ಪ್ರತಿಕ್ಷಣ Exclusive: ಸ್ಪೀಕರ್‌ ಖಾದರ್‌ ವಿರುದ್ಧ ಅವಿಶ್ವಾಸ ನಿರ್ಣಯ..?

ಅಕ್ಷಯ್‌ ಕುಮಾರ್‌.ಯು. – ಮುಖ್ಯ ಸಂಪಾದಕರು, ಪ್ರತಿಕ್ಷಣ

ವಿಧಾನಸಭೆಯ ಸಭಾಧ್ಯಕ್ಷರಾಗಿರುವ (Karnataka Legislative Assembly) ಸ್ಪೀಕರ್‌ (Speaker U.T.Khader) ಯು.ಟಿ.ಖಾದರ್‌ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಗೆ ಪ್ರಮುಖ ವಿರೋಧ ಪಕ್ಷವಾಗಿರುವ ಬಿಜೆಪಿ (Karnataka BJP) ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

ಪ್ರತಿಕ್ಷಣಕ್ಕೆ ಲಭ್ಯವಾಗಿರುವ ಮಾಹಿತಿಗಳ ಪ್ರಕಾರ ಬೆಳಗಾವಿಯ (Belagavi) ಸುವರ್ಣಸೌಧದಲ್ಲಿ (Suvarana Soudha) ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲೇ (Winter Session) ಸ್ಪೀಕರ್‌ ಖಾದರ್‌ ವಿರುದ್ಧ ಬಿಜೆಪಿ ಅವಿಶ್ವಾಸ ನಿರ್ಣಯ ಮಂಡಿಸಲಿದೆ.

ಶಾಸಕರ ಭವನ, ವಿಧಾನಸೌಧಕ್ಕೆ ಉಪಕರಣ ಖರೀದಿ ಮತ್ತು ವಿಧಾನಸೌಧದಲ್ಲಿ ನಡೆದ ಪುಸ್ತಕ ಮೇಳಕ್ಕೆ ಸಂಬಂಧಿಸಿದಂತೆ ಭಾರೀ ಭ್ರಷ್ಟಾಚಾರ ಎಸಗಿರುವ ಗಂಭೀರ ಆರೋಪ ಸ್ಪೀಕರ್‌ ಯು.ಟಿ.ಖಾದರ್‌ ಅವರ ಮೇಲಿದೆ.

(ಪ್ರತಿಕ್ಷಣ ಸುದ್ದಿಗಾಗಿ ವಾಟ್ಸಾಪ್‌ ನಂಬರ್‌ 97411 83147 ಅಥವಾ pratikshananews@gmail.com ನ್ನು ಸಂಪರ್ಕಿಸಿ)

ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ಕ್ಷೇತ್ರದ ಶಾಸಕರೂ ಆಗಿರುವ ಖಾದರ್‌ ಅವರ ವಿರುದ್ಧ ಉತ್ತರ ಕನ್ನಡ ಸಂಸದರೂ ಆಗಿರುವ ಮಾಜಿ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ದಕ್ಷಿಣ ಕನ್ನಡದ ಬಿಜೆಪಿ ಶಾಸಕರೂ ಆಗಿರುವ ಡಾ.ಭರತ್‌ ಶೆಟ್ಟಿಯವರು ಹೈಕೋರ್ಟ್‌ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ನ್ಯಾಯಾಂಗ ತನಿಖೆಗೆ ಒತ್ತಾಯಿಸಿದ್ದರು. ಅಲ್ಲದೇ ಸ್ವತಃ ಸಂಸದ ಕಾಗೇರಿಯವರು ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಭೇಟಿಯಾಗಿ ನ್ಯಾಯಾಂಗ ತನಿಖೆಗೆ ಆದೇಶಿಸುವಂತೆ ಮನವಿಯನ್ನೂ ಮಾಡಿದ್ದರು.

ಡಿಸೆಂಬರ್‌ 8ರಿಂದ ಬೆಳಗಾವಿಯಲ್ಲಿ ವಿಧಾನನಮಂಡಲದ ಅಧಿವೇಶನ ಆರಂಭವಾಗಲಿದೆ. ಡಿಸೆಂಬರ್‌ 19ರವರೆಗೆ ಒಟ್ಟು 10 ದಿನ ಅಧಿವೇಶನ ನಡೆಯಲಿದೆ.

