ಸರ್ಕಾರಿ ಆದೇಶದ ಮೂಲಕ ಸಂವಿಧಾನದತ್ತ ಮೂಲಭೂತ ಹಕ್ಕನ್ನು ಕಸಿದುಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಯತ್ನಕ್ಕೆ ಭಾರೀ ಹಿನ್ನಡೆಯಾಗಿದೆ.
ಸಾರ್ವಜನಿಕ ಸ್ಥಳಗಳಲ್ಲಿ 10ಕ್ಕೂ ಅಧಿಕ ಮಂದಿ ಶಾಂತಿಯುತವಾಗಿ ನಾಗರಿಕ, ಸಾಮಾಜಿಕ ಸಾಂಸ್ಕೃತಿಕ ಸಭೆಗಳನ್ನು ನಡೆಸಬಾರದು ಎಂದು ಕರ್ನಾಟಕದ ಕಾಂಗ್ರೆಸ್ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ಕರ್ನಾಟಕ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ಈ ಮೂಲಕ ಸಿಎಂ ಸಿದ್ದರಾಮಯ್ಯ ಸರ್ಕಾರಕ್ಕೆ ಭಾರೀ ಮುಖಭಂಗವಾಗಿದೆ.
ಅಕ್ಟೋಬರ್ 18ರಂದು ರಾಜ್ಯ ಸರ್ಕಾರ ಹೊರಡಿಸಿರುವ ಆದೇಶ ಮೇಲ್ನೋಟಕ್ಕೆ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಹೈಕೋರ್ಟ್ ನ್ಯಾಯಮೂರ್ತಿ ನಾಗಪ್ರಸನ್ನ ಅವರು ಅಭಿಪ್ರಾಯಪಟ್ಟಿದ್ದಾರೆ.
ಭಾರತದ ಸಂವಿಧಾನದ ಅಧ್ಯಾಯ ಮೂರರ ವಿಧಿ 19(1) (a) (b) ಅಡಿಯಲ್ಲಿ ನಾಗರಿಕರಿಗೆ ನೀಡಲಾಗಿರುವ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಸಭೆ ಸೇರುವ ಹಕ್ಕನ್ನು ಸರ್ಕಾರ ತನ್ನ ಆದೇಶದ ಮೂಲಕ ಕಸಿದುಕೊಂಡಿದೆ ಎನ್ನುವುದು ಮೇಲ್ನೋಕ್ಕೆ ಕಾಣಿಸುತ್ತಿದೆ. ಭಾರತ ಸಂವಿಧಾನದ ಅಧ್ಯಾಯ 3ರಲ್ಲಿ ಕೊಡಮಾಡಲಾಗಿರುವ ಹಕ್ಕುಗಳನ್ನು ಕಾನೂನಿನ ಮೂಲಕವಷ್ಟೇ ಹಿಂಪಡೆಯಬಹುದಾಗಿದೆಯೇ ಹೊರತು ಸರ್ಕಾರದ ಆದೇಶದ ಮೂಲಕವಲ್ಲ
ಎಂದು ನ್ಯಾಯಮೂರ್ತಿ ನಾಗಪ್ರಸನ್ನ ಅವರು ಅಭಿಪ್ರಾಯಪಟ್ಟಿದ್ದಾರೆ.
ಒಂದು ವೇಳೆ ಸರ್ಕಾರದ ಆದೇಶಕ್ಕೆ ತಡೆ ನೀಡದೇ ಹೋದರೆ ಅದು ಭಾರತದ ಸಂವಿಧಾನದ ವಿಧಿ 13(2) ವಿಧಿಯನ್ನು ಉಲ್ಲಂಘನೆ ಮಾಡಿದಂತಾಗುತ್ತದೆ. ಸಂವಿಧಾನದ ಅಧ್ಯಾಯ 3ರಲ್ಲಿ ನೀಡಲಾಗಿರುವ ಮೂಲಭೂತ ಹಕ್ಕನ್ನು ಹಕ್ಕುಗಳನ್ನು ಕಸಿದುಕೊಳ್ಳುವ ಅಥವಾ ಸಂಕ್ಷೇಪಿಸುವ ಯಾವುದೇ ಕಾನೂನನ್ನು ರಾಜ್ಯವು ರಚಿಸಬಾರದು ಮತ್ತು ಈ ಷರತ್ತನ್ನು ಉಲ್ಲಂಘಿಸಿ ಮಾಡಿದ ಯಾವುದೇ ಕಾನೂನು, ಉಲ್ಲಂಘನೆಯ ಮಟ್ಟಿಗೆ ಅನೂರ್ಜಿತವಾಗಿರುತ್ತದೆ ಎಂದು ಈ ವಿಧಿ ಹೇಳಿದೆ
ಎಂದು ನ್ಯಾಯಮೂರ್ತಿ ನಾಗಪ್ರಸನ್ನ ಅವರು ಅಭಿಪ್ರಾಯ ಪಟ್ಟರು.
ಸರ್ಕಾರದ ಆದೇಶ ಸಂವಿಧಾನದ ವಿಧಿ 13(2)ರ ಉಲ್ಲಂಘನೆಯಾಗಿರುವ ಹಿನ್ನೆಲೆಯಲ್ಲಿ ಸರ್ಕಾರದ ಆದೇಶ ಮತ್ತು ಆ ಆದೇಶದಿಂದಾಗಿರುವ ಪರಿಣಾಮಗಳ ಮೇಲೆ ಮುಂದಿನ ವಿಚಾರಣೆವರೆಗೂ ತಡೆ ನೀಡಲಾಗಿದೆ
ಎಂದು ಹೈಕೋರ್ಟ್ ನ್ಯಾಯಮೂರ್ತಿ ನಾಗಪ್ರಸನ್ನ ಅವರು ಆದೇಶದಲ್ಲಿ ಹೇಳಿದ್ದಾರೆ. ಮುಂದಿನ ವಿಚಾರಣೆಯನ್ನು ನವೆಂಬರ್ 17ಕ್ಕೆ ಮುಂದೂಡಲಾಯಿತು.
ಸಾರ್ವಜನಿಕ ಸ್ಥಳಗಳಲ್ಲಿ 10ಕ್ಕಿಂತ ಹೆಚ್ಚು ಮಂದಿ ಶಾಂತಿಯುತವಾಗಿ ಸಭೆ ನಡೆಸಿದರೆ ಅದು ಕಾನೂನುಬಾಹಿರ ಎಂದು ಘೋಷಿಸಿ ಅಕ್ಟೋಬರ್ 18ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಆದೇಶ ಹೊರಡಿಸಿತ್ತು.


