ಲೇಔಟ್ ನಿರ್ಮಾಣಕ್ಕಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಸ್ವಾಧೀನಪಡಿಸಿಕೊಂಡಿದ್ದ ಭೂಮಿಯ ಮೂಲ ಮಾಲೀಕತ್ವ ಖಾಸಗಿ ವ್ಯಕ್ತಿಯದ್ದು ಎಂದು ಸುಳ್ಳು ಹೇಳಿ ವರದಿ ಸಲ್ಲಿಸಿರುವ ರಾಜಸ್ವ ನಿರೀಕ್ಷಕರ ವಿರುದ್ಧ ಇಲಾಖಾ ವಿಚಾರಣೆಗೆ ನೋಟಿಸ್ ಜಾರಿಯಾಗಿದೆ.
ಬೆಂಗಳೂರು ಜಿಲ್ಲಾಧಿಕಾರಿ ನೀಡಿರುವ ನೋಟಿಸ್‌ನ ಪ್ರತಿ ಪ್ರತಿಕ್ಷಣಕ್ಕೆ ಲಭ್ಯವಾಗಿದೆ.
ಈ ಬೆಂಗಳೂರು ಪೂರ್ವ ತಾಲೂಕಿನ ಕೆ ಆರ್ ಪುರಂ ಹೋಬಳಿಯ ಹೊರಮಾವು ವೃತ್ತದಲ್ಲಿ ರಾಜಸ್ವ ನಿರೀಕ್ಷಕರಾಗಿರುವ ನವೀನ್ ಕುಮಾರ್‌ಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ.
ಕರ್ನಾಟಕ ನಾಗರಿಕ ಸೇವೆ (ವರ್ಗೀಕರಣ, ನಿಯಂತ್ರಣ, ಮೇಲ್ಮನವಿ) ನಿಯಾಮವಳಿ ನಿಯಮ -11ರ ನಿಯಮದ ಮೇರೆಗೆ ನಿಯಮ-13ರಡಿ ಜಂಟಿ ಇಲಾಖಾ ವಿಚಾರಣೆಯನ್ನು ನಡೆಸಿ ಶಿಸ್ತು ಕ್ರಮ ಕೈಗೊಳ್ಳುವ ಸಂಬಂಧ ನೋಟಿಸ್ ನೀಡಲಾಗಿದೆ. ನೋಟಿಸ್ ತಲುಪಿದ 7 ದಿನದೊಳಗೆ ಉತ್ತರಿಸುವಂತೆ ರಾಜಸ್ವ ನಿರೀಕ್ಷ ನವೀನ್ ಕುಮಾರ್ ಸೂಚಿಸಲಾಗಿದೆ.
ಏನಿದು ಭೂ ಅಕ್ರಮ..?
ಬೆಂಗಳೂರಿನ ಯಶವಂತಪುರ ಹೋಬಳಿಯ ಕನ್ನಳ್ಳಿ ಗ್ರಾಮದಲ್ಲಿ ನಾಡಪ್ರಭು ಕೆಂಪೇಗೌಡ ಲೇಔಟ್ ನಿರ್ಮಾಣಕ್ಕಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ 27 ಎಕರೆ 37 ಗುಂಟೆಯಷ್ಟು ಭೂಮಿಯನ್ನು ಸ್ವಾಧೀನಪಡಿಸಿಕೊಂಡಿತ್ತು. ಸ್ವಾಧೀನಪಡಿಸಿಕೊಳ್ಳಲಾಗಿದ್ದ ಈ ಭೂಮಿಯಲ್ಲಿ 1 ಎಕರೆ 20 ಗುಂಟೆ ಭೂಮಿ ತಮ್ಮದು ಎಂದೂ, 1979ರ ಸೆಪ್ಟೆಂಬರ್ 8ರಂದು ಸರ್ಕಾರ ಈ ಭೂಮಿಯನ್ನು ತಮಗೆ ಮಂಜೂರು ಮಾಡಿತ್ತು ಎಂದು ಬೆಂಗಳೂರಿನ ಚನ್ನವೀರಪ್ಪ ಲೇಔಟ್, ಮಾಗಡಿ ರೋಡ್, ಕೊಡಿಗೆಹಳ್ಳಿ ಇಲ್ಲಿಯ ನಿವಾಸಿ ಕೆ ವಿ ರುದ್ರಮೂರ್ತಿ ವಾದಿಸಿದ್ದರು.
ಈ ಬಗ್ಗೆ ತನಿಖೆ ನಡೆಸಿದ್ದ ಬಿಡಿಎಯ ವಿಶೇಷ ಕಾರ್ಯಪಡೆ ಬೆಂಗಳೂರು ಉತ್ತರ ತಾಲೂಕು ತಹಶೀಲ್ದಾರ್ ನೀಡಿದ್ದ ವರದಿ ಆಧರಿಸಿ ಕೆ ವಿ ರುದ್ರಮೂರ್ತಿಗೆ ಪರಿಹಾರ ನೀಡುವಂತೆ ಸೂಚಿಸಿತ್ತು. ಅದರಂತೆ ಕೆ ವಿ ರುದ್ರಮೂರ್ತಿ ಶೇಕಡಾ 40:60ರ ಅನುಪಾತದಲ್ಲಿ 14,375 ಚದರ ಅಡಿ ವೀಸ್ತೀರ್ಣದ ಒಟ್ಟು 16 ಸೈಟ್‌ಗಳನ್ನು ಬಿಡಿಎ ಪರಿಹಾರ ರೂಪದಲ್ಲಿ ಮಂಜೂರು ಮಾಡಿತ್ತು.
ಆದರೆ ಕಳೆದ ವರ್ಷ ಅಂದರೆ 2024ರ ಜುಲೈ 20ರಂದು ಕಂದಾಯ ವಿಭಾಗದ ಪ್ರಾದೇಶಿಕ ಆಯುಕ್ತರು ಬಿಡಿಎ ಆಯುಕ್ತರಿಗೆ ಪತ್ರ ಬರೆದರು. ಕೆ ವಿ ರುದ್ರಮೂರ್ತಿ ತಮ್ಮದೆಂದು ಹೇಳಿಕೊಂಡಿರುವ 1 ಎಕರೆ 20 ಗುಂಟೆ ಸರ್ಕಾರಿ ಭೂಮಿಯಾಗಿದ್ದು, ಅವರಿಗೆ ಪರಿಹಾರ ರೂಪದಲ್ಲಿ ನೀಡಲಾಗಿರುವ ಸೈಟ್‌ಗಳನ್ನು ಹಿಂಪಡೆಯುವ ಸಂಬಂಧ ಕ್ರಮಕೈಗೊಳ್ಳುವಂತೆ ಸೂಚಿಸಿದ್ದರು. ಪ್ರಾದೇಶಿಕ ಆಯುಕ್ತರ ಆ ಪತ್ರದ ಬಳಿಕ ಬಿಡಿಎ ಆಯುಕ್ತರು ನೋಂದಣಿ ಮಹಾಪರಿವೀಕ್ಷಕರು ಮತ್ತು ಮುದ್ರಾಂಕಗಳ ಆಯುಕ್ತರಿಗೆ ಪತ್ರ ಬರೆದು 16 ಸೈಟ್‌ಗಳ ಪೈಕಿ ಬಾಕಿ ಇರುವ 7 ಸೈಟ್‌ಗಳನ್ನು ಕೆ ವಿ ರುದ್ರಮೂರ್ತಿ ಹೆಸರಲ್ಲಿ ನೋಂದಣಿ ಮಾಡದಂತೆ ಸೂಚಿಸಿದ್ದರು.