ಅಧಿವೇಶನದ ಮೊದಲ ದಿನವಾಗಲಿರುವ ಡಿಸೆಂಬರ್‌ 8ರಂದು ಸ್ಪೀಕರ್‌ ಖಾದರ್‌ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಗೆ ಬಿಜೆಪಿ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

ಖಾದರ್‌ಗೆ ಮುಜುಗರ:

ಭ್ರಷ್ಟಾಚಾರದ ಆರೋಪದಡಿ ತಮ್ಮ ವಿರುದ್ಧವೇ ಬಿಜೆಪಿ ಅವಿಶ್ವಾಸ ನಿರ್ಣಯ ಮಂಡಿಸಿದರೆ ಅದು ಸಹಜವಾಗಿಯೇ ಸ್ಪೀಕರ್‌ ಖಾದರ್‌ಗೆ ಅತೀ ದೊಡ್ಡ ಮುಖಭಂಗ ಮತ್ತು ಮುಜುಗರ ಉಂಟು ಮಾಡಲಿದೆ. ಹಗರಣದ ಆರೋಪವನ್ನು ಹೊತ್ತು ಅಧಿಕೃತ ವಿರೋಧ ಪಕ್ಷದಿಂದ ಅವಿಶ್ವಾಸ ನಿರ್ಣಯಕ್ಕೆ ಗುರಿಯಾದ ರಾಜ್ಯದ ಮೊದಲ ಸ್ಪೀಕರ್‌ ಎಂಬ ಕಳಂಕ ಖಾದರ್‌ಗೆ ಮೆತ್ತಿಕೊಳ್ಳಲಿದೆ.

ಬಿಜೆಪಿ ತಂತ್ರ ಏನು..?

ಸ್ಪೀಕರ್‌ ಖಾದರ್‌ ವಿರುದ್ಧ ಬಿಜೆಪಿ ಅವಿಶ್ವಾಸ ನಿರ್ಣಯ ಮಂಡಿಸಿದರೂ ಆ ನಿರ್ಣಯ ಅಂಗೀಕಾರ ಆಗುವುದು ಕಷ್ಟ. ಕಾರಣ ವಿಧಾನಸಭೆಯಲ್ಲಿ ಬಿಜೆಪಿಗಾಗಲೀ, ಜೆಡಿಎಸ್‌ಗಾಗಲೀ ಮತ್ತು ಬಿಜೆಪಿ ಮತ್ತು ಜೆಡಿಎಸ್‌ ಮೈತ್ರಿಗಾಗಲೀ ಅಗತ್ಯ ಶಾಸಕರ ಬೆಂಬಲ ಇಲ್ಲ.

ವಿಧಾನಸಭೆಯಲ್ಲಿ ಕಾಂಗ್ರೆಸ್‌ 135 ಶಾಸಕರ ಬೆಂಬಲವನ್ನು ಹೊಂದಿದೆ. ಮಾಜಿ ಸಚಿವ, ಶಾಸಕರಾಗಿದ್ದ ಹೆಚ್‌.ವೈ.ಮೇಟಿ ನಿಧನದಿಂದ 1 ಸ್ಥಾನ ಖಾಲಿ ಇದೆ. ಬಿಜೆಪಿ 63 ಶಾಸಕರು, ಬಿಜೆಪಿಯಿಂದ ಉಚ್ಛಾಟನೆಗೊಂಡಿರುವ ಮೂವರು ಶಾಸಕರು (ಬಸನಗೌಡ ಪಾಟೀಲ್‌ ಯತ್ನಾಳ್‌, ಶಿವರಾಂ ಹೆಬ್ಬಾರ್‌, ಎಸ್‌.ಟಿ.ಸೋಮಶೇಖರ್‌), ಜೆಡಿಎಸ್‌ನ 18 ಶಾಸಕರು, ಇತರೆ ಮೂವರು ಶಾಸಕರಿದ್ದಾರೆ.

ಸ್ಪೀಕರ್‌ ವಿರುದ್ಧ ಅವಿಶ್ವಾಸ ನಿರ್ಣಯ ಸಲ್ಲಿಕೆಗೆ 50 ಶಾಸಕರ ಸಹಿ ಅಗತ್ಯ. ತಮ್ಮ ವಿರುದ್ಧ ಸಲ್ಲಿಕೆ ಆಗುವ ಅವಿಶ್ವಾಸ ನಿರ್ಣಯವನ್ನು ಅಂಗೀಕರಿಸುವುದು ಅಥವಾ ತಿರಸ್ಕರಿಸುವುದು ಸ್ಪೀಕರ್‌ ವಿವೇಚನೆಗೆ ಬಿಟ್ಟಿದ್ದು. ಒಂದು ವೇಳೆ ನಿರ್ಣಯವನ್ನು ಅಂಗೀಕರಿಸಿದರೆ ಆಗ ವಿಧಾನಸಭೆಯಲ್ಲಿ ಅವಿಶ್ವಾಸ ನಿರ್ಣಯದ ಮೇಲೆ ಚರ್ಚೆಗೆ ಸ್ಪೀಕರ್‌ ಅವಕಾಶ ಮಾಡಿಕೊಡಬೇಕಾಗುತ್ತದೆ.

