ಪರಪ್ಪನ ಅಗ್ರಹಾರ ಕಾರಾಗೃಹದ (Parappana Agrahara Prison) ಅಧೀಕ್ಷಕ ಮ್ಯಾಗೇರಿ ಮತ್ತು ಸಹಾಯಕ ಅಧೀಕ್ಷಕ ಅಶೋಕ್ ಭಜಂತ್ರಿಯನ್ನು ರಾಜ್ಯ ಸರ್ಕಾರ ಅಮಾನತುಗೊಳಿಸಿದೆ. ಅಲ್ಲದೇ ಕಾರಾಗೃಹದ ಮುಖ್ಯ ಅಧೀಕ್ಷಕ ಕೆ.ಸುರೇಶ್ ಅವರನ್ನು ವರ್ಗಾವಣೆಗೊಳಿಸಲಾಗಿದೆ.
ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕಾನೂನು ಬಾಹಿರ ಚಟವಟಿಕೆಗಳು ನಡೆದಿರುವ ಹಿನ್ನೆಲೆಯಲ್ಲಿ ‘ರಾಜ್ಯದ ಕಾರಾಗೃಹಗಳಲ್ಲಿನ ಆಡಳಿತ ಮತ್ತು ಭದ್ರತೆಯ’ ಕುರಿತಂತೆ ಕರ್ನಾಟಕ ರಾಜ್ಯ ಕಾರಾಗೃಹ ಮತ್ತು ಸುಧಾರಣಾ ಸೇವೆ ಇಲಾಖೆಯ ಅಧಿಕಾರಿಗಳೊಂದಿಗೆ ಬೆಂಗಳೂರಿನ ಗಾಂಧಿನಗರದಲ್ಲಿರುವ ಕಾರಾಗೃಹಗಳ ಪ್ರಧಾನ ಕಚೇರಿಯಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸಭೆ (Dr.G.Parameshwar) ನಡೆಸಿದರು.
ಪ್ರಾಥಮಿಕ ಮಾಹಿತಿ ಆಧರಿಸಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಇಬ್ಬರು ಅಧಿಕಾರಿಗಳನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಕಾರಗೃಹದ ಚೀಫ್ ಸೂಪರಿಂಟೆಂಡೆಂಟ್‌ನನ್ನು ವರ್ಗಾಯಿಸಲಾಗಿದೆ. ಚೀಫ್ ಸೂಪರಿಂಟೆಂಡೆಂಟ್ ಹುದ್ದೆಗೆ ಐಪಿಎಸ್ ಅಧಿಕಾರಿಯನ್ನು ನಿಯೋಜಿಸಲಾಗುವುದು.
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದಂತೆ ರಾಜ್ಯದ ಎಲ್ಲ ಕಾರಾಗೃಹಗಳನ್ನು ಪರಿಶೀಲನೆ ನಡೆಸಲು ಎಡಿಜಿಪಿ ಆರ್.ಹಿತೇಂದ್ರ ನೇತೃತ್ವದಲ್ಲಿ ಹೈ ಪವರ್ ಕಮಿಟಿ ರಚಿಸಿ, ಸಮಗ್ರವಾದ ವರದಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಗೃಹ ಸಚಿವರು ಹೇಳಿದ್ದಾರೆ.
ಒಂದೇ ಕಡೆ ಐದು ವರ್ಷ ಕಾರ್ಯನಿರ್ವಹಿಸಿದ ಕಾರಾಗೃಹ ಅಧಿಕಾರಿಗಳನ್ನು ಕೂಡಲೇ ವರ್ಗಾವಣೆ ಮಾಡಲು ಸೂಚನೆ ನೀಡಲಾಗಿದೆ. ಕಾರಾಗೃಹಗಳಲ್ಲಿ ಖಾಲಿ ಇರುವ 197 ವಾರ್ಡರ್, 22 ಇನ್‌ಸ್ಟ್ರಕ್ಟರ್, 3 ಜನ ಅಸಿಸ್ಟೆಂಟ್ ಸೂಪರಿಂಟೆಂಡೆಂಟ್ ಹುದ್ದೆಗಳ ನೇಮಕಾತಿಗೆ ಅನುಮತಿ ನೀಡಲಾಗಿದೆ. 983 ವಾರ್ಡರ್, 17 ಜನ ಜೈಲರ್ಸ್‌ಗಳ ನೇಮಕಾತಿಗೆ, ಶೀಘ್ರ ಕ್ರಮ ವಹಿಸಲಾಗುವುದು ಎಂದೂ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಗೃಹ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್, ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ ಡಾ. ಎಂ.ಎ.ಸಲೀಂ, ಗೃಹ ಇಲಾಖೆಯ ಕಾರ್ಯದರ್ಶಿ ಕೆ.ವಿ.ಶರತ್‌ಚಂದ್ರ, ಬೆಂಗಳೂರು ನಗರ ಪೊಲೀಸ್ ಅಯುಕ್ತ ಸೀಮಾಂತ್ ಕುಮಾರ್, ಐಎಸ್‌ಡಿ ವಿಭಾಗದ ಎಡಿಜಿಪಿ ಚಂದ್ರಶೇಖರ್ ಇದ್ದರು.


