ಮುಖ್ಯಮಂತ್ರಿ ಸಿದ್ದರಾಮಯ್ಯ (Chief Minister Siddaramaiah) ಅವರು ತಮ್ಮ ತವರೂರು ಮೈಸೂರು ನಗರದಲ್ಲಿ (Mysuru City) ನಿರ್ಮಿಸುತ್ತಿರುವ ಹೊಸ ಮನೆಯ ಕೂಗಳತೆಯ ದೂರದಲ್ಲಿ ನಡೆದಿರುವ ಅತೀ ದೊಡ್ಡ ನಾಗರಿಕ ನಿವೇಶನ (Civic Amenity Site) ಹಗರಣ ಕುರಿತ ತನಿಖಾ ವರದಿಯನ್ನು ಪ್ರತಿಕ್ಷಣ ಸರಣಿ ರೂಪದಲ್ಲಿ ಪ್ರಕಟಿಸುತ್ತಿದೆ.
ಶೈಕ್ಷಣಿಕ ಉದ್ದೇಶಕ್ಕಾಗಿ (Educational Purpose) ಮೈಸೂರು ನಗರಾಭಿವೃದ್ಧಿ ಮಂಡಳಿಯು (Mysuru Improvement Trust Board) ಮೈಸೂರು ಜಿಲ್ಲೆಯ ಹುಣಸೂರು (Hunsur) ತಾಲೂಕಿನಲ್ಲಿ ವಿಳಾಸ ಹೊಂದಿರುವ ವಿಶ್ವಶಾಂತಿ ಸಂಸ್ಥೆಗೆ (Vishwa Shanti Samiti) ನಾಗರಿಕ ನಿವೇಶನವನ್ನು ಮಂಜೂರು ಮಾಡಿತ್ತು.
1983ರಲ್ಲಿ ಮೈಸೂರು ನಗರಾಭಿವೃದ್ಧಿ ಮಂಡಳಿ ಮತ್ತು ವಿಶ್ವಶಾಂತಿ ಸಂಸ್ಥೆ ನಡುವೆ ಆದ ನಾಗರಿಕ ನಿವೇಶನ ಒಪ್ಪಂದದ ಪ್ರಕಾರ ನಿವೇಶನ ಮಂಜೂರು ವೇಳೆ ಮಂಡಳಿಯು ಟ್ರಸ್ಟ್‌ಗೆ 6 ಷರತ್ತುಗಳನ್ನು ವಿಧಿಸುತ್ತದೆ.
ಆ 6 ಷರತ್ತುಗಳು:
1) ಶೈಕ್ಷಣಿಕ ಸಂಸ್ಥೆಗಳ ನಿರ್ಮಾಣಕ್ಕಾಗಿಯಷ್ಟೇ ಈ ನಾಗರಿಕ ನಿವೇಶನವನ್ನು ಬಳಸಿಕೊಳ್ಳತಕ್ಕದ್ದು
2) ಈ ನಾಗರಿಕ ನಿವೇಶನಕ್ಕೆ ಸಂಬಂಧಿಸಿದ ಶುಲ್ಕಗಳನ್ನು ಸ್ಥಳೀಯ ಸಂಸ್ಥೆಗಳಿಗೆ ಪಾವತಿಸುವ ಜವಾಬ್ದಾರಿ ವಿಶ್ವಶಾಂತಿ ಸಂಸ್ಥೆಯದ್ದೇ ಆಗಿರುತ್ತದೆ.
3) ಒಂದು ವೇಳೆ ಸಂಸ್ಥೆ ಬರ್ಖಾಸ್ತುಗೊಂಡರೆ ಆಗ ಈ ನಾಗರಿಕ ನಿವೇಶನ ಮತ್ತು ಈ ನಾಗರಿಕ ನಿವೇಶನದಲ್ಲಿ ಕಟ್ಟಲಾಗುವ ಕಟ್ಡಡವು ಮೈಸೂರು ನಗರಾಭಿವೃದ್ಧಿ ಮಂಡಳಿಯ ಸ್ವತ್ತಾಗಿರಲಿದೆ.
4) ಈ ನಾಗರಿಕ ನಿವೇಶನದ ಯಾವುದೇ ಭಾಗವನ್ನು ಯಾರಿಗೂ ಉಪ ಬಾಡಿಗೆ (Sub Let or Sub Lease) (ಮೂರನೇಯವರಿಗೆ ಬಾಡಿಗೆ) ಕೊಡುವಂತಿಲ್ಲ.