ಈ ಆದೇಶವನ್ನು ಪ್ರಶ್ನಿಸಿ ಕೆ ವಿ ರುದ್ರಮೂರ್ತಿಯವರು ಕರ್ನಾಟಕ ಹೈಕೋರ್ಟ್‌ನಲ್ಲಿ ದಾವೆ ಹೂಡಿದ್ದರು. ಅಕ್ಟೋಬರ್ 28, 2024ರಂದು ತೀರ್ಪು ನೀಡಿದ್ದ ನ್ಯಾಯಮೂರ್ತಿ ಎ.ಐ.ಅರುಣ್ ಅವರ ನೇತೃತ್ವದ ಏಕಸದಸ್ಯ ನ್ಯಾಯಪೀಠ ನೋಂದಣಿ ಮಹಾಪರಿವೀಕ್ಷಕರು ಮತ್ತು ಮುದ್ರಾಂಕಗಳ ಆಯುಕ್ತರಿಗೆ ಬಿಡಿಎ ಆಯುಕ್ತರು 2024ರ ಜೂನ್ 24ರಂದು ಬರೆದಿದ್ದ ಪತ್ರವನ್ನು ವಜಾಗೊಳಿಸಿತ್ತು. ಅಲ್ಲದೇ ಬಾಕಿ ಇರುವ 7 ಸೈಟ್‌ಗಳ ನೋಂದಣಿಯನ್ನು ನಾಲ್ಕು ವಾರಗಳಲ್ಲಿ ಮುಗಿಸುವಂತೆಯೂ ನಿರ್ದೇಶಿಸಿತ್ತು.
ಆದರೆ ಆ 1 ಎಕರೆ 20 ಗುಂಟೆ ಸರ್ಕಾರಿ ಭೂಮಿ ಎಂದು ಸಾಬೀತುಪಡಿಸುವ ಸಂಬಂಧ ಅಗತ್ಯ ಕ್ರಮಕೈಗೊಳ್ಳುವುದಕ್ಕೆ ರಾಜ್ಯ ಸರ್ಕಾರ ಸ್ವತಂತ್ರವಾಗಿದೆಯೆಂದೂ, ಒಂದು ವೇಳೆ ಸರ್ಕಾರದ್ದೇ ಭೂಮಿ ಎಂದು ಸಾಬೀತಾದರೆ ಆಗ ಕೆ ವಿ ರುದ್ರಮೂರ್ತಿ ಅವರು ರಾಜ್ಯ ಸರ್ಕಾರಕ್ಕೆ ಆಗಿರುವ ನಷ್ಟ ಭರ್ತಿ ಮಾಡಬೇಕೆಂದು ಹೈಕೋರ್ಟ್ ಸೂಚಿಸಿತ್ತು.
ಅಲ್ಲದೇ ಭೂ ದಾಖಲೆಗಳ ಸಂಬಂಧ ಅಕ್ರಮ ನಡೆದಿದೆ ಎಂದು ಸರ್ಕಾರ ಅಭಿಪ್ರಾಯಪಟ್ಟರೆ ಅಂತಹ ವ್ಯಕ್ತಿಗಳ ವಿರುದ್ಧ ರಾಜ್ಯ ಸರ್ಕಾರ ಕ್ರಮಕೈಗೊಳ್ಳಬಹುದು ಎಂದು ಹೈಕೋರ್ಟ್ ತೀರ್ಪಿನಲ್ಲಿ ಹೇಳಿತ್ತು. ಜೊತೆಗೆ ಈ ಭೂಮಿಯ ಮಾಲೀಕತ್ವ ಸಂಬಂಧ ಸಿವಿಲ್ ನ್ಯಾಯಾಲಯದಲ್ಲಿ ಸರ್ಕಾರ ದಾವೆ ಹೂಡಿದ್ದರೆ ಆ ನ್ಯಾಯಾಲಯ ಆ ಬಗ್ಗೆ ತೀರ್ಮಾನ ಮಾಡ್ಬೇಕು ಎಂದೂ ಹೈಕೋರ್ಟ್ ತೀರ್ಪಿನಲ್ಲಿ ಹೇಳಿತ್ತು.
ರಾಜಸ್ವ ನಿರೀಕ್ಷಕ ನವೀನ್ ಕುಮಾರ್‌ಗೆ ನೋಟಿಸ್ ಯಾಕೆ..?
