ಅಕ್ಷಯ್ ಕುಮಾರ್.ಯು. – ಮುಖ್ಯ ಸಂಪಾದಕರು, ಪ್ರತಿಕ್ಷಣ
ಬಿಹಾರದಲ್ಲಿ ಕಾಂಗ್ರೆಸ್‌ನ್ನು ಬಿಲ್‌ಕುಲ್ ನಂಬದ ಮತದಾರರು ಬಾಸುಂಡೆ ಬರುವಂತೆ ಗೂಸಾ ಕೊಟ್ಟಿದ್ದಾರೆ. ಕಾಂಗ್ರೆಸ್‌ನ ಈ ಹೀನಾತಿಹೀನ ಸೋಲು ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರಲ್ಲಿ ಸೂತಕವನ್ನೇ ಉಂಟು ಮಾಡಿರಬಹುದು, ಆದರೆ ಬಿಹಾರದಲ್ಲಿನ ಈ ಫಲಿತಾಂಶ ಕರ್ನಾಟಕ ರಾಜಕಾರಣದ ಅಪ್ಪ-ಮಗ ಜೋಡಿಗೆ ಎಲ್ಲಿಲ್ಲದ ಖುಷಿ ಮತ್ತು ಸಮಾಧಾನ ಹಾಗೂ ನೆಮ್ಮದಿಯನ್ನು ನೀಡಿದೆ. ಆ ಜೋಡಿ ಬೇರೆ ಯಾರೂ ಅಲ್ಲ, ಅವರೇ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಯತೀಂದ್ರ ಸಿದ್ದರಾಮಯ್ಯ.
ನೆಹರು ಜನ್ಮದಿನವಾದ ಇವತ್ತು ಬೆಳಗ್ಗೆ ಕಾಂಗ್ರೆಸ್ಸಿಗರು ಮಕ್ಕಳ ದಿನಾಚರಣೆಯ ಖುಷಿಯಲ್ಲಿದ್ದರು. ಆದರೆ ಬಿಹಾರದಲ್ಲಿ ಮತದಾರರು ಕೊಟ್ಟ ಗೂಸಾ ಅನಿರೀಕ್ಷಿತ ರೀತಿಯಲ್ಲಿ ಭಾರೀ ಬೀಳುತ್ತಿದ್ದಂತೆ ಕಾಂಗ್ರೆಸ್‌ನಲ್ಲಿ ಆ ಖುಷಿಯೆಲ್ಲ ಮರೆಯಾಯಿತು, ಆದರೆ ಅಪ್ಪ-ಮಗ ಇವರಿಬ್ಬರನ್ನು ಮಿಕ್ಕಿ.
ಕಾಂಗ್ರೆಸ್‌ನವರೇ ಹುಟ್ಟಿಸಿರುವ ನವೆಂಬರ್ ಕ್ರಾಂತಿಗೆ ಬಿಹಾರದಲ್ಲಿ ಕಾಂಗ್ರೆಸ್‌ಗೆ ಬಂದಿರುವ ಈ ಐತಿಹಾಸಿಕ ದುರ್ಗತಿಯೇ ವಿರಾಮ ತಂದಿಟ್ಟಿದೆ.
ಹಿರಿ ಖರ್ಗೆ ಎನ್ನಿಸಿಕೊಂಡಿರುವ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ನೇತೃತ್ವದಲ್ಲಿ ಬಿಹಾರದಲ್ಲಿ ಕಾಂಗ್ರೆಸ್‌ಗೆ ಬಂದೆಗಿರುವ ದುರ್ಗತಿ ಹೈಕಮಾಂಡ್ ಎನ್ನುವ ಕಾಂಗ್ರೆಸ್‌ನ ದೆಹಲಿ ನಾಯಕರ ರೆಕ್ಕೆ-ಪುಕ್ಕಗಳನ್ನು ಕಿತ್ತು ಎಲ್ಲರನ್ನೂ ಮೂಲೆಗೆ ಕೂರಿಸಿದೆ. ಕಾಂಗ್ರೆಸ್‌ನಲ್ಲಿ ಕರ್ನಾಟಕದ ಪಾಲಿಗೆ ಹೈಕಮಾಂಡ್ ಎಂದರೆ ಅದು ಖರ್ಗೆ, ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ, ಕೆ.ಸಿ.ವೇಣುಗೋಪಾಲ ಮತ್ತು ಕರ್ನಾಟಕ ಕಾಂಗ್ರೆಸ್‌ನ ಉಸ್ತುವಾರಿ ರಣದೀಪ್ ಸುರ್ಜೆವಾಲಾ.
ಇದರಲ್ಲಿ ಖರ್ಗೆ, ವೇಣುಗೋಪಾಲ ಮತ್ತು ರಣದೀಪ್ ಸುರ್ಜೆವಾಲಾ ಈ ಮೂವರು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಣದಲ್ಲಿದ್ದರೆ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕ ಗಾಂಧಿಗೆ ಖರ್ಗೆ, ವೇಣುಗೋಪಾಲ, ಸುರ್ಜೆವಾಲಾ ಈ ಮೂವರೇ ಮಾರ್ಗದರ್ಶಕರು, ಸಲಹೆಗಾರರು.
ಕರ್ನಾಟಕದಲ್ಲಿ ಮುಖ್ಯಮಂತ್ರಿ ಸ್ಥಾನದಿಂದ ಸಿದ್ದರಾಮಯ್ಯ ಅವರನ್ನು ಇಳಿಸಬೇಕು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜೊತೆಗೆ ಟೊಂಕ ಕಟ್ಟಿ ಮುಂಚೂಣಿಯಲ್ಲಿ ನಿಂತವರು ವೇಣುಗೋಪಾಲ ಮತ್ತು ರಣದೀಪ್ ಸುರ್ಜೆವಾಲಾ. ಈ ತಂತ್ರಗಾರಿಕೆಯಲ್ಲಿ ತೆರೆಯ ಹಿಂಭಾಗದಲ್ಲಿ ನಿರ್ದೇಶನ ಮಾಡಿದರು ಹಿರಿ ಖರ್ಗೆ ಮಲ್ಲಿಕಾರ್ಜುನ ಖರ್ಗೆ.
ಕೇರಳದಲ್ಲಿ ಕಾಂಗ್ರೆಸ್‌ನ್ನು ಗೆಲ್ಲಿಸಕ್ಕಾಗದಿದ್ದರೂ, ಹರಿಯಾಣದಲ್ಲಿ ಕಾಂಗ್ರೆಸ್‌ನ್ನು ಗೆಲ್ಲಿಸಕ್ಕಾಗದಿದ್ದರೂ ವೇಣುಗೋಪಾಲ ಮತ್ತು ಸುರ್ಜೆವಾಲಾ ಇಬ್ಬರೂ ಕನಕಪುರದ ಶಾಸಕರೂ ಆಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜೊತೆಗೆ ಸೇರಿಕೊಂಡು ಕರ್ನಾಟಕಕ್ಕೆ ಸಂಬಂಧಿಸಿದಂತೆ ಐದನೇ ಪವರ್ ಸೆಂಟರ್‌ನ್ನು ಸೃಷ್ಟಿಸಿಕೊಂಡಿದ್ದಾರೆ.
ಸತತ ಮೂರನೇ ಬಾರಿಗೆ ಕಾಂಗ್ರೆಸ್ ಸೋತಿರುವ ಹರಿಯಾಣ ಮೂಲದ ಸುರ್ಜೆವಾಲಾ ಕರ್ನಾಟಕದಲ್ಲಿ ಕಾಂಗ್ರೆಸ್ ಶಾಸಕರ ಸಭೆ ನಡೆಸಿದ್ದು ಹಾಗೂ ಸಂವಿಧಾನಬಾಹಿರವಾಗಿ ಕರ್ನಾಟಕ ಸರ್ಕಾರದ (ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ)ದ ಸಚಿವರ ಸಭೆಗಳನ್ನು ನಡೆಸಿದ್ದು ವೇಣುಗೋಪಾಲ-ಸುರ್ಜೆವಾಲಾ-ಶಿವಕುಮಾರ ಈ ಮೂವರು ತಾವಾಗಿಯೇ ಕೂಡಿಕೊಂಡು ಸೃಷ್ಟಿಸಿಕೊಂಡಿರುವ ಐದನೇ ಪವರ್ ಸೆಂಟರ್‌ನ ಫಲವಷ್ಟಲ್ಲದೇ ಬೇರೇನೂ ಅಲ್ಲ.
ವೇಣುಗೋಪಾಲ ಕಾಂಗ್ರೆಸ್‌ನಲ್ಲಿ ನೆಹರು ಕುಟುಂಬಕ್ಕೆ ಈಗ ಕಿವಿ-ಕಣ್ಣು ಮತ್ತು ಬಾಯಿ. ಕಾಂಗ್ರೆಸ್ ವಿಧಾನಸಭಾ ಚುನಾವಣೆಗಳಲ್ಲಿ ಸತತವಾಗಿ ಅನುಭವಿಸುತ್ತಿರುವ ದುರ್ಗತಿ ಭರಿತ ಸೋಲಿಗೆ ವೇಣುಗೋಪಾಲಗೆ ಅಂಟಿಕೊಂಡಿರುವ ಕೆಲವು ಸ್ವಾರ್ಥ ಲೆಕ್ಕಾಚಾರಗಳೂ ಕಾರಣ ಎಂದು ಸ್ವತಃ ಕಾಂಗ್ರೆಸ್ ಕಾರ್ಯಕರ್ತರೇ ಸಾಮಾಜಿಕ ಜಾಲತಾಣಗಳಲ್ಲಿ ಆಗ್ಗಾಗ್ಗೇ ಮುಗಿಬಿದ್ದು ಹೇಳುತ್ತಿರುತ್ತಾರೆ.
ನೆಹರು ಕುಟುಂಬಕ್ಕೆ ವೇಣುಗೋಪಾಲ ಕಣ್ಣು-ಕಿವಿ-ಬಾಯಿಯಾಗಿರುವ ಕಾರಣ ಮತ್ತು ಸುರ್ಜೆವಾಲಾ ಕೂಡಾ ಡಿಕೆಶಿವಕುಮಾರ್ ಪಕ್ಷಪಾತಿಯಾಗಿರುವ ಹಿನ್ನೆಲೆಯಲ್ಲಿ ಕೆಲ ತಿಂಗಳ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸರ್ಕಾರ ಮತ್ತು ಪಕ್ಷದ ಮಟ್ಟದಲ್ಲಿ ವ್ಯೂಹವನ್ನು ಹೆಣೆಯಲಾಗಿತ್ತು.
ಇನ್ನು ಮಲ್ಲಿಕಾರ್ಜುನ ಖರ್ಗೆ ವಿಷಯಕ್ಕೆ ಬರೋದಾದ್ರೆ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಇಳಿಸಿ ನೀವು ಮುಖ್ಯಮಂತ್ರಿ ಆಗಿ ಎಂಬ ಹೊಂದಾಣಿಕೆ ಲೆಕ್ಕಾಚಾರವನ್ನು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಟ್ಟಿದ್ದರು. ಖರ್ಗೆ ಬಳಿಕ ನಾನೇ ಸಿಎಂ ಎನ್ನುವುದು ಡಿಕೆಶಿಯ ಅಂದಾಜು. ಮುಖ್ಯಮಂತ್ರಿ ಸ್ಥಾನದಿಂದ ಸಿದ್ದರಾಮಯ್ಯ ಇಳಿಸುವುದಕ್ಕೆ ಡಿಕೆಶಿವಕುಮಾರ್‌ಗೆ ಖರ್ಗೆಯೇ ಏಣಿ.
ಆದರೆ ಇತ್ತೀಚೆಗೆ ದಿಢೀರ್ ಆಗಿ ಕೈ ಕೊಟ್ಟ ಆರೋಗ್ಯ, ಇಳಿ ವಯಸ್ಸಿನ ಜೊತೆಗೆ ಇವತ್ತು ಬಿಹಾರದ ಮಹಾ ಜನತೆ ಕೊಟ್ಟಿರುವ ಮತ ಚಾಟಿ ಏಟಿನ ಹೊಡೆತವನ್ನು ತಡೆದುಕೊಳ್ಳುವುದು ಅಧ್ಯಕ್ಷ ಹಿರಿ ಖರ್ಗೆ ಕೈಯಲ್ಲಿ ಸಾಧ್ಯವೇ ಇಲ್ಲ.
ಕರ್ನಾಟಕ ಕಾಂಗ್ರೆಸ್‌ನ ಪಾಲಿಗೆ ಸಂಪನ್ಮೂಲ ಭರಿತ ರಾಜ್ಯ. ಹಿಮಾಚಲಪ್ರದೇಶದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆಯಾದರೂ ಸತತ ಪ್ರಕೃತಿ ವಿಕೋಪಗಳಿಂದ ಹಿಮಾಲಯದ ಆ ರಾಜ್ಯ ಬಸವಳಿದಿದೆ. ತೆಲಂಗಾಣದಲ್ಲಿ ಕಾಂಗ್ರೆಸ್ ಪರಿಸ್ಥಿತಿ ಹೇಳಿಕೊಳ್ಳುವಂತಿಲ್ಲ. ಹೀಗಾಗಿ ಕರ್ನಾಟಕದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಜೊತೆಗೆ ಕಾಂಗ್ರೆಸ್ ಸಂಪನ್ಮೂಲದ ಬಗ್ಗೆಯೂ ಯೋಚನೆ ಮಾಡುವುದು ಅನಿವಾರ್ಯವಾಗಿದೆ.
ಒಂದು ವೇಳೆ ಬಿಹಾರದಲ್ಲಿ ಮಹಾಘಟಬಂಧನ್ ಅಧಿಕಾರಕ್ಕೆ ಬರುತ್ತಿದ್ದರೆ ಫಲಿತಾಂಶ ಬಯಲಾದ ತಕ್ಷಣವೇ ಕರ್ನಾಟಕದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಪ್ರಕ್ರಿಯೆಗೆ ಕಾಂಗ್ರೆಸ್‌ನ ಹೈಕಮಾಂಡ್‌ಗಳೆನೆಸಿಕೊಂಡ ಐವರು ಅಧಿಕೃತ ಚಾಲನೆ ನೀಡುತ್ತಿದ್ದರು. ನಮ್ಮಿಂದಲೇ ಪಕ್ಷ, ನಮ್ಮಿಂದಲೇ ನಿಮಗೆ ಅಧಿಕಾರ ಎಂಬ ಮಬ್ಬುತನ ದೆಹಲಿಯಲ್ಲಿ ಕಾಂಗ್ರೆಸ್‌ನ ಐವರು ಹೈಕಮಾಂಡ್‌ಗಳ ನೆತ್ತಿಗೆ ಏರುತ್ತಿತ್ತು. ಆ ಮಬ್ಬಲ್ಲೇ ಕರ್ನಾಟಕದಲ್ಲೂ ಮುಖ್ಯಮಂತ್ರಿ ಬದಲಾವಣೆಯ ದುಸ್ಸಾಹಸಕ್ಕೆ ಕೈ ಹಾಕುತ್ತಿದ್ದರು. ಆದರೆ ಬಿಹಾರದ ಮತದಾರರು ಕೊಟ್ಟಿರುವ ಗೂಸಾದಿಂದ ಕಾಂಗ್ರೆಸ್ ಹೈಕಮಾಂಡ್ ಚೇತರಿಸಿಕೊಳ್ಳಲು ಚಳಿಗಾಲದ ಕಳೆದು ಬೇಸಿಗೆಯಲ್ಲಿ ನಡೆಯುವ ಕೇರಳ ವಿಧಾನಸಭಾ ಚುನಾವಣೆವರೆಗೂ ಕಾಯಬೇಕು.
