ಕನ್ನಡ ಚಿತ್ರರಂಗದ ಹಿರಿಯ ನಟ ರಾಜೇಶ್ (87) ಇಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ವಯೋಸಹಜ ಖಾಯಿಲೆಗಳಿಂದ ಸಾವನ್ನಪ್ಪಿದ್ದಾರೆ.
ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಅವರಿಗೆ ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆಗೆ ಸ್ಪಂದಿಸದೆ ರಾಜನ್ ಅವರು ನಿಧನರಾಗಿದ್ದಾರೆ. ದಶಕಗಳಿಂದ ಚಿತ್ರರಂಗದಲ್ಲಿ ಅನುಭವ ಹೊಂದಿರುವ ಅವರು ವಯಸ್ಸಾದ ನಂತರ ನಟನೆಯಿಂದ ದೂರ ಉಳಿದುಕೊಂಡಿದ್ದರು. ಕಿಡ್ನಿ ವೈಫಲ್ಯ ಮತ್ತು ವಯೋಸಹಜ ಕಾಯಿಲೆಗಳಿಂದ ರಾಜೇಶ್ ಅವರು ಬಳಲುತ್ತಿದ್ದರು.
ಬೆಂಗಳೂರಿನಲ್ಲಿ ಜನಿಸಿದ ರಾಜೇಶ್ ಅವರ ಮೂಲ ಹೆಸರು ಮುನಿ ಚೌಡಪ್ಪ. 1960ರ ದಶಕದಲ್ಲಿ ಅವರು ಚಿತ್ರರಂಗಕ್ಕೆ ಕಾಲಿಟ್ಟ ನಂತರ ನೂರಾರು ಸಿನಿಮಾಗಳಲ್ಲಿ ನಟಿಸಿ ಜನಮನ ಗೆದ್ದರು. 1964 ರಲ್ಲಿ ನಿರ್ದೇಶಕ ಹುಣಸೂರು ಕೃಷ್ಣಮೂರ್ತಿ ಅವರ ‘ವೀರ ಸಂಕಲ್ಪ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಇತ್ತೀಷೆಗಷ್ಟೇ, ನಟ ಶ್ರೀನಿ ನಟನೆಯ ಓಲ್ಡ್ ಮಾಂಕ್ ಚಿತ್ರದಲ್ಲಿ ಬಹಳ ದಿನಗಳ ನಂತರ ಬಣ್ಣ ಹಚ್ಚಿದ್ದರು.
ನಟನಾಗುವ ಮೊದಲು ರಾಜೇಶ್ ಅವರು ಪಿಡಬ್ಲ್ಯೂಡಿ ಇಲಾಖೆಯಲ್ಲಿ ಶೀಘ್ರಲಿಪಿಕಾರರಾಗಿ ಕೆಲಸ ಮಾಡಿದ್ದರು. ಇವರು ಒಟ್ಟಾರೆಯಾಗಿ 150 ಚಿತ್ರಗಳಲ್ಲಿ ನಟಿಸಿದ್ದು, ಕರ್ನಾಟಕ ವಿಶ್ವವಿದ್ಯಾಲಯ 2012 ರಲ್ಲಿ ಇವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.