ಆದರೆ ಸ್ಪೀಕರ್‌ ಖಾದರ್‌ ವಿರುದ್ಧದ ಅವಿಶ್ವಾಸ ನಿರ್ಣಯ ಮಂಡನೆಯಿಂದ ಕಾಂಗ್ರೆಸ್‌ ವಿರುದ್ಧದ ಹೋರಾಟಕ್ಕೆ ಬಿಜೆಪಿಗೆ ಹೊಸ ಅವಕಾಶ ಮಾಡಿಕೊಟ್ಟಂತಾಗುತ್ತದೆ.

ವಿಧಾನಸಭೆಯಲ್ಲೇ ಚರ್ಚೆಗೆ ಬಿಜೆಪಿ ಸಿದ್ಧತೆ:

ವಿಧಾನಸಭೆಯಲ್ಲೇ ಸ್ಪೀಕರ್‌ ಖಾದರ್‌ ವಿರುದ್ಧದ ಭ್ರಷ್ಟಾಚಾರದ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿ ಪಟ್ಟು ಹಿಡಿಯುವುದು ಖಚಿತವಾಗಿದೆ. ಈ ಮೂಲಕ ಸ್ಫೀಕರ್‌ ಪೀಠದಲ್ಲಿ ಕೂತು ಕಲಾಪ ನಡೆಸಿಕೊಳ್ಳಲಿರುವ ಸಭಾಧ್ಯಕ್ಷ ಖಾದರ್‌ ಇನ್ನಷ್ಟು ಮುಜುಗರಕ್ಕೆ ಒಳಗಾಗುವುದು ನಿಶ್ಚಿತ.

ಕಾಂಗ್ರೆಸ್‌ಗೂ ಮುಜುಗರ:

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಅತ್ಯಂತ ಹೀನಾಯವಾಗಿ ಸೋತು ನೆಲಕಚ್ಚಿರುವ ಕಾಂಗ್ರೆಸ್‌ ಆ ಆಘಾತದಿಂದ ಚೇತರಿಸಿಕೊಳ್ಳುವುದಕ್ಕೆ ಇನ್ನೂ ಸಮಯ ಬೇಕು. ಇದರ ನಡುವೆ ಅಧಿವೇಶನದಲ್ಲೇ ತನ್ನದೇ ಪಕ್ಷದ ಶಾಸಕರೂ ಆಗಿರುವ ಸ್ಪೀಕರ್‌ ಖಾದರ್‌ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಯಾದರೆ ಮತ್ತು ಚರ್ಚೆಗೆ ಬಿಜೆಪಿ ಪಟ್ಟು ಹಿಡಿದರೆ ಕಾಂಗ್ರೆಸ್‌ನ್ನು ಇನ್ನಷ್ಟು ಮುಜುಗರಕ್ಕೆ ಈಡು ಮಾಡಲಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಯು.ಟಿ.ಖಾದರ್‌ ಅವರು ವಿಧಾನಸಭೆಯಲ್ಲಿ ವಿರೋಧ ಪಕ್ಷದ ಉಪ ನಾಯಕರಾಗಿದ್ದರು ಎನ್ನುವುದು ವಿಶೇಷ.

ಬಿಜೆಪಿ ಶಾಸಕರನ್ನು ಅಮಾನತು ಮಾಡಿದ್ದ ಸ್ಪೀಕರ್‌ ಖಾದರ್‌:

