ಉತ್ತರ ಪ್ರದೇಶದಲ್ಲಿ ಗೊಹತ್ಯೆ ಕಾನೂನು ತಂದ ಬಳಿಕ ಬೀಡಾಡಿ ದನಗಳ ಆಟಾಟೋಪಾದಿಂದ ಲಕ್ಷಾಂತರ ಸಣ್ಣ ರೈತರು ಅನುಭವಿಸುತ್ತಿರುವ ಸಮಸ್ಯೆ ಅಷ್ಟಿಷ್ಟಲ್ಲ. ಇದು ಈ ಬಾರಿಯ ಚುನಾವಣಾ ವಿಷಯ ಸಹ ಆಗಿದೆ. ಆದರೆ, ರೈತರಿಗೆ ಸಮಸ್ಯೆಯೇ ಆಗಿಲ್ಲ ಎಂದು ಬಿಜೆಪಿ ನಾಯಕರು ಹೇಳುತ್ತಾ ಬಂದಿದ್ದರು.
ಇವತ್ತು ಬಾರಾಬಾಂಕಿಯಲ್ಲಿ ನಿಗದಿಯಾಗಿದ್ದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರ್ಯಾಲಿ ಸ್ಥಳಕ್ಕೆ ರೈತರು ನೂರಾರು ಬೀಡಾಡಿ ದನಗಳನ್ನು ನುಗ್ಗಿಸಿದ್ದರು. ಯೋಗಿ ಆದಿತ್ಯನಾಥ್ ಕಾರ್ಯಕ್ರಮಕ್ಕೆ ಬರುವುದು ಒಂದು ಗಂಟೆ ತಡವಾಗಿತ್ತು. ಅಷ್ಟರೊಳಗೆ ಅಧಿಕಾರಿಗಳು ಬೀಡಾಡಿ ದನಗಳನ್ನು ಬೇರೆಡೆಗೆ ಸಾಗಿಸುವಲ್ಲಿ ಯಶಸ್ವಿಯಾದರು.
ಈ ವಿಚಾರ ಸಹಜವಾಗಿ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಕಿವಿಗೂ ತಲುಪಿದೆ. ಹೀಗಾಗಿಯೇ ಆಮೇತಿಯ ತಿಲೋಯಿ ಸಮಾವೇಶದಲ್ಲಿ ಗೋ ರಕ್ಷಣೆಯ ಮಾತಾಡಿದ್ದಾರೆ. ದೊಡ್ಡ ದೊಡ್ಡ ಗೋಶಾಲೆ ನಿರ್ಮಿಸುವ ಭಾರವಸೆ ನೀಡಿದ್ದಾರೆ. ಕಸಾಯಿಖಾನೆಗಳನ್ನು ಮುಚ್ಚಲಾಗಿದೆ. ಗೋ ಹತ್ಯೆ ಮಾಡಲು ಬಿಡುವುದಿಲ್ಲ. ಹಾಗಂತ ರೈತರ ಬೆಳೆಗಳಿಗೆ ಸಮಸ್ಯೆ ಆಗಲು ಬಿಡುವುದಿಲ್ಲ ಎಂದು ಯೋಗಿ ಭರವಸೆ ನೀಡಿದ್ದಾರೆ