ಭಾಷಣಕಾರ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಲಿಂಗಾಯತ ಸಮಾಜ ಸಿಡಿದೆದಿದ್ದೆ. ಲಿಂಗಾಯತ ಸಮಾಜದ ವಿರುದ್ಧ ಸೂಲಿಬೆಲೆ ನಡೆಸುತ್ತಿರುವ ಸಭೆಗಳ ಬಗ್ಗೆ ಕಟು ಟಿಪ್ಪಣಿ ಮತ್ತು ವ್ಯಂಗ್ಯವನ್ನು ಲಿಂಗಾಯತ ಸಮಾಜ ಮಾಡಿದೆ.
ದೇವದುರ್ಗ ಪಟ್ಟಣದಲ್ಲಿ ಕರೆದಿದ್ದ ‘ಬಸವಾದಿ ಶರಣರ ಹಿಂದೂ ಸಮಾವೇಶ’ದ ಪೂರ್ವಭಾವಿ ಸಭೆ ಎರಡನೇ ಬಾರಿ ಮುಂದೆ ಹೋಗಿದೆ. ನಿರೀಕ್ಷಿಸಿದ ಮಟ್ಟದಲ್ಲಿ ಜನ ಬಾರದಿರುವುದರಿಂದ ವಿಷಯ ಸರಿಯಾಗಿ ಚರ್ಚೆಯಾಗದೆ ಸಭೆಯನ್ನು ಎರಡು ಬಾರಿ ಮುಂದೂಡಲಾಗಿದೆ ಎಂದು ತಿಳಿದು ಬಂದಿದೆ.
ಅಕ್ಟೋಬರ್ 29 ಬೆಳಗಾವಿಯಲ್ಲಿ ಕನ್ನೇರಿ ಸ್ವಾಮಿಯ ಬೆಂಬಲದಲ್ಲಿ ಯುವ ಬ್ರಿಗೇಡ್ ನಾಯಕ ಚಕ್ರವರ್ತಿ ಸೂಲಿಬೆಲೆಯ ನೇತೃತ್ವದಲ್ಲಿ ಹಿಂದುತ್ವ ಸಂಘಟನೆಗಳ ಸಭೆ ನಡೆದಿತ್ತು. ಅದರಲ್ಲಿ ಬಸವ ಸಂಸ್ಕೃತಿ ಅಭಿಯಾನಕ್ಕೆ ಉತ್ತರ ಕೊಡಲು ತಾಲೂಕು ಮಟ್ಟದಲ್ಲಿ ‘ಬಸವಾದಿ ಶರಣರ ಹಿಂದೂ ಸಮಾವೇಶ’ ನಡೆಸಲು ಸೂಲಿಬೆಲೆ ಹಿಂದುತ್ವ ಸಂಘಟನೆಗಳಿಗೆ ಸೂಚನೆ ನೀಡಿದ್ದರು.
ಅದರಂತೆ ಪಟ್ಟಣದ ವೀರಶೈವ ಸಮಾಜದ ಮುಖಂಡರೊಬ್ಬರು ಅಕ್ಟೋಬರ್ 31ರಂದು ಕೆಇಬಿ ಹತ್ತಿರ ಇರುವ ಅಂಬಾಭವಾನಿ ದೇವಾಲಯದಲ್ಲಿ ಮೊದಲ ಸಭೆ ಕರೆದಿದ್ದರು. ಅದಕ್ಕೆ ಕೇವಲ 15-16 ಜನ ಬಂದಾಗ ಎಲ್ಲರೂ ಬಾಗಿಲು ಮುಚ್ಚಿಕೊಂಡು ಚರ್ಚಿಸಿದ್ದರು. “ನಾವೇ ಹೆಚ್ಚಿಗೆ ಜನ ಕರೆದಿರಲಿಲ್ಲ, ಕಾರ್ಯತಂತ್ರ ರೂಪಿಸಲು ಕೆಲವು ಪ್ರಮುಖರನ್ನು ಮಾತ್ರ ಆಹ್ವಾನಿಸಿದ್ದೆವು. ಮುಂದಿನ ಸಭೆಯಲ್ಲಿ ಹೆಚ್ಚಿಗೆ ಜನ ಬರುತ್ತಾರೆ,” ಎಂದು ಸಂಘಟಕರೊಬ್ಬರು ತಮ್ಮ ಬೆಂಬಲಿಗರಿಗೆ ಹೇಳಿದರೆಂದು ತಿಳಿದು ಬಂದಿದೆ.
ನವೆಂಬರ್ 2ರ ಸಂಜೆ ಮತ್ತೆ ಎರಡನೇ ಸಭೆ ಕರೆದು ವಿವಿಧ ಸಮಾಜದ ಮುಖಂಡರನ್ನು ಅಂಬಾಭವಾನಿ ದೇವಾಲಯಕ್ಕೆ ಬರುವಂತೆ ಆಹ್ವಾನಿಸಲಾಗಿತ್ತು. ಅದಕ್ಕೂ ನಿರೀಕ್ಷಿತ ಮಟ್ಟದಲ್ಲಿ ಜನ ಬಾರದ ಕಾರಣ ಸಭೆಯನ್ನು ಸಂಕ್ಷಿಪ್ತವಾಗಿ ನಡೆಸಿ ಮತ್ತೆ ಮುಂದೂಡಲಾಯಿತು.
“ಸುಮಾರು 30 ಜನ ಸಭೆಗೆ ಬಂದಿದ್ದರು. ಸಭೆಯಲ್ಲಿ ಹಿಂದೂ ದೇವರನ್ನು ಅವಹೇಳನ ಮಾಡುವ, ಜನರ ಭಕ್ತಿಯನ್ನು ಕೆಡಿಸುವ ವಾತಾವರಣ ನಿರ್ಮಾಣವಾಗುತ್ತಿದೆ. ಇದರ ವಿರುದ್ಧವಾಗಿ ಸಮಾಜವನ್ನು ಜಾಗೃತಗೊಳಿಸಿ, ಸನಾತನ ಜೀವನ ಪದ್ಧತಿಯ ಸಂರಕ್ಷಣೆ ಮಾಡಬೇಕೆಂದು ಕರೆ ನೀಡಲಾಯಿತು,” ಎಂದು ಸಭೆಯಲ್ಲಿ ಭಾಗವಹಿಸಿದವರೊಬ್ಬರು ಹೇಳಿದರು.
ಮೊದಲ ಸೂಲಿಬೆಲೆ ಸಮಾವೇಶದ ಪೂರ್ವಭಾವಿ ಸಭೆಗೆ ಅಹ್ವಾನ ಹೋಗುತ್ತಿದಂತೆಯೇ ಪಟ್ಟಣದ ಬಸವ ಸಂಘಟನೆಗಳಿಂದಲೂ ತಟ್ಟನೆ ಪ್ರತಿಕ್ರಿಯೆ ಬಂದಿತು. ಬಸವಾದಿ ಶರಣರ ಹೆಸರನ್ನು ದುರ್ಬಳಕೆ ಮಾಡಿಕೊಂಡು ಲಿಂಗಾಯತರನ್ನು ದಾರಿ ತಪ್ಪಿಸಲು ಸೂಲಿಬೆಲೆ ಬೆಂಬಲಿಗರು ಪ್ರಯತ್ನ ಮಾಡುತ್ತಿದ್ದಾರೆಂದು ಹೇಳಿ ಅವರು ಸಮಾಜದಲ್ಲಿ ಜಾಗೃತಿ ಮೂಡಿಸಿದರು.
“ಯಾರು ಬೇಕಾದರೂ ಸಮಾವೇಶ ಮಾಡಲು ಸಂವಿಧಾನ ಸ್ವಾತಂತ್ರ್ಯ ನೀಡಿದೆ. ಆದರೆ ನಮ್ಮ ಧಾರ್ಮಿಕ ಭಾವನೆಗೆ ಧಕ್ಕೆಯಾದರೆ ನಾವು ಸುಮ್ಮನಿರುವುದಿಲ್ಲ. ಅವರು ನಿರೀಕ್ಷಿಸಿರುವ ಮಟ್ಟದಲ್ಲಿ ನೆರವು ದೊರೆಯುತ್ತದೆಯೇ ಎಂದು ನೋಡಬೇಕು,” ಎಂದು ಜಾಗತಿಕ ಲಿಂಗಾಯತ ಮಹಾಸಭಾದ ಅಮರ ನಾಡಗೌಡ ಹೇಳಿದರು.
ಸೂಲಿಬೆಲೆ ಸುಳ್ಳಿನ ಸರದಾರ, ಪೇಮೆಂಟ್ ಗಿರಾಕಿ:
ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಹೋರಾಡುತ್ತಿರುವವರ ವಿರುದ್ಧ ಕಿಡಿ ಕಾರುತ್ತಿರುವ ಸುಳ್ಳಿನ ಸರದಾರ ಮತ್ತು ಪೇಮೆಂಟ್ ಗಿರಾಕಿ ಬಾಡಿಗೆ ಭಾಷಣಕಾರ ಚಕ್ರವರ್ತಿ ಸೂಲಿಬೆಲೆ ಅವನ ವಿಡಿಯೋ ವೈರಲ್ ಆಗಿದೆ.
ಅದರಲ್ಲಿ ಅವನು ‘ಇವರ (ಲಿಂಗಾಯತರ) ವಿರುದ್ಧ ಸಮರ್ಥರಾಗಿ ಹೋರಾಡುವಂತಹ ಕ್ಷತ್ರಿಯರು ಬೇಕಾಗಿದ್ದಾರೆ. ಆ ತರಹದ intellectual ಕ್ಷತ್ರಿಯರು ಬೇಕಾಗಿದ್ದಾರೆ,’ ಎನ್ನುವುದನ್ನು ನೋಡಬಹುದು.
ಮುಂದುವರೆದು ಸೂಲಿಬೆಲೆ ಪ್ರತ್ಯೇಕ ಲಿಂಗಾಯತ ಧರ್ಮ ಇಡೀ ಹಿಂದೂ ಧರ್ಮಕ್ಕೆ ಒದಗಿರುವ ‘ಸಮಸ್ಯೆ’, ಅದಕ್ಕೆ ಪರಿಹಾರ ಹುಡುಕುವ ಪ್ರಯತ್ನ ಮಾಡಬೇಕಾಗಿದೆ ಎಂದು ಹೇಳುತ್ತಾನೆ.
ಅಕ್ಟೊಬರ್ 29 ಬೆಳಗಾವಿಯಲ್ಲಿ ಕನ್ನೇರಿ ಸ್ವಾಮಿಯ ಪರ ಹಿಂದುತ್ವ ಸಂಘಟನೆಗಳು ನಡೆಸಿದ ಸಭೆಯಲ್ಲಿ ಸೂಲಿಬೆಲೆ ಮಾಡಿದ ಭಾಷಣದ ತುಣುಕಿದು.
ವಿಡಿಯೋ ನೋಡಿ ಸಿಂಧನೂರು ಬಸವ ಕೇಂದ್ರದ ಉಪಾಧ್ಯಕ್ಷ ಬಸವಲಿಂಗಪ್ಪ ಬಾದರ್ಲಿ ಅವರು ಪ್ರತಿಕ್ರಿಯೆ ನೀಡಿದರು. “ಈ ಮನುವಾದಿಗಳ ಮನಸ್ಸಿನಲ್ಲಿ ಜಾತಿ ವ್ಯವಸ್ಥೆ ಮತ್ತು ವರ್ಣಾಶ್ರಮ ಎಷ್ಟು ಆಳವಾಗಿ ನಾಟಿದೆ ಎಂದು ಇದು ತೋರಿಸುತ್ತದೆ. ಅವರಿಗೆ ಗೊತ್ತಿಲ್ಲದಂತೆಯೇ ಇಂತಹ ಪದಗಳು ಅವರ ಬಾಯಿಂದ ಬರುತ್ತದೆ,” ಎಂದು ಹೇಳಿದರು.
“ಬಸವ ಸಂಸ್ಕೃತಿ ಅಭಿಯಾನದಲ್ಲಿ ಇಂತಹ ಮನಸ್ಥಿತಿಯ ವಿರುದ್ಧವಾಗಿಯೇ ಲಿಂಗಾಯತ ಪೂಜ್ಯರು ಮಾತನಾಡಿದ್ದು. ಹಿಂದೂ ಧರ್ಮದಲ್ಲಿ ಲಿಂಗಾಯತರು ಉಳಿದರೆ ಅವರಿಗೆ ಶೂದ್ರ ಸ್ಥಾನ ಮಾತ್ರ ದೊರೆಯುತ್ತದೆ ಎಂದು ಪೂಜ್ಯರು ಹೇಳಿದ್ದು ಸೂಲಿಬೆಲೆಯಂತವರಿಗೆ ಇಷ್ಟವಾಗಿಲ್ಲ,” ಎಂದು ಬಾದರ್ಲಿ ಹೇಳಿದರು.


