3,000 ಕೋಟಿ ರೂಪಾಯಿ ಬ್ಯಾಂಕ್ ಸಾಲ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ಅನಿಲ್ ಅಂಬಾನಿ (Anil Ambani) ಮಾಲೀಕತ್ವದ ರಿಲಯನ್ಸ್ ಪವರ್ ಲಿಮಿಟೆಡ್‌ನ (Reliance Power Limited) ಮುಖ್ಯ ಆರ್ಥಿಕ ಅಧಿಕಾರಿಯನ್ನು (CFO) ಬಂಧಿಸಿದೆ.
ರಿಲಯನ್ಸ್ ಪವರ್ ಲಿಮಿಟೆಡ್‌ನ ಮುಖ್ಯ ಆರ್ಥಿಕ ಅಧಿಕಾರಿ ಅಶೋಕ್ ಕುಮಾರ್ ಪಾಲ್ (Ashok Kumar Pal) ಅವರನ್ನು ದೆಹಲಿಯಲ್ಲಿರುವ ತನ್ನ ಕೇಂದ್ರ ಕಚೇರಿಯಲ್ಲಿ ಇಡಿ ವಿಚಾರಣೆಗೆ ಒಳಪಡಿಸಿತ್ತು. ಶುಕ್ರವಾರ ತಡರಾತ್ರಿವರೆಗೂ ನಡೆದ ವಿಚಾರಣೆ ಬಳಿಕ ಇಡಿ ಬಂಧಿಸಿದೆ.
ಅನಿಲ್ ಅಂಬಾನಿ ಮಾಲೀಕತ್ವದ ರಿಲಯನ್ಸ್ ಅನಿಲ್ ಧಿರೂಭಾಯ್ ಅಂಬಾನಿ ಗ್ರೂಪ್ ಬ್ಯಾಂಕ್‌ಗಳಿಗೆ 3,000 ಕೋಟಿ ರೂಪಾಯಿ ಸಾಲ ವಂಚಿಸಿದ ಪ್ರಕರಣ ಎದುರಿಸುತ್ತಿದೆ. ಈ ವಂಚನೆಯಲ್ಲಿ ಅನಿಲ್ ಅಂಬಾನಿ ಆಪ್ತ ಅಶೋಕ್ ಕುಮಾರ್ ಪಾಲ್ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಆರೋಪಿಸಿದೆ.
2017 ರಿಂದ 2019ರ ಅವಧಿಯಲ್ಲಿ ಯೆಸ್ ಬ್ಯಾಂಕ್ ನೀಡಿದ್ದ 3,000 ಕೋಟಿ ರೂಪಾಯಿಯಷ್ಟು ಮೊತ್ತದ ಸಾಲವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ. ಅಲ್ಲದೇ ಈ ಸಾಲ ಮಂಜೂರಾತಿಗಾಗಿ ಯೆಸ್ ಬ್ಯಾಂಕ್‌ನ (Yes Bank) ಪಾಲುದಾರು ಮತ್ತು ಅಧಿಕಾರಿಗಳಿಗೆ ಲಂಚ ನೀಡಲಾಗಿದೆಯೇ ಎಂಬ ಬಗ್ಗೆಯೂ ಇಡಿ ತನಿಖೆ ನಡೆಸುತ್ತಿದೆ.
ಜುಲೈ 24ರಂದು ಮುಂಬೈ ಒಳಗೊಂಡಂತೆ 35 ಕಡೆಗಳಲ್ಲಿ ಜಾರಿ ನಿರ್ದೇಶನಾಲಯ ಶೋಧವನ್ನು ಕೈಗೊಂಡಿತ್ತು.
ಅಶೋಕ್ ಕುಮಾರ್ ರಿಲಯನ್ಸ್ ಪವರ್ ಲಿಮಿಟೆಡ್‌ನಲ್ಲಿ ಮುಖ್ಯ ಆರ್ಥಿಕಾಧಿಕಾರಿಯಾಗಿದ್ದರು. ಈ ಕಂಪನಿಯಲ್ಲಿ ಶೇಕಡಾ 75ರಷ್ಟು ಪಾಲನ್ನು ಸಾರ್ವಜನಿಕರು ಹೊಂದಿದ್ದಾರೆ. ಕಂಪನಿಯ ನಿರ್ದೇಶಕ ಮಂಡಳಿಯ ನಿರ್ಣಯದ ದಾಖಲೆಗಳ ಪ್ರಕಾರ ಕೇಂದ್ರ ಸರ್ಕಾರಿ ಸ್ವಾಮ್ಯದ ಭಾರತೀಯ ಸೌರಶಕ್ತಿ ನಿಗಮ ಕಡೆದಿದ್ದ ಬೆಸ್ ಟೆಂಡರ್‌ಗೆ ಸಂಬಂಧಿಸಿದಂತೆ ಎಲ್ಲಾ ದಾಖಲೆಗಳನ್ನು ಅಂತಿಮಗೊಳಿಸುವ, ಅನುಮೋದಿಸುವ, ಸಹಿ ಮಾಡುವ ಮತ್ತು ಕಾರ್ಯಗತಗೊಳಿಸುವ ಮತ್ತು ರಿಲಯನ್ಸ್ ಪವರ್ ಲಿಮಿಟೆಡ್‌ನ ಹಣಕಾಸು ಸಾಮರ್ಥ್ಯವನ್ನು ಬಿಡ್‌ಗೆ ಬಳಸಿಕೊಳ್ಳುವ ಅಧಿಕಾರವನ್ನು ಮುಖ್ಯ ಅರ್ಥಿಕಾರಿಯಾಗಿದ್ದ ಅಶೋಕ್ ಕುಮಾರ್ ಪಾಲ್‌ಗೆ ನೀಡಲಾಗಿತ್ತು.
ಭಾರತೀಯ ಸೌರಶಕ್ತಿ ನಿಗಮ ಕರೆದಿದ್ದ ಬ್ಯಾಟರಿ ಶಕ್ತಿ ಸಂಗ್ರಹಣ ವ್ಯವಸ್ಥೆಯ ಟೆಂಡರ್‌ಗೆ ಅಶೋಕ್ ಕುಮಾರ್ ಪಾಲ್ 68 ಕೋಟಿ ರೂಪಾಯಿ ಮೊತ್ತದ ಬೋಗಸ್ ಬ್ಯಾಂಕ್ ಗ್ಯಾರಂಟಿಯನ್ನು ನಿಗಮಕ್ಕೆ ಸಲ್ಲಿಸಿದ್ದ. ಆತ ಸಾರ್ವಜನಿಕ ಉದ್ದಿಮೆಯನ್ನು ವಂಚಿಸುವ ಉದ್ದೇಶ ಹೊಂದಿದ್ದ ಮತ್ತು ನಿಗಮದ ಟೆಂಡರ್‌ಗಾಗಿ ಬಳಸಲಾದ ನಕಲಿ ಬ್ಯಾಂಕ್ ಗ್ಯಾರಂಟಿ ದಾಖಲೆಗಳನ್ನು ಮುಚ್ಚಿಡುವುದರಲ್ಲೂ ಈತ ಪಾತ್ರ ವಹಿಸಿದ್ದ ಎಂದು ಇಡಿ ಆರೋಪಿಸಿದೆ.