ಇದೇ ವರ್ಷದ ಮಾರ್ಚ್‌ನಲ್ಲಿ ನಡೆದಿದ್ದ 16ನೇ ವಿಧಾನಸಭೆಯ 6ನೇ ಅಧಿವೇಶನದಲ್ಲಿ ಸ್ಪೀಕರ್‌ ಯು.ಟಿ.ಖಾದರ್‌ ಅವರು ಬಿಜೆಪಿಯ 18 ಮಂದಿ ಶಾಸಕರನ್ನು ಅಮಾನತು ಮಾಡಿದ್ದರು. ಬಿಜೆಪಿ ಶಾಸಕರಾದ ಡಾ.ಸಿ.ಎನ್.ಅಶ್ವತ್ಥನಾರಾಯಣ, ಮುನಿರತ್ನ ನಾಯ್ಡು, ಬೈರತಿ ಬಸವರಾಜ್, ಎಸ್.ಆರ್.ವಿಶ್ವನಾಥ್, ದೊಡ್ಡನಗೌಡ ಪಾಟೀಲ್, ಚನ್ನಬಸಪ್ಪ, ಉಮಾನಾಥ್ ಕೋಟ್ಯಾನ್, ಎಂ.ಆರ್.ಪಾಟೀಲ್, ಡಾ.ಭರತ್ ಶೆಟ್ಟಿ, ಬಿ.ಪಿ.ಹರೀಶ್, ಧೀರಜ್ ಮುನಿರಾಜು, ಡಾ.ಚಂದ್ರುಲಮಾಣಿ, ಶರಣು ಸಲಗಾರ್, ಬಸವರಾಜ್ ಮತ್ತಿಮೋಡ್ ಒಳಗೊಂಡು 18 ಶಾಸಕರನ್ನು ಅಮಾನತು ಮಾಡಲಾಗಿತ್ತು. ಈ ಅಮಾನತ್ತಿನಿಂದಾಗಿ ಈ ಶಾಸಕರು ವಿಧಾನಸಭೆಯ ಕಾರ್ಯಕಲಾಪ ಮತ್ತು ವಿಧಾನಮಂಡಲದ ಸಮಿತಿಗಳ ಸಭೆಗಳಲ್ಲಿ ಭಾಗವಹಿಸುವ ಅವಕಾಶವನ್ನೂ ಕಳೆದುಕೊಂಡಿದ್ದರು. ಅಂತಿಮವಾಗಿ 3 ತಿಂಗಳ ಬಳಿಕ ಇದೇ ವರ್ಷದ ಮೇನಲ್ಲಿ ಅಮಾನತ್ತನ್ನು ವಾಪಸ್‌ ಪಡೆಯಲಾಗಿತ್ತು.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಚಪ್ಪಲಿ ವೀರ ರಾಜೀವ್‌ ಗೌಡನಿಗೆ ಜಾಮೀನು..!

ಶಿಡ್ಲಘಟ್ಟ ನಗರಸಭೆ ಆಯುಕ್ತೆಗೆ ಬೆದರಿಕೆಯೊಡ್ಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ ಕೇಸ್ ನಲ್ಲಿ...

ಬಿಗ್ ಬಾಸ್ ಸ್ಪಾನ್ಸರ್ – ಉದ್ಯಮಿ C.J.ರಾಯ್ ಆತ್ಮಹತ್ಯೆ

ಬೆಂಗಳೂರಿನ ಖ್ಯಾತ ಉದ್ಯಮಿ ಕಾನ್ಫಿಡೆಂಟ್‌ ಗ್ರೂಪ್‌ ಚೇರ್‌ಮೆನ್ ಸಿಜೆ ರಾಯ್ ಶುಕ್ರವಾರ...

BJPಯ ಅಶ್ವಥ್ ನಾರಾಯಣಗೆ 1 ವರ್ಷ ಜೈಲು- ಭೂಕಬಳಿಕೆ ಕೇಸ್ ನಲ್ಲಿ ಜೈಲು ಪಾಲಾದ BJP ಮಾಜಿ MLC..!

ಬಿಜೆಪಿ ಮಾಜಿ ಎಂಎಲ್ ಸಿ ಅಶ್ವಥ್ ನಾರಾಯಣಗೆ ಒಂದು ವರ್ಷ ಜೈಲು...

ಬೆಂಗಳೂರಲ್ಲಿ ಪವರ್ ಕಟ್- ಈ ಏರಿಯಾಗಳಲ್ಲಿ ಬೆಳಗ್ಗೆ 10ರಿಂದ ಸಂಜೆ 6 ಗಂಟೆವರೆಗೂ ಕರೆಂಟ್ ಇರಲ್ಲ..!

ಬೆಂಗಳೂರಿನ 100ಕ್ಕೂ ಹೆಚ್ಚು ಬಡಾವಣೆಗಳಲ್ಲಿ ಜನವರಿ 21ರಂದು ವಿದ್ಯುತ್ ವ್ಯತ್ಯಯ ಉಂಟಾಗಲಿದೆ....