5) ವಿಶ್ವಶಾಂತಿ ಸಂಸ್ಥೆಯು ನಾಗರಿಕ ನಿವೇಶನದ ಸ್ವಾಧೀನವನ್ನು ಪಡೆದುಕೊಂಡ ಮೂರು ವರ್ಷದೊಳಗೆ ಉದ್ದೇಶಿತ ಕಟ್ಟಡವನ್ನು (ಶೈಕ್ಷಣಿಕ ಕಟ್ಟಡ) ಕಟ್ಟತಕ್ಕದ್ದು.
6) ಒಂದು ವೇಳೆ ಈ ವಿಧಿಸಲಾಗಿರುವ ಮತ್ತು ಒಪ್ಪಿಕೊಂಡಿರುವ ಷರತ್ತುಗಳನ್ನು ಉಲ್ಲಂಘಿಸಿದ್ದಲ್ಲಿ ಮೈಸೂರು ನಗರಾಭಿವೃದ್ಧಿ ಮಂಡಳಿಯು ವಿಶ್ವಶಾಂತಿ ಸಂಸ್ಥೆಗೆ ಯಾವುದೇ ಕಾರಣಗಳನ್ನೂ ನೀಡದೇ ಗುತ್ತಿಗೆ ಅವಧಿಗೂ ಮೊದಲೇ ಈ ಗುತ್ತಿಗೆಯನ್ನು ರದ್ದುಪಡಿಸಲು ಸ್ವತಂತ್ರರಾಗಿರುತ್ತಾರೆ.
ಮೈಸೂರು ನಗರದ ತೊಣಚಿಕೊಪ್ಪಲುವಿನ ಸರಸ್ವತಿಪುರಂನಲ್ಲಿರುವ ನಿವೇಶನ ಸಂಖ್ಯೆ P/8-Dಯನ್ನು ವಿಸ್ತೀರ್ಣ 296+300*190/2 = 6,288.88 ಚದರ ಯಾರ್ಡ್‌ನ್ನಷ್ಟು (1 Acre 18 Guntas) ವೀಸ್ತೀರ್ಣದ ನಾಗರಿಕ ನಿವೇಶನವನ್ನು ವಿಶ್ವಶಾಂತಿ ಸಂಸ್ಥೆಗೆ ಮೈಸೂರು ನಗರಾಭಿವೃದ್ಧಿ ಮಂಡಳಿಯು ಮಂಜೂರು ಮಾಡಿ ಒಪ್ಪಂದ ಮಾಡಿಕೊಳ್ಳುತ್ತದೆ.
ಆದರೆ 1983ರಲ್ಲಿ ಶೈಕ್ಷಣಿಕ ಉದ್ದೇಶಕ್ಕಾಗಿ ಪಡೆದುಕೊಂಡ ಈ ನಾಗರಿಕ ನಿವೇಶನವನ್ನು ವಿಶ್ವಶಾಂತಿ ಸಂಸ್ಥೆಯು ನಿಯಮಗಳನ್ನು ಉಲ್ಲಂಘಿಸಿ ಸಿಗ್ಮಾ ಹಾಸ್ಪಿಟಲ್ (Sigma Hospital Health Care) ಎಂಬ ಖಾಸಗಿ ಆಸ್ಪತ್ರೆಗೆ (Private Hospital) ಉಪ ಗುತ್ತಿಗೆ (Sub Let) ನೀಡಲಾಗಿದೆ.
ವಿಶ್ವಶಾಂತಿ ಸಂಸ್ಥೆಗೆ ಶೈಕ್ಷಣಿಕ ಉದ್ದೇಶಕ್ಕಾಗಿ ಮೈಸೂರು ನಗರಾಭಿವೃದ್ಧಿ ಮಂಡಳಿ ಮಂಜೂರು ಮಾಡಿದ್ದ ಬೃಹತ್ ನಾಗರಿಕ ನಿವೇಶನದಲ್ಲಿ (CA Site) ನಿಯಮಗಳನ್ನು ಉಲ್ಲಂಘಿಸಿ ಅತೀ ದೊಡ್ಡ ಸಿಗ್ಮಾ ಆಸ್ಪತ್ರೆ (Sigma Hospital Health Care) ಕಾರ್ಯನಿರ್ವಹಿಸುತ್ತಿದೆ.


