ಮುಖ್ಯಮಂತ್ರಿ ಸಿದ್ದರಾಮಯ್ಯ (Chief Minister Siddaramaiah) ಪ್ರತಿನಿಧಿಸುವ ವರುಣಾ (Varuna Assembly) ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲೇ ಹೆಣ್ಣು ಭ್ರೂಣ ಲಿಂಗ ಪತ್ತೆ ಕಾರ್ಯದ ಅಕ್ರಮ ನಡೆದಿದ್ದು, 7 ಮಂದಿ ವಿರುದ್ಧ ಎಫ್‌ಐಆರ್ (FIR) ದಾಖಲಾಗಿದೆ.
ವರುಣಾ ಹೋಬಳಿಯ (Varuna Hobli) ಹೇರೋಹಳ್ಳಿಯಲ್ಲಿರುವ ಸ್ವಾಮಿ ಶಿವಾನಂದ ಪರಮಹಂಸ ನಿಲಯದಲ್ಲಿ ಕೃತ್ಯ ನಡೆದಿದೆ.
ಆರೋಪಿಗಳ ವಿರುದ್ಧ ಭಾರತೀಯ ನಾಗರಿಕ ಸಂಹಿತೆಯ (BNS) ಕಲಂ 85, 91, 82, 395)ರ ಅಡಿಯಲ್ಲಿ ಮತ್ತು ಗರ್ಭಪಾತ ಕುರಿತ ಕಾಯ್ದೆಯ ಕಲಂ ೪ರಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ.
7 ಮಂದಿ ಆರೋಪಿಗಳ ಪೈಕಿ ಒಬ್ಬಾಕೆ ಮಹಿಳೆಯು ಸೇರಿದ್ದಾಳೆ.
ಮೈಸೂರು ಜಿಲ್ಲಾ ಆರೋಗ್ಯಾಧಿಕಾರಿ (Mysuru DHO) ಡಾ.ಕುಮಾರಸ್ವಾಮಿ ಪಿ.ಸಿ. ಅವರು ಕೊಟ್ಟ ದೂರಿನ ಮೇರೆಗೆ FIR ದಾಖಲಾಗಿದೆ.
ಆರೋಗ್ಯಾಧಿಕಾರಿಗಳ ಬಗ್ಗೆ ಆರೋಗ್ಯ ಸಚಿವರ ಪ್ರಶಂಸೆ:
ಬನ್ನೂರು ಹೈವೇ ಬಳಿಯ ಹುಣಗನಹಳ್ಳಿ ಫಾರಂ ಹೌಸ್ ನಲ್ಲಿ ಲಿಂಗ ಭ್ರೂಣ ಪತ್ತೆ ಕಾರ್ಯ ನಡೆಯುತ್ತಿರುವುದನ್ನ ಪತ್ತೆ ಹಚ್ಚಲಾಗಿದೆ. ರಹಸ್ಯ ಕಾರ್ಯಾಚರಣೆ ಮೂಲಕ ನಮ್ಮಆರೋಗ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿ ಭ್ರೂಣ ಹಂತಕರನ್ನು ಸೆರೆಹಿಡಿದಿದ್ದಾರೆ. ಗರ್ಭಿಣಿ ಮಹಿಳೆಯ ಸಹಾಯ ಪಡೆದು ಲಿಂಗ ಭ್ರೂಣ ಪತ್ತೆ ಕಾರ್ಯಚಟುವಟಿಕೆ ನಡೆಸುತ್ತಿರುವುದನ್ನು ಪತ್ತೆ ಮಾಡಲಾಗಿದೆ.
ಕಾರ್ಯಾಚರಣೆ ವೇಳೆ ನಾಲ್ಕು ಗರ್ಭಿಣಿ ಸ್ತ್ರೀಯರು ಲಿಂಗ ಭ್ರೂಣ ಪತ್ತೆ ಮಾಡಿಸಿಕೊಳ್ಳಲು ಹಾಜರಿರುವುದು ಹಾಗೂ ಸ್ಕ್ಯಾನಿಂಗ್ ಬಳಕೆ ಮಾಡುವ ಉಪಕರಣವು ಕಂಡು ಬಂದಿದೆ. ಹೆರಿಗೆ ಪೂರ್ವ ಭ್ರೂಣ ಲಿಂಗಪತ್ತೆ (ಪಿ.ಸಿ.ಪಿ.ಎನ್.ಡಿ.ಟಿ) ಕಾಯ್ದೆ ಅಡಿಯಲ್ಲಿ ಪ್ರಕರಣವನ್ನು ದಾಖಲು ಮಾಡಲಾಗಿದ್ದು, ಹೆಣ್ಣು ಭ್ರೂಣ ಹತ್ಯೆ ವಿರುದ್ಧ ಆರೋಗ್ಯ ಇಲಾಖೆ ನಿರಂತರ ಹೋರಾಟ ನಡೆಸುತ್ತಿದೆ..
ಹೆಣ್ಣು ಭ್ರೂಣ ಹತ್ಯೆ ಒಂದು ಸಮಾಜಿಕ ಪಿಡುಗು.. ಸಮಾಜ ಈ ಬಗ್ಗೆ ಜಾಗೃತರಾಗಿ ಭ್ರೂಣ ಹತ್ಯೆಯ ವಿರುದ್ಧ ಸಮರ ಸಾರಲು ಮುಂದಾಗಬೇಕು. ಆರೋಗ್ಯ ಇಲಾಖೆ ಸದಾ ಭ್ರೂಣ ಹಂತಕರ ವಿರುದ್ಧ ಸಹಕರಿಸುವವರ ಜೊತೆಯಿದೆ.. ಯಾರು ಎಷ್ಟೇ ದೊಡ್ಡವರಿದ್ದರು, ಹೆಣ್ಣು ಭ್ರೂಣ ಹಂತಕರನ್ನು ಮಟ್ಟಹಾಕಲು ನಮ್ಮ ಸರ್ಕಾರ ಕಠಿಬದ್ಧವಾಗಿದೆ
ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದು, ಮೈಸೂರು ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳ ಕಾರ್ಯಾಚರಣೆಯನ್ನು ಗುಣಗಾನ ಮಾಡಿದ್ದಾರೆ.


