ನೀವು ಭೂಮಿಯನ್ನು ಖರೀದಿಸಿದ್ದರೆ ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಲು ನಿಮಗೆ ಸಮಸ್ಯೆ ಏನು..? ಎಂದು ಕರ್ನಾಟಕ ಹೈಕೋರ್ಟ್‌ನ ವಿಭಾಗೀಯ ಪೀಠ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರನ್ನು ಪ್ರಶ್ನಿಸಿದೆ.
ರಾಮನಗರ ಜಿಲ್ಲೆಯ ಬಿಡದಿ ಹೋಬಳಿಯ ಕೇತಗಾನಹಳ್ಳಿಯಲ್ಲಿರುವ ಜಮೀನಿಗೆ ಸಂಬಂಧಿಸಿದಂತೆ ದಾಖಲೆ ಹಾಜರುಪಡಿಸುವಂತೆ ಕುಮಾರಸ್ವಾಮಿ ಅವರಿಗೆ ತಹಶೀಲ್ದಾರ್ ಜಾರಿ ಮಾಡಿದ್ದ ನೋಟಿಸ್‌ಗೆ ತಡೆ ನೀಡಿದ್ದನ್ನು ಪ್ರಶ್ನಿಸಿ ಕರ್ನಾಟಕ ಸರ್ಕಾರ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಡಿ ಕೆ ಸಿಂಗ್ ಮತ್ತು ನ್ಯಾಯಮೂರ್ತಿ ರಾಜೇಶ್ ರೈ ಅವರಿದ್ದ ಪೀಠ ನಡೆಸಿತು.
ಮಂಡ್ಯದಲ್ಲಿ ನನ್ನ ವಿರೋಧಿಯಾಗಿದ್ದ ಮಾದೇಗೌಡ ಅವರು ರಾಮನಗರದಲ್ಲಿ ನಾನು ಸರ್ಕಾರದ ಭೂಮಿ ಒತ್ತುವರಿ ಮಾಡಿದ್ದೇನೆ ಎಂದು ದೂರು ನೀಡಿದ್ದರು. ಆ ದೂರನ್ನು ಆಧರಿಸಿ ತನಿಖೆ ನಡೆಸಲಾಗಿತ್ತು. ಸರ್ಕಾರ ಭೂಮಿ ಮಂಜೂರು ಮಾಡಿದ ವ್ಯಕ್ತಿಗಳಿಂದ ಕುಮಾರಸ್ವಾಮಿ ಭೂಮಿ ಖರೀದಿಸಿದ್ದಾರೆ
ಎಂದು ಕುಮಾರಸ್ವಾಮಿ ಪರ ವಕೀಲ ಉದಯ್ ಹೊಳ್ಳ ವಾದ ಮಂಡಿಸಿದರು.
ಜಿಲ್ಲಾಧಿಕಾರಿ ಸಲ್ಲಿಸಿದ ವರದಿ ಎಲ್ಲಿ..?
ಎಂದು ನ್ಯಾಯಪೀಠ ರಾಜ್ಯ ಸರ್ಕಾರವನ್ನು ಪ್ರಶ್ನಿಸಿತು. ಸರ್ಕಾರ ಅದನ್ನು ಹಾಜರುಪಡಿಸಬೇಕು ಎಂದು ಹೊಳ್ಳ ಅವರು ವಾದಿಸಿದರು.
ನಾವು ಜಿಲ್ಲಾಧಿಕಾರಿ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುತ್ತೇವೆ. ೨೨ ಎಕರೆ ಕ್ರಯಪತ್ರ ಇದೆ ಎಂದು ಕುಮಾರಸ್ವಾಮಿಯವರು ಹೇಳುತ್ತಿದ್ದಾರೆ. ಆದರೆ ೬.೦೬ ಎಕರೆಗೆ ಕ್ರಯಪತ್ರ ಇಲ್ಲ. ಕ್ರಯಪತ್ರ ಇಲ್ಲದಿರುವ ಆ ಜಮೀನಿಗೆ ಸಂಬಂಧಿಸಿದ ದಾಖಲೆಗಳ ಬಗ್ಗೆ ನಾವು ತನಿಖೆ ನಡೆಸುತ್ತಿದ್ದೇವೆ. ಒಂದು ವೇಳೆ ಕ್ರಯಪತ್ರದ ದಾಖಲೆಯನ್ನು ಕುಮಾರಸ್ವಾಮಿ ಸಲ್ಲಿಸಿದರೆ ನಾವು ತನಿಖೆ ಕೈ ಬಿಡುತ್ತೇವೆ. ಕ್ರಯಪತ್ರವೇ ಇಲ್ಲದೇ ಇರುವ ಆ ಜಮೀನಿನಲ್ಲಿ ಖರಾಬು ಭೂಮಿ ಮತ್ತು ಕೆರೆ ಇದೆ
ಎಂದು ರಾಜ್ಯ ಸರ್ಕಾರದ ಪರ ಹಾಜರಾಗಿದ್ದ ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ವಾದಿಸಿದರು.
ನೀವು ಭೂಮಿ ಖರೀದಿಸಿದ್ದರೆ ಆ ಬಗ್ಗೆ ದಾಖಲೆಗಳನ್ನು ಸಲ್ಲಿಸಲು ನಿಮಗೆ ಸಮಸ್ಯೆ ಏನು..?
ಎಂದು ನ್ಯಾಯಪೀಠವು ಕುಮಾರಸ್ವಾಮಿಯವರನ್ನು ಪ್ರಶ್ನಿಸಿತು.
ಇದೆಲ್ಲವೂ ರಾಜಕೀಯ ಪ್ರೇರಿತ ಪ್ರಕರಣ. ಇದೆಲ್ಲವನ್ನೂ ತೋರಿಸುತ್ತೇವೆ. ೪೫ ವರ್ಷಗಳ ಹಿಂದೆ ಭೂಮಿಯನ್ನು ಖರೀದಿಸಿದ್ದೇವೆ. ಒತ್ತುವರಿಯಾಗಿದ್ದರೆ ಅದನ್ನು ಸಮರ್ಥಿಸುವ ವ್ಯಕ್ತಿ ನಾನಲ್ಲ
ಎಂದು ಕುಮಾರಸ್ವಾಮಿ ಪರ ವಕೀಲರಾದ ಉದಯ್ ಹೊಳ್ಳ ವಾದಿಸಿದರು.
ನಿಮ್ಮ ವಾದದಲ್ಲಿ ಸತ್ಯಾಂಶ ಇರಬಹುದು, ನೋಡೋಣ
ಎಂದ ಹೈಕೋರ್ಟ್ ವಿಚಾರಣೆಯನ್ನು ೧೦ ದಿನಗಳವರೆಗೆ ಮುಂದೂಡಿತು.
ರಾಮನಗರ ಜಿಲ್ಲಾಧಿಕಾರಿಯು ಕೇತಗಾನಹಳ್ಳಿಯಲ್ಲಿ ಸರ್ವೆ ನಂಬರ್ ೮,೯,೧೦,೧೬,೧೭ ಮತ್ತು ೭೯ರಲ್ಲಿರುವ ಜಮೀನಿಗೆ ಸಂಬಂಧಿಸಿದಂತೆ ನಡೆಸಿರುವ ತನಿಖಾ ವರದಿಯನ್ನು ಹೈಕೋರ್ಟ್‌ಗೆ ಸಲ್ಲಿಸಬೇಕು ಎಂದು ಇವತ್ತು ವಿಚಾರಣೆ ವೇಳೆ ಹೈಕೋರ್ಟ್ ಆದೇಶಿಸಿದೆ.