ಬೆಂಗಳೂರು ಉತ್ತರ ತಾಲೂಕಿನ ಯಶವಂತಪುರ ಹೋಬಳಿಯ ಸಾಣೆಗೊರವನಹಳ್ಳಿ ವೃತ್ತದಲ್ಲಿ ರಾಜಸ್ವ ನಿರೀಕ್ಷಕರಾಗಿದ್ದ ವೇಳೆ ಸುಳ್ಳು ಮಾಹಿತಿ ಕೊಟ್ಟ ಆರೋಪ ನವೀನ್ ಮೇಲಿದೆ. ಈ ನಿರ್ದಿಷ್ಟ ಜಾಗ ಸರ್ಕಾರಕ್ಕೆ ಸೇರಿದ್ದೇ ಎಂಬ ಬಗ್ಗೆ ವರದಿ ಸಲ್ಲಿಸುವಂತೆ ಕೋರಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ವಿಶೇಷ ಭೂ ಸ್ವಾಧೀನಾಧಿಕಾರಿಗಳು ಬೆಂಗಳೂರು ಉತ್ತರ ತಾಲೂಕು ತಹಶೀಲ್ದಾರ್ ಅವರಿಗೆ ಪತ್ರ ಬರೆದಿರುತ್ತಾರೆ.
ಆ ಪತ್ರಕ್ಕೆ ಸಂಬಂಧಿಸಿದಂತೆ ನಿರ್ದಿಷ್ಟ ಜಾಗಕ್ಕೆ ಸಂಬಂಧಿಸಿದಂತೆ ಮಾಹಿತಿಯನ್ನು ನೀಡುವಂತೆ ಬೆಂಗಳೂರು ಉತ್ತರ ತಹಶೀಲ್ದಾರ್ ಅವರು ಆಗ ಕಂದಾಯ ನಿರೀಕ್ಷಕರಾಗಿದ್ದ ನವೀನ್ ಕುಮಾರ್‌ಗೆ ಪತ್ರ ಬರೆದು ಸೂಚಿಸಿರುತ್ತಾರೆ.
ಆದರೆ ಕೆ ವಿ ರುದ್ರಮೂರ್ತಿ ಹೆಸರಿಗೆ ಈ ಭೂಮಿಗೆ ಸಂಬಂಧಿಸಿದಂತೆ ನೈಜ ದಾಖಲೆಗಳು ಆಗಿಲ್ಲದೇ ಇದ್ದರೂ, ಭೂ ಮಂಜೂರಾತಿಯ ನೈಜ ದಾಖಲೆಗಳನ್ನು ಪರಿಶೀಲಿಸದೇ ಗಣಕೀಕೃತ ಪಹಣಿಯಲ್ಲಿ ತಾಂತ್ರಿಕ ದೋಷದಿಂದ ಕೆ ವಿ ರುದ್ರಮೂರ್ತಿ ಹೆಸರು ಕೈಬಿಟ್ಟು ಹೋಗಿದೆ ಎಂದು ವರದಿಯನ್ನು ನೀಡಿದ್ದರು.
ರಾಜಸ್ವ ನಿರೀಕ್ಷಕ ನವೀನ್ ಕುಮಾರ್ ಕೊಟ್ಟ ಈ ವರದಿಯ ಕಾರಣದಿಂದ ಬಿಡಿಎ ಪರಿಹಾರ ರೂಪದಲ್ಲಿ 14,375 ಚದರ ಅಡಿ ವೀಸ್ತೀರ್ಣದ ಒಟ್ಟು 16 ಸೈಟ್‌ಗಳನ್ನು ಮಂಜೂರು ಮಾಡಬೇಕಾಯಿತು. ನೈಜ ದಾಖಲೆಗಳನ್ನು ಪರಿಶೀಲಿಸದೇ ಪರಿಹಾರ ಕೊಡಲು ಕಾರಣರಾದ ಹಿನ್ನೆಲೆಯಲ್ಲಿ ನವೀನ್ ಕುಮಾರ್ ವಿರುದ್ಧ ಜಂಟಿ ಇಲಾಖಾ ವಿಚಾರಣೆ ಆರಂಭವಾಗಿದೆ.


