ಕರ್ನಾಟಕ ಖಾಸಗಿ ವೈದ್ಯಕೀಯ ಸ್ಥಾಪನೆಗಳು (KPME) ಅನುಮತಿಯನ್ನು ಪಡೆಯದೇ ಬೆಂಗಳೂರಲ್ಲಿ ಖಾಸಗಿ ಆಸ್ಪತ್ರೆಯೊಂದು ಕಳೆದ ಮೂರು ತಿಂಗಳಿಂದ ಕಾರ್ಯನಿರ್ವಹಿಸುತ್ತಿದೆ.
ಬೆಂಗಳೂರಿನ ವಾಜರಹಳ್ಳಿಯಲ್ಲಿ ಹಾಲಿಡೇ ವಿಲೇಜ್ ರಸ್ತೆಯಲ್ಲಿರುವ ಸ್ಥಿರ ಹಾಲಿಸ್ಟಿಕ್ ಹೆಲ್ತ್ ಸೆಂಟರ್‌ಗೆ (Sthira Holistic Health Centre) ಇನ್ನೂ KPME ಅಡಿಯಲ್ಲಿ ಪರವಾನಿಗೆ ಪತ್ರವೇ ಸಿಕ್ಕಿಲ್ಲ.

ಡಾ ಪದ್ಮನಾಭ ಶೆಟ್ಟಿಗಾರ್ ಇವರು ಈ ಆಸ್ಪತ್ರೆಯ ಸಂಸ್ಥಾಪಕರು ಮತ್ತು ಮುಖ್ಯ ವೈದ್ಯಾಧಿಕಾರಿಯಾಗಿದ್ದಾರೆ. ಡಾ ರೂಪಾ ಕಡಬ ಅವರು ಈ ಆಸ್ಪತ್ರೆಯ ಸಹಸಂಸ್ಥಾಪಕರಾಗಿದ್ದಾರೆ.
ಕರ್ನಾಟಕ ಖಾಸಗಿ ವೈದ್ಯಕೀಯ ಸ್ಥಾಪನೆಗಳ ಕಾಯ್ದೆ ಪ್ರಕಾರ ಕೆಪಿಎಂಇ ಅಡಿಯಲ್ಲಿ ನೋಂದಣಿ ಪಡೆದುಕೊಳ್ಳದೇ ಯಾವುದೇ ಆಸ್ಪತ್ರೆಗಳಾಗಲೀ, ಕ್ಲಿನಿಕ್‌ಗಾಗಲೀ ಅಥವಾ ಲ್ಯಾಬ್ ಆಗಲೀ ಕಾರ್ಯನಿರ್ವಹಿಸುವಂತಿಲ್ಲ.
ನೋಂದಣಿಯೇ ಆಗದ ಖಾಸಗಿ ವೈದ್ಯಕೀಯ ಸಂಸ್ಥೆಗಳನ್ನು ನಡೆಸಿದರೆ ಆಗ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 10 ಸಾವಿರ ರೂಪಾಯಿ ದಂಡವನ್ನು ವಿಧಿಸಲಾಗುತ್ತದೆ. ಅಲ್ಲದೇ ನೋಂದಣಿ ಆಗದ ಆಸ್ಪತ್ರೆಗಳನ್ನು ತಕ್ಷಣವೇ ಮುಚ್ಚುವಂತೆ ಆದೇಶ ನೀಡಬೇಕಾಗುತ್ತದೆ.

2010ರ ಕೇಂದ್ರ ಸರ್ಕಾರದ ಕ್ಲಿನಿಕಲ್ ಸ್ಥಾಪನೆಗಳ ನೋಂದಣಿ ಮತ್ತು ನಿಯಂತ್ರಣ ಕಾಯ್ದೆಯ ಪ್ರಕಾರವೂ ಯಾವುದೇ ಖಾಸಗಿ ವೈದಕೀಯ ಸಂಸ್ಥೆಗಳನ್ನು ನೋಂದಣಿ ಇಲ್ಲದ ಹೊರತು ನಡೆಸುವಂತಿಲ್ಲ.
ಕರ್ನಾಟಕದಲ್ಲಿ ನಕಲಿ ವೈದ್ಯರ ಹಾವಳಿ ಹಿನ್ನೆಲೆಯಲ್ಲಿ 2023ರ ಡಿಸೆಂಬರ್‌ನಲ್ಲಿ ಆರೋಗ್ಯ ಇಲಾಖೆ ಆಯುಕ್ತರಾಗಿದ್ದ ಡಿ.ರಂದೀಪ್ ಅವರು ಕೆಪಿಎಂಇ ಅಡಿಯಲ್ಲಿ ನೋಂದಣಿಯಾಗದೇ ಕಾರ್ಯನಿರ್ವಹಿಸುತ್ತಿರುವ ಅನಧಿಕೃತ ಆಸ್ಪತ್ರೆಗಳ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವಂತೆ ಎಲ್ಲಾ ಜಿಲ್ಲೆಗಳ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಿದ್ದರು.

ಅಲ್ಲದೇ ಕಳೆದ ವರ್ಷದ ಜೂನ್ 6ರಂದು ಕೆಪಿಎಂಇ ಅಡಿಯಲ್ಲಿ ನೀಡಲಾಗಿರುವ ನೋಂದಣಿ ಸಂಖ್ಯೆಯನ್ನೂ ಮತ್ತು ಕೆಪಿಎಂಇಯಿಂದ ಸಿಕ್ಕಿರುವ ಪ್ರಮಾಣಪತ್ರವನ್ನು ದೊಡ್ಡದಾಗಿ ಗ್ರಾಹಕರಿಗೆ ