ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಮೈಸೂರು (Mysuru) ನಗರದಲ್ಲಿ ಕಟ್ಟುತ್ತಿರುವ ಹೊಸ ಮನೆಯ ಕೂಗಳತೆ ದೂರದಲ್ಲಿರುವ ಸಿಗ್ಮಾ ಆಸ್ಪತ್ರೆಗೆ (Sigma Hospital) ಅನಧಿಕೃತ ಕಟ್ಟಡದಲ್ಲೇ ಆಸ್ಪತ್ರೆ ನಡೆಸಲು ಅನುಮತಿ ನೀಡಲಾಗಿದೆ. ಈ ಕುರಿತ ಸ್ಫೋಟಕ ದಾಖಲೆ ಪ್ರತಿಕ್ಷಣಕ್ಕೆ ಲಭ್ಯವಾಗಿದೆ.
ಮೈಸೂರು ಮಹಾನಗರ ಪಾಲಿಕೆ (Mysuru City Corporation) MAR ಸಂಖ್ಯೆ 46 ನಿಯಮ 98ರಡಿಯಲ್ಲಿ ತಾತ್ಕಾಲಿಕ ಉದ್ದಿಮೆ ನಡೆಸಲು ಪರವಾನಿಗೆಯನ್ನು ಸಿಗ್ಮಾ ಆಸ್ಪತ್ರೆಗೆ ನೀಡಿತ್ತು. 2019ರ ಮೇ 17ರಂದು ಸಿಗ್ಮಾ ಆಸ್ಪತ್ರೆ 27,908 ರೂಪಾಯಿಗಳನ್ನು ಮೈಸೂರು ನಗರ ಪಾಲಿಕೆಗೆ ಪಾವತಿ ಮಾಡಿತ್ತು.
ಈ ಶುಲ್ಕವನ್ನು ಸ್ವೀಕರಿಸಿದ ಬಳಿಕ ಕರ್ನಾಟಕ ಕಾರ್ಪೋರೇಷನ್ ಕಾಯ್ದೆಯ 1976ರ ಪ್ರಕರಣ 353ರಡಿಯಲ್ಲಿ ಉದ್ದಿಮೆ ಪರವಾನಿಗೆ ನಿಯಮಗಳು 1987 ಮತ್ತು ಚಾಲ್ತಿಯಲ್ಲಿರುವ ಇನ್ನಿತರ ನಿಯಮಗಳ ಪ್ರಕಾರ 2019ರ ಏಪ್ರಿಲ್ 1ರಿಂದ 2020ರ ಮಾರ್ಚ್ 31ರವರೆಗೆ ವಾರ್ಡ್ ನಂಬರ್ 21ರಲ್ಲಿ ಕಾಮಾಕ್ಷಿ ಆಸ್ಪತ್ರೆ ರಸ್ತೆ, ಸರಸ್ವತಿಪುರಂ, ಮೈಸೂರು ಇಲ್ಲಿ ಸಿಗ್ಮಾ ಆಸ್ಪತ್ರೆಗೆ ಪಾಲಿಕೆ ಅನುಮತಿ ನೀಡಿತ್ತು.
ಪರವಾನಿಗೆಯನ್ನು ನೀಡುವ ವೇಳೆ ಪರವಾನಿಗೆ ನೀಡಿದ್ದ ವಲಯ ಕಚೇರಿ-4ರ ವಲಯ ಆಯುಕ್ತರು ಷರಾವನ್ನೂ ಬರೆದಿದ್ದರು.
ಇದು ತಾತ್ಕಾಲಿಕ ಉದ್ದಿಮೆ ರಹದಾರಿಯಾಗಿದ್ದು, ನಿಮ್ಮ ಅನಧಿಕೃತ ಕಟ್ಟಡವನ್ನು ಅಧಿಕೃತ ಎಂದು ಪರಿಗಣಿಸಲಾಗುವುದಿಲ್ಲ ಹಾಗೂ ನಗರ ಪಾಲಿಕೆಯು ಯಾವಾಗ ಬೇಕಾದರೂ ನಿಮ್ಮ ಉದ್ದಿಮೆಯನ್ನು ರದ್ದುಪಡಿಸುವ ಹಕ್ಕನ್ನು ಕಾಯ್ದಿರಿಸಿ ಕೊಂಡಿರುತ್ತದೆ. ಹಾಗೂ ಷರಾದಲ್ಲಿ ನೀಡಿದ ಅನುಮತಿಗೆ ಸೀಮಿತವಾಗಿರುತ್ತದೆ.
ಎಂದು ಷರಾ ಬರೆದು ವಲಯ ಆಯುಕ್ತರು ಸಿಗ್ಮಾ ಆಸ್ಪತ್ರೆಗೆ ಅನುಮತಿ ನೀಡಿದ್ದಾರೆ.
ವಲಯ ಆಯುಕ್ತರು ನೀಡಿದ್ದ ಈ ತಾತ್ಕಾಲಿಕ ಉದ್ದಿಮೆ ಪರವಾನಿಗೆ ಪತ್ರವನ್ನೇ ಸಿಗ್ಮಾ ಆಸ್ಪತ್ರೆ ಕರ್ನಾಟಕ ಖಾಸಗಿ ವೈದ್ಯಕೀಯ ಸ್ಥಾಪನೆಗಳ ಪ್ರಾಧಿಕಾರ, ಜಿಲ್ಲಾ ನೋಡಲ್ ಅಧಿಕಾರಿ, ಮೈಸೂರ ಇವರಿಗೆ ಸಲ್ಲಿಸಿತ್ತು.
ಸ್ವತಃ ವಲಯ ಆಯುಕ್ತರಿಗೆ ಸಿಗ್ಮಾ ಆಸ್ಪತ್ರೆಯ ಈ ಕಟ್ಟಡ ಅನಧಿಕೃತ ಎಂದು ತಿಳಿದಿದ್ದರೂ ಆಸ್ಪತ್ರೆ ನಡೆಸುವುದಕ್ಕೆ ಉದ್ದಿಮೆ ಪರವಾನಿಗೆ ಪತ್ರ ಕೊಟ್ಟಿದ್ದು ಯಾಕೆ..? ವಲಯ ಆಯಕ್ತರ ಮೇಲೆ ಯಾರ ಒತ್ತಡ ಇತ್ತು..? ಆ ವಲಯ ಆಯುಕ್ತರಿಗೆ ಈ ಆಸ್ಪತ್ರೆಗೆ ಉದ್ದಿಮೆ ಪರವಾನಿಗೆ ಪತ್ರ ನೀಡುವುದಕ್ಕೆ ಆಸಕ್ತಿಗಳೇನು ಎನ್ನುವುದೇ ಪ್ರಮುಖ ಪ್ರಶ್ನೆಯಾಗಿದೆ.


