ಬಿ ಖಾತಾ ಮಾಲೀಕರಿಗೆ ಕಟ್ಟಡ ಯೋಜನೆ ಅನುಮೋದನೆ ಸದ್ಯಕ್ಕೆ ದೊರೆಯುವುದಿಲ್ಲ ಎಂದು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
“ಓಸಿ, ಸಿಸಿಗೂ ಇದಕ್ಕೂ ಸಂಬಂಧವಿಲ್ಲ. ಬಿ ಖಾತಾ ಮಾಲೀಕರಿಗೆ ಕಟ್ಟಡ ಯೋಜನೆ ಅನುಮೋದನೆ ಸಧ್ಯಕ್ಕೆ ದೊರೆಯುವುದಿಲ್ಲ. ಬಿ ಖಾತಾ ಬಹುಮಹಡಿ ಕಟ್ಟಡಗಳು ಎ ಖಾತೆಗಳಾಗಿ ಬದಲಾವಣೆ ಆಗುವುದಿಲ್ಲ. ಮೊದಲು ಭೂಮಿಗೆ ನಾವು ಖಾತೆ ನೀಡುತ್ತೇವೆ. ಆ ಜಾಗದಲ್ಲಿರುವ ಕಟ್ಟಡ ಕಾನೂನಿನ ವ್ಯಾಪ್ತಿಯಲ್ಲಿ ಇದೆಯೇ ಇಲ್ಲವೇ ಎಂದು ಮೊದಲು ನೋಡುತ್ತೇವೆ. ಆನಂತರ ಕಟ್ಟಡ ಅದಕ್ಕೆ ಏನು ಶುಲ್ಕ ಎಂದು ನಿಗಧಿ ಮಾಡುತ್ತೇವೆ. ಅನಿಯಂತ್ರಿತ, ಅನಧಿಕೃತ ಮಾರಾಟ ಮತ್ತು ಅಕ್ರಮ ಆಸ್ತಿಗಳಿಗೆ ಮುಂದಕ್ಕೆ ಅವಕಾಶ ದೊರೆಯದಂತೆ ಮಾಡುವುದು, ನಕಲಿ ಖಾತೆಗಳನ್ನು ಸೃಷ್ಟಿಸಿ ಮೋಸ ಮಾಡುವುದನ್ನು ತಪ್ಪಿಸಲು ಈ ತೀರ್ಮಾನ ತೆಗೆದುಕೊಳ್ಳಲಾಗಿದೆ”
ಎಂದರು.
“ಅರ್ಜಿ ಹಾಕಿದ ನಂತರ ಪಾಲಿಕೆ ಅಧಿಕಾರಿಗಳು ಪ್ರತಿ ಆಸ್ತಿಯ ಮುಂದೆ ಮಾಲೀಕನ ನಿಲ್ಲಿಸಿ ವಿಡಿಯೋ, ಫೋಟೊ ದಾಖಲೀಕರಣ ಮಾಡಿ ಅಪ್ ಲೋಡ್ ಮಾಡುತ್ತಾರೆ. ಇದನ್ನು ಪರಿಶೀಲಿಸಲು ಹಾಗೂ ತಕರಾರುಗಳನ್ನು ಸಲ್ಲಿಸಲು ಸಹ ಅವಕಾಶ ನೀಡಲಾಗಿದೆ. ಸರ್ಕಾರಿ ಜಾಗ, ಪಿಟಿಸಿಎಲ್ ಪ್ರಕರಣಗಳ ಆಸ್ತಿಗಳು, 94 ಸಿ ಸೇರಿದಂತೆ ಇತರೇ ಪ್ರಕರಣಗಳ ಜಾಗ ಇಲ್ಲಿ ಒಳಪಡುವುದಿಲ್ಲ”
ಎಂದರು.


