ಭಾರತೀಯ ಚುನಾವಣಾ ಆಯೋಗ (Election Commission of India) ನಾಳೆಯಿಂದ 9 ರಾಜ್ಯಗಳು ಮತ್ತು 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾರರ ಪಟ್ಟಿ (Electoral Roll) ಪರಿಷ್ಕರಣೆಗಾಗಿ ವಿಶೇಷ ತೀವ್ರಸ್ವರೂಪದ ಅಭಿಯಾನ (SIR) ಆರಂಭಿಸಲಿದೆ.
ಕೇಂದ್ರಾಡಳಿತ ಪ್ರದೇಶಗಳಾದ ಅಂಡಮಾನ್ ಮತ್ತು ನಿಕೋಬಾರ್, ಲಕ್ಷದ್ವೀಪ, ಪುದುಚೇರ, 9 ರಾಜ್ಯಗಳಾದ ಛತ್ತೀಸ್‌ಗಢ, ಗುಜರಾತ್, ಗೋವಾ, ಕೇರಳ, ಮಧ್ಯಪ್ರದೇಶ, ರಾಜಸ್ಥಾನ, ತಮಿಳುನಾಡು ಮತ್ತು ಉತ್ತರಪ್ರದೇಶದಲ್ಲಿ ನಾಳೆಯಿಂದಲೇ ಪ್ರಕ್ರಿಯೆ ಆರಂಭವಾಗಲಿದೆ.
ಈ ಒಂಭತ್ತು ರಾಜ್ಯಗಳು ಮತ್ತು 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಟ್ಟು 50 ಕೋಟಿ 99 ಲಕ್ಷ ಮತದಾರರಿದ್ದಾರೆ.
1951ರಿಂದ 2004ರವರೆಗೆ 8 ಬಾರಿ ದೇಶದಲ್ಲಿ ವಿಶೇಷ ತೀವ್ರ ಪರಿಷ್ಕರಣೆ ಕೈಗೊಳ್ಳಲಾಗಿದೆ. 21 ವರ್ಷಗಳ ಹಿಂದೆ 2002-2004 ಅವಧಿಯಲ್ಲಿ ದೇಶದಲ್ಲಿ ಎಸ್‌ಐಆರ್ ನಡೆದಿತ್ತು.
ಭಾರತದ ನಾಗರಿಕರಾಗಿರುವ 18 ವರ್ಷ ತುಂಬಿರುವ ಕ್ಷೇತ್ರದ ನಿವಾಸಿಗಳು ಭಾರತದ ಸಂವಿಧಾನದ 326ರ ವಿಧಿ ಪ್ರಕಾರ ಅರ್ಹ ಮತದಾರರಾಗಿರುತ್ತಾರೆ.
ನಾಳೆಯಿಂದ ಎಸ್‌ಐಆರ್‌ಗೆ (SIR) ಸಂಬಂಧಿಸಿದಂತೆ ನವೆಂಬರ್ 3ರವರೆಗೆ ತರಬೇತಿ ನೀಡಲಾಗುತ್ತದೆ. ನವೆಂಬರ್ 3 ರಿಂದ ಡಿಸೆಂಬರ್ 4 ರವರೆಗೆ ಪ್ರತಿ ಮನೆಗೂ ಭೇಟಿಯನ್ನು ನೀಡಲಾಗುತ್ತದೆ.
ಡಿಸೆಂಬರ್‌ರಂದು ಮತದಾರರ ಕರಡು ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ಡಿಸೆಂಬರ್ 9ರಿಂದ ಜನವರಿ 8, 2026ರವರೆಗೆ ಆಕ್ಷೇಪಣೆ ಸಲ್ಲಿಕೆಗೆ ಅವಕಾಶವಿದೆ. ಡಿಸೆಂಬರ್ 9 ರಿಂದ ಜನವರಿ 31 ರವರೆಗೆ ವಾದಗಳನ್ನು ಆಲಿಸಿ ದೃಢೀಕರಿಸಲಾಗುತ್ತದೆ.
ಫೆಬ್ರವರಿ 7 ರಂದು ಮತದಾರರ ಅಂತಿಮ ಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಚುನಾವಣಾ ಆಯೋಗ ಹೇಳಿದೆ.