ಮಹಾರಾಷ್ಟ್ರದಲ್ಲೂ ಕಾಂಗ್ರೆಸ್‌ಗೆ ಮತದಾರನ ಚಡಿ ಏಟು ಬಿದ್ದಿದ್ದು ಚಳಿಗಾಲದಲ್ಲೇ. ಈಗ ಬಿಹಾರದಲ್ಲೂ ಕಾಂಗ್ರೆಸ್‌ಗೆ ಬಾಸುಂಡೆ ಬರುವಂತೆ ಮತದಾರರು ಬೆನ್ನು ಬಗ್ಗಿಸಿ ಚಡಿ ಏಟು ಕೊಟ್ಟಿದ್ದು ಚಳಿಗಾಲದಲ್ಲೇ. ಚಳಿಗಾಲದಲ್ಲಾಗುವ ಗಾಯವನ್ನು ತಡೆದುಕೊಳ್ಳುವುದು, ಸಹಿಸಿಕೊಳ್ಳುವು ತುಂಬಾನೇ ಕಷ್ಟ, ಅದು ಅಸಹನೀಯವಾದ ನೋವು.
ಒಬ್ಬರ ನಷ್ಟ ಇನ್ನೊಬ್ಬರ ಲಾಭ. ಇಲ್ಲೂ ಕೂಡಾ ಅಷ್ಟೇ. ಬಿಹಾರದ ಸೋಲಿನಿಂದ ಕಂಗೆಟ್ಟಿರುವ ಕಾಂಗ್ರೆಸ್‌ನ ಐವರು ಹೈಕಮಾಂಡ್‌ಗಳವರು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುವುದನ್ನು ಕೇಳಿಸಿಕೊಂಡು ಹೋಗ್ಬೇಕಷ್ಟೇ. ಅದು ಬಿಟ್ಟು ಖರ್ಗೆ, ವೇಣುಗೋಪಾಲ, ಸುರ್ಜೆವಾಲಾ ಮಾತು ನಂಬಿ ಶಿವಕುಮಾರ ಹಾಕುವ ತಾಳಕ್ಕೆ ತಕ್ಕಂತೆ ಕುಣಿದರೆ ಕಾಂಗ್ರೆಸ್‌ಗೆ ನೆಲವೇ ಇಲ್ಲದಂತಾಗುತ್ತದೆ. ಇದರ ಸ್ಪಷ್ಟ ಅರಿವು ಕರ್ನಾಟಕ ರಾಜಕಾರಣ ಕಂಡ ಅಪರೂಪದ ರಾಜಕೀಯ ಮುತ್ಸದಿ, ಎರಡು ಬಾರಿ ಮುಖ್ಯಮಂತ್ರಿ, ಎರಡು ಬಾರಿ ವಿರೋಧ ಪಕ್ಷದ ನಾಯಕರಾಗಿರುವ ಸಿದ್ದರಾಮಯ್ಯಗೂ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯಗೂ ಗೊತ್ತಿದೆ.
ಹೀಗಾಗಿ ಬಿಹಾರದಲ್ಲಿ ಮತದಾರರ ಕೊಟ್ಟಿರುವ ಚಡಿ ಏಟಿನಿಂದ ಮೈಯೆಲ್ಲ ಬಾಸುಂಡೆಯಾಗಿ ನೋವಿನಲ್ಲಿ ಕಾಂಗ್ರೆಸ್ ವಿಲ ವಿಲನೆ ಒದ್ದಾಡಿ ನರಳಾಡುತ್ತಿದ್ದರೆ ಇತ್ತ ಮುಖ್ಯಮಂತ್ರಿ ಗಾದಿಯನ್ನು ಯಾರೂ ಕಿತ್ತುಕೊಳ್ಳಕ್ಕಾಗಲ್ಲ, ಸದ್ಯಕ್ಕೆ ಅಧಿಕಾರ ಭದ್ರ ಎಂಬ ಖುಷಿಯಲ್ಲಿ ಮುಸಿ-ಮುಸಿ ನಗುತ್ತಿದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಮತ್ತು ಸಿಎಂ ಸಿದ್ದರಾಮಯ್ಯ ಕೃಪಾಪೋಷಿತ ಸಿಂಡಿಕೇಟ್.


