ಅಕ್ಷಯ್ ಕುಮಾರ್.ಯು. – ಮುಖ್ಯ ಸಂಪಾದಕರು, ಪ್ರತಿಕ್ಷಣ
ಕಾಂಗ್ರೆಸ್‌ನವರ ಆದರಣೀಯ ನಾಯಕ ಜವಾಹರ್‌ಲಾಲ್ ನೆಹರು ಅವರ ಜನ್ಮದಿನಂದೇ ಕಾಂಗ್ರೆಸ್‌ನ ನಾಯಕರು ಮತ್ತು ಕಾರ್ಯಕರ್ತರಲ್ಲಿ ಸೂತಕದ ಛಾಯೆ ಆವರಿಸಿದೆ.
ಬಿಹಾರದಲ್ಲಿ ಕಾಂಗ್ರೆಸ್ ಹೀನಾತಿಹೀನವಾಗಿ ಸೋತಿದ್ದು ಮಾತ್ರವಲ್ಲ, ಹೇಳ ಹೆಸರಿಲ್ಲದಂತೆ ನೆಲಕಚ್ಚಿದೆ. ಚುನಾವಣಾ ಆಯೋಗದ ಅಧಿಕೃತ ಅಂಕಿಅಂಶಗಳ ಒಟ್ಟು 223 ವಿಧಾನಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಗೆದ್ದಿರುವುದು ಕೇವಲ 4 ವಿಧಾನಸಭಾ ಕ್ಷೇತ್ರಗಳಲ್ಲಷ್ಟೇ.
ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 60 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿತ್ತು . ಇವುಗಳಲ್ಲಿ ಕಾಂಗ್ರೆಸ್ ಗೆದ್ದಿರುವುದು 4 ಕ್ಷೇತ್ರಗಳಲ್ಲಷ್ಟೇ ಅಂದರೆ ಶೇಕಡಾ ಕೇವಲ 2.4ರಷ್ಟು ಮಾತ್ರ. ಇದು ಕಾಂಗ್ರೆಸ್ ಸಾಧನೆಯಾಗಿದೆ. ಅಸಾದುದ್ದೀನ್ ಓವೈಸಿ ಪಕ್ಷ ಎಐಂಎಂಐ 5 ಕ್ಷೇತ್ರಗಳಲ್ಲಿ ಗೆದ್ದರೆ, ಜಿತನ್ ರಾಂ ಮಾಂಝಿ ಅವರ ಪಕ್ಷ 5 ಕ್ಷೇತ್ರಗಳಲ್ಲಿ ಗೆದ್ದಿವೆ. ಈ ಮೂಲಕ ಕಾಂಗ್ರೆಸ್‌ಗೆ ಅಂಟಿಕೊಂಡಿರುವ ಸೋಲಿನ ಸೋಂಕು ಗುಣಪಡಿಸಲಾಗದ ಹಂತಕ್ಕೆ ಹಬ್ಬಿದೆ.

ವಿಚಿತ್ರ ಎಂದರೆ ಕಿರಿ ಖರ್ಗೆ, ಕರ್ನಾಟಕ ಕಾಂಗ್ರೆಸ್‌ನ ಪ್ರಮುಖ ಭಾಷಣಕಾರ, ಎರಡೆರಡು ಖಾತೆಗಳ ಸಚಿವ ಪ್ರಿಯಾಂಕ್ ಖರ್ಗೆಯ ತಂದೆ ಮಲ್ಲಿಕಾರ್ಜುನ ಖರ್ಗೆ ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾದ ಬಳಿಕ ಕಾಂಗ್ರೆಸ್‌ಗೆ ಹೊಸ ಜೀವ ಕಳೆ ಬರುವುದು ಬಿಡಿ ಇನ್ನಷ್ಟು ಪಾತಾಳಕ್ಕೆ ಕುಸಿದು ಇನ್ನು ಈ ಜೀವಮಾನದಲ್ಲೇ ಕಾಂಗ್ರೆಸ್ ಎದ್ದು ಬರಲ್ಲ ಎನ್ನುವ ಸ್ಥಿತಿಗೆ ತಲುಪಿದೆ.
2022ರಲ್ಲಿ ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷರಾದ ವೇಳೆ ಖರ್ಗೆ ನಾಯಕತ್ವವನ್ನು ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ಸ್ವಯಂ ಸಂಭ್ರಮಿಸಿಕೊಂಡಿದ್ದರು. 1) 20 ವರ್ಷಗಳ ಬಳಿಕ ಕಾಂಗ್ರೆಸ್‌ನ ರಾಷ್ಟ್ರೀಯ ಚುಕ್ಕಾಣಿ ನೆಹರು ಕುಟುಂಬದವರನ್ನು ಹೊರತುಪಡಿಸಿ ಉಳಿದವರಿಗೂ ಸಿಕ್ಕಿದೆ ಎನ್ನುವುದು 2) ಮಲ್ಲಿಕಾರ್ಜುನ ಖರ್ಗೆ ಅವರ ದೀರ್ಘಾವಧಿಯ ಪಕ್ಷದ ಸೇವೆಗೆ ಪಕ್ಷ ಸೂಕ್ತ ಸ್ಥಾನಮಾನವನ್ನೇ ಕೊಟ್ಟಿದೆ ಎಂದೂ 3) ಖರ್ಗೆ ಅಧ್ಯಕ್ಷರಾಗಿದ್ದರಿಂದ ರಾಷ್ಟ್ರೀಯ ಮಟ್ಟದಲ್ಲಿ ದಲಿತ ಮತಗಳ ಕ್ರೋಢೀಕರಣಕ್ಕೆ ಪಕ್ಷಕ್ಕೆ ಲಾಭವಾಗಲಿದೆ ಎಂದು.
ಖರ್ಗೆ ಕಾಂಗ್ರೆಸ್‌ನ ರಾಷ್ಟ್ರೀಯ ನಾಯಕತ್ವ ವಹಿಸಿಕೊಂಡಿದ್ದು 2022ರಲ್ಲಿ. ಈ ಬಳಿಕ ನಡೆದ ಚುನಾವಣೆಗಳಲ್ಲಿ ಕಾಂಗ್ರೆಸ್ ಗೆದ್ದಿದ್ದು ಕರ್ನಾಟಕ, ತೆಲಂಗಾಣ, ಹಿಮಾಚಲಪ್ರದೇಶದಲ್ಲಿ ಮಾತ್ರ. ಆದರೆ ಈ ಮೂರು ರಾಜ್ಯಗಳಲ್ಲಿ ಗೆಲುವುಗಳನ್ನು ಹೊರತುಪಡಿಸಿದರೆ ಉಳಿದ ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್‌ನ ಪರಿಸ್ಥಿತಿ ಭೀಕರವಾಗಿದೆ.
1) 2022ರಲ್ಲಿ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು 183 ಸ್ಥಾನಗಳ ಪೈಕಿ ಕಾಂಗ್ರೆಸ್ ಗೆದ್ದಿದ್ದು ಕೇವಲ 12 ಸ್ಥಾನಗಳಲ್ಲಿ ಮಾತ್ರ. ಇದು ಗುಜರಾತ್‌ನ ರಾಜಕಾರಣದಲ್ಲಿ ಕಾಂಗ್ರೆಸ್‌ನ ಸಾರ್ವಕಾಲಿಕ ಕಳಪೆ ಪ್ರದರ್ಶನವಾಗಿತ್ತಲ್ಲದೇ ವಿಧಾನಸಭೆಯಲ್ಲಿ ಕಾಂಗ್ರೆಸ್‌ಗೆ ಅಧಿಕೃತ ವಿರೋಧ ಪಕ್ಷದ ಸ್ಥಾನಮಾನ ಕೂಡಾ ಸಿಗಲಿಲ್ಲ.
2) ರಾಜಸ್ಥಾನದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 67 ಸೀಟುಗಳೊಂದಿಗೆ ಅಧಿಕಾರವನ್ನು ಕಳೆದುಕೊಳ್ಳಬೇಕಾಯಿತು.
3) ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು 230 ಕ್ಷೇತ್ರಗಳ ಪೈಕಿ ಬಿಜೆಪಿ 165 ಸ್ಥಾನಗಳನ್ನು ಗೆದ್ದು ಪ್ರಚಂಡ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬಂತು. ಇಲ್ಲೂ ಕಾಂಗ್ರೆಸ್ ಅತ್ಯಂತ ನಿರಾಶದಾಯಕ ಪ್ರದರ್ಶನ ನೀಡಿತು.
4) 2024ರಲ್ಲಿ ಆಂಧ್ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಒಂದೇ ಒಂದು ಸ್ಥಾನವನ್ನೂ ಗೆಲ್ಲಲಿಲ್ಲ.
5) ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಸತತ ಕಳಪೆ ಪ್ರದರ್ಶನ ಮುಂದುವರೆಸ್ತು ಖರ್ಗೆ ಅವರ ಪಕ್ಷ. ಈ ಬಾರಿ ಚುನಾವಣೆಯಲ್ಲೂ ಒಂದೇ ಒಂದು ಕ್ಷೇತ್ರವನ್ನು ಗೆಲ್ಲಲಿಲ್ಲ ಕಾಂಗ್ರೆಸ್.
7) ಹರಿಯಾಣ ವಿಧಾನಸಭಾ ಚುನಾವಣೆಯಲ್ಲೂ ಸತತ ಮೂರನೇ ಬಾರಿಗೆ ಬಿಜೆಪಿ ಎದುರು ಕಾಂಗ್ರೆಸ್ ಅಧಿಕಾರವನ್ನು ಕಳೆದುಕೊಳ್ತು.
8) ಛತ್ತೀಸ್ ಗಢ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು 90 ಶಾಸಕರ ಕ್ಷೇತ್ರದಲ್ಲಿ ಬಿಜೆಪಿ 54 ಶಾಸಕರೊಂದಿಗೆ ಅಧಿಕಾರಕ್ಕೆ ಬಂದರೆ, ಕಾಂಗ್ರೆಸ್ 35 ಸ್ಥಾನಗಳನ್ನಷ್ಟೇ ಗೆದ್ದುಕೊಳ್ತು.
9) ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಂತು ಕಾಂಗ್ರೆಸ್‌ನ ಪಾಲಿಗೆ ಮರ್ಮಾಘಾತ. 288 ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಗೆದ್ದಿದ್ದು ಕೇವಲ 16ರಲ್ಲಿ ಮಾತ್ರ (ಅಜಿತ್ ಪವಾರ್ ಬಣದ ಎನ್‌ಸಿಪಿ ಕಾಂಗ್ರೆಸ್ ಎರಡೂವರೆ ಪಟ್ಟು ಅಧಿಕ ಶಾಸಕ ಸ್ಥಾನವನ್ನು ಗೆದ್ದುಕೊಂಡಿತ್ತು).
10) ಜಮ್ಮು-ಕಾಶ್ಮೀರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕೇವಲ 6 ಸ್ಥಾನಗಳನ್ನು ಗೆದ್ದು ಇಂಡಿಯಾ ಮೈತ್ರಿಕೂಟದೊಳಗೆಯೇ ಕುಹುಕಕ್ಕೆ ಒಳಗಾಯಿತು. ವಿಚಿತ್ರ ಎಂದರೆ ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯ ಮೊದಲ ಹಂತ ಮುಕ್ತಾಯವಾಗಿದ್ದೇ ಕಾಶ್ಮೀರದಲ್ಲಿ. ಆದರೆ ಅಲ್ಲೂ ಕಾಂಗ್ರೆಸ್‌ನ್ನು ಜನ ಒಪ್ಪಿಕೊಳ್ಳಲಿಲ್ಲ.
ಕಾಂಗ್ರೆಸ್‌ನ ಈ ಸೋಲುಗಳೆಲ್ಲ ಕೇವಲ ಚುನಾವಣಾ ಸೋಲಾಗಿ ಉಳಿದುಕೊಂಡಿಲ್ಲ. ಕಾಂಗ್ರೆಸ್‌ನ ಈ ಸೋಲುಗಳೆಲ್ಲ ಹಲವು ರಾಜ್ಯಗಳಲ್ಲಿ ದೀರ್ಘಾವಧಿಗೆ ಅಧಿಕಾರ ಸಿಗದೇ ಕಂಗೆಟ್ಟಿರುವ ಕಾಂಗ್ರೆಸ್‌ನ ಇನ್ನಷ್ಟು ಕಂಗೆಡಿಸಿದೆ. ಉದಾಹರಣೆಗೆ ಗುಜರಾತ್, ಮಧ್ಯಪ್ರದೇಶ, ಹರಿಯಾಣ, ದೆಹಲಿ, ಜಮ್ಮುಕಾಶ್ಮೀರ, ಆಂಧ್ರಪ್ರದೇಶ. ಈ ದೊಡ್ಡ ರಾಜ್ಯಗಳಲ್ಲಿ ಕಾಂಗ್ರೆಸ್ ಚೇತರಿಸಿಕೊಳ್ಳುವುದಿರಲೀ, ಈ ರಾಜ್ಯಗಳಲ್ಲಿ ಇನ್ನಷ್ಟು ಪಾತಾಳಕ್ಕೆ ಕುಸಿದಿದೆ.
ಲೋಕಸಭಾ ಚುನಾವಣೆಯಲ್ಲಿ 100ರ ಗಡಿ ದಾಟಲಾಗದೇ ಹಲವು ರಾಜ್ಯಗಳಲ್ಲಿ ಒಂದೇ ಒಂದು ಲೋಕಸಭಾ ಕ್ಷೇತ್ರವನ್ನೂ ಗೆದ್ದಿಲ್ಲ ಕಾಂಗ್ರೆಸ್.
ರಾಷ್ಟ್ರ ಮಟ್ಟದಲ್ಲಿ ಇಂಡಿಯಾ ಮೈತ್ರಿಕೂಟದ ನಾಯಕತ್ವ ವಹಿಸಿಕೊಂಡಿರುವ ಕಾಂಗ್ರೆಸ್‌ಗಾಗುತ್ತಿರುವ ಈ ಹೀನಾತಿಹೀನ, ಅತ್ಯಂತ ರಣಭೀಕರ ಸೋಲುಗಳನ್ನು ಗಮನಿಸಿದ್ರೆ ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ ಅಧ್ಯಕ್ಷರಾಗಿದ್ದರಿಂದ ಪಕ್ಷಕ್ಕೆ ಏನೂ ಲಾಭವಾಗಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ.
ಆದರೆ ಒಬ್ಬರಿಗೆ ಮಾತ್ರ ಭರಪೂರ ಲಾಭ ಆಗಿದೆ, ಅದು ಹಿರಿ ಖರ್ಗೆಯ ಮಗ ಕಿರಿ ಖರ್ಗೆ ಪ್ರಿಯಾಂಕ್ ಖರ್ಗೆಗೆ. ಕಲ್ಯಾಣ ಕರ್ನಾಟಕದ ಹಿರಿಯ ಕಾಂಗ್ರೆಸ್ ಶಾಸಕರನ್ನೆಲ್ಲ ಕಡೆಗಣಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದಲ್ಲಿ ಸತತ ಎರಡನೇ ಬಾರಿಯೂ ಸಂಪನ್ಮೂಲ ಭರಿತ ಎರಡು ದೊಡ್ಡ ಖಾತೆಗಳನ್ನು (ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್, ಮಾಹಿತಿ ಮತ್ತು ತಂತ್ರಜ್ಞಾನ ಖಾತೆ) ಗಿಟ್ಟಿಸಿಕೊಂಡಿದ್ದಾರೆ. ಈ ಎರಡೂ ದೊಡ್ಡ ಖಾತೆಗಳು ಕಿರಿ ಖರ್ಗೆಗೆ ಸಿಕ್ಕಿದ್ದು ಅಪ್ಪ ಹಿರಿ ಖರ್ಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಂಬ ಏಕಮಾತ್ರ ಕಾರಣಕ್ಕೆ.


