳ್ಳವರಿಗೆ ಒತ್ತೆ ಇಟ್ಟ ಕೇಂದ್ರ ಮತ್ತು ರಾಜ್ಯ ಸರಕಾರಗಳು ಎಸಗಿದ ಪಾಪಕ್ಕೆ ಮುಗ್ಧ ವಿದ್ಯಾರ್ಥಿ ನವೀನ್ ಬಲಿ ಆಗಿದೆ. ರಾಜಕಾರಣಿಗಳು, ಶ್ರೀಮಂತರಿಗೆ ಉನ್ನತ ಶಿಕ್ಷಣವು ದುಡ್ಡು ಸಂಗ್ರಹ ಮಾಡುವ ಹುಂಡಿಯಾಗಿದೆ. ಇದರಲ್ಲಿ ಅನುಮಾನವೇ ಇಲ್ಲ.
ದೂರದ ಉಕ್ರೇನ್ ದೇಶದಲ್ಲಿ ಜೀವ ಚೆಲ್ಲಿ ಹುಟ್ಟಿದೂರಿನಲ್ಲಿ ನಿಶ್ಚಲವಾಗಿ ಮಲಗಿದ್ದ ನವೀನ್ ಭಾರತದ ಆತ್ಮಸಾಕ್ಷಿಗೆ ಎದುರಾಗಿರುವ ದೊಡ್ಡ ಪ್ರಶ್ನೆ. ವಿದ್ಯೆ ಹೆಸರಿನಲ್ಲಿ ದಂಧೆ ನಡೆಸುವ ದುರಾಸೆಗೂ ಒಂದು ಸವಾಲು. ನೀಟ್ ವ್ಯವಸ್ಥೆ ಸಂಪೂರ್ಣ ವಿಫಲವಾಗಿದೆ. ನವೀನ್ ಸಾವಿನಿಂದ ಜ್ಞಾನೋದಯ ಆಗಿದೆ ಎನ್ನುವ ಮುಖ್ಯಮಂತ್ರಿಗಳು ವೈದ್ಯ ಶಿಕ್ಷಣ ಶುಲ್ಕ ಕಡಿಮೆ ಮಾಡುವ ಹೇಳಿಕೆ ನೀಡುತ್ತಾರೆ. ಆದರೆ, ನೀಟ್ ವಿರುದ್ಧ ಚಕಾರ ಎತ್ತುತ್ತಿಲ್ಲ, ಯಾಕೆ?
ಉಕ್ರೇನ್ ಮತ್ತು ನವೀನ್ ಸಾವಿನಿಂದ ಪಾಠ ಕಲಿತು ಅದಕ್ಕೊಂದು ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಹಾಗೂ ನೀಟ್ ನಿಂದ ಹೊರಬರಲು ವಿಧಾನ ಮಂಡಲದಲ್ಲಿ ನಿರ್ಣಯ ಕೈಗೊಳ್ಳಬೇಕು. ನೀಟ್ ಮೂಲಕ ವೈದ್ಯಕೀಯ ಸೀಟು ಸಿಗದೇ ಉಕ್ರೇನ್ ಗೆ ಹೋಗಿ ಉಸಿರು ಚೆಲ್ಲಿದ ನವೀನ್ ಆತ್ಮಕ್ಕೆ ಶಾಂತಿ ಸಿಗಬೇಕಾದರೆ ನೀಟ್ ವ್ಯವಸ್ಥೆಗೆ ಚರಮಗೀತೆ ಹಾಡಲೇಬೇಕು ಎಂದು ಮಾಜಿ ಸಿಎಂ ಕುಮಾರಸ್ವಾಮಿಯವರು ಸಿಎಂ ಬಸವರಾಜ ಬೊಮ್ಮಾಯಿಯವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.