ಬೆಂಗಳೂರಿನ ರಾಜಾಜಿನಗರದಲ್ಲಿರುವ ಖಾಸಗಿ ಆಸ್ಪತ್ರೆ ಕೆಪಿಎಂಇ ನಿಯಮಗಳನ್ನು ಉಲ್ಲಂಘಿಸಿ ನಡೆಯುತ್ತಿದೆ ಎಂಬ ಆರೋಪಗಳ ಸಂಬಂಧ ಲೆಕ್ಸಿಂಗ್ ಟನ್ ಆಸ್ಪತ್ರೆ ವಿರುದ್ಧ ತನಿಖಾ ವರದಿ ಸಲ್ಲಿಕೆ ಆಗಿದೆ.
ಲೆಕ್ಸಿಂಗ್ ಟನ್ ಹೆಲ್ತ್ ಕೇರ್ ಪ್ರೈವೇಟ್ ಲಿಮಿಟೆಡ್ ಆಸ್ಪತ್ರೆ ಸಂಬಂಧ ದೂರು ಕೇಳಿಬಂದ ಹಿನ್ನೆಲೆಯಲ್ಲಿ ಬೆಂಗಳೂರು ಪಶ್ಚಿಮ ವಲಯದ ಉಪ ನಿರ್ದೇಶಕರಿಗೆ ತನಿಖೆ ನಡೆಸಿ ತನಿಖಾ ವರದಿ ಸಲ್ಲಿಸುವಂತೆ ಬೆಂಗಳೂರು ಜಿಲ್ಲಾ ಆರೋಗ್ಯ ಅಧಿಕಾರಿಗಳು ಸೂಚಿಸಿದ್ದರು.
ಕಳೆದ ವರ್ಷ ಅಂದರೆ ನವೆಂಬರ್ ೧೧ರಂದು ಉಪ ನಿರ್ದೇಶಕರಿಗೆ ತನಿಖೆ ನಡೆಸಿ ಏಳು ದಿನಗಳ ಒಳಗೆ ವರದಿ ಸಲ್ಲಿಸುವಂತೆ ಸೂಚಿಸಲಾಗಿತ್ತು.
ಪ್ರತಿಕ್ಷಣಕ್ಕೆ ಉಪ ನಿರ್ದೇಶಕರ ಕಚೇರಿ ಹಂಚಿಕೊಂಡಿರುವ ಮಾಹಿತಿಗಳ ಪ್ರಕಾರ ನವೆಂಬರ್‌ನಲ್ಲೇ ಉಪ ನಿರ್ದೇಶಕರು ತನಿಖಾ ವರದಿ ಸಲ್ಲಿಸಿದ್ದಾರೆ.
ಲೆಕ್ಸಿಂಗ್‌ಟನ್ ಆಸ್ಪತ್ರೆ ವಿರುದ್ಧ ದೂರು ಸಲ್ಲಿಕೆಯಾಗಿರುವ ಬಗ್ಗೆ ಈ ಹಿಂದೆಯೂ ಪ್ರತಿಕ್ಷಣ ವರದಿ ಮಾಡಿತ್ತು.
ವರದಿ ಬಂದಿಲ್ಲ ಎಂದಿರುವ DHO ಕಚೇರಿ:
ಆದರೆ ಬೆಂಗಳೂರು ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿಯ (DHO) ಮಾಹಿತಿಯ ಪ್ರಕಾರ ಇನ್ನೂ ಕೂಡಾ ತನಿಖಾ ವರದಿ ಸಲ್ಲಿಕೆ ಆಗಿಲ್ವಂತೆ. ಉಪ ನಿರ್ದೇಶಕರ ಕಚೇರಿ ಮಾಹಿತಿ ಪ್ರಕಾರ ನವೆಂಬರ್‌ನಲ್ಲೇ DHOಗೆ ತನಿಖಾ ವರದಿ ಸಲ್ಲಿಕೆ ಆಗಿದೆ ಎಂದು ಹೇಳಿದರೆ, ಡಿಎಚ್‌ಒ ಕಚೇರಿಯವರು ಇನ್ನೂ ನಮ್ಮ ಕಚೇರಿಗೆ ಉಪ ನಿರ್ದೇಶಕರು ತನಿಖಾ ವರದಿಯನ್ನೇ ಸಲ್ಲಿಸಿಲ್ಲ ಎಂದು ಮಾಹಿತಿ ನೀಡಿದ್ದಾರೆ.
ಒಂದೇ ಇಲಾಖೆಯ ಒಬ್ಬರು ಅಧಿಕಾರಿಗಳ ಕಚೇರಿಗಳು ತದ್ವಿರುದ್ಧ ಮಾಹಿತಿಗಳನ್ನು ಹಂಚಿಕೊಂಡಿರುವುದು ಅಚ್ಚರಿ ಮೂಡಿಸಿದೆ. ಹಾಗಾದ್ರೆ ಈ ಅಧಿಕಾರಿಗಳಲ್ಲಿ ಲೆಕ್ಸಿಂಗ್ ಟನ್ ಖಾಸಗಿ ಆಸ್ಪತ್ರೆಯನ್ನು ಬಚಾವ್ ಮಾಡುವುದಕ್ಕೆ ಯಾರು ಪ್ರಯತ್ನಿಸ್ತಿದ್ದಾರೆ, ಇಬ್ಬರಲ್ಲಿ ಯಾವ ಅಧಿಕಾರಿ ಸುಳ್ಳು ಹೇಳುತ್ತಿದ್ದಾರೆ ಮತ್ತು ಆ ಅಧಿಕಾರಿಗಳಾಗುತ್ತಿರುವ ಲಾಭಗಳೇನು ಎಂಬ ಪ್ರಶ್ನೆ ಮೂಡಿದೆ.
ಅಚ್ಚರಿ ಮೂಡಿಸಿದ ಆರೋಗ್ಯ ಸಚಿವರ ಆಸಕ್ತಿ:
ವಿಚಿತ್ರ ಅಂದ್ರೆ ದೂರುಗಳನ್ನು ಎದುರಿಸುತ್ತಿರುವ ಈ ಖಾಸಗಿ ಆಸ್ಪತ್ರೆಯ ಇನ್ನೊಂದು ಘಟಕವನ್ನು ಬೆಂಗಳೂರಿನ ಹೆಚ್‌ಎಸ್‌ಆರ್ ಲೇಔಟ್‌ನಲ್ಲಿ ಸ್ವತಃ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರೇ ಉದ್ಘಾಟಿಸಿದ್ದರು.

ಈ ವೇಳೆಗಾಗಲೇ ಲೆಕ್ಸಿಂಗ್‌ಟನ್ ಆಸ್ಪತ್ರೆ ವಿರುದ್ಧ ದೂರು ದಾಖಲಾಗಿತ್ತು. ಆದರೆ ಈಗ ಡಿಎಚ್‌ಒ ಕಚೇರಿ ಮತ್ತು ಉಪ ನಿರ್ದೇಶಕರ ಕಚೇರಿ ನೀಡುತ್ತಿರುವ ತದ್ವಿರುದ್ಧ ಮಾಹಿತಿಗಳನ್ನು ನಾನಾ ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಸ್ವತಃ ಆರೋಗ್ಯ ಸಚಿವರೇ ಆಸ್ಪತ್ರೆಯನ್ನು ಉದ್ಘಾಟಿಸಿರುವಾಗ ನಿಯಮ ಉಲ್ಲಂಘನೆ ಆರೋಪ ಎದುರಿಸ್ತಿರುವ ಲೆಕ್ಸಿಂಗ್ ಟನ್ ಆಸ್ಪತ್ರೆ ವಿರುದ್ಧ ಕ್ರಮಕೈಗೊಳ್ಳುವ ಧೈರ್ಯವನ್ನು ಆರೋಗ್ಯ ಇಲಾಖೆಯ ಅಧಿಕಾರಿಗಳ ತೋರಿಸಬಲ್ಲರೇ ಎನ್ನುವುದು ಪ್ರಶ್ನೆಯಾಗಿಯೇ ಉಳಿದಿದೆ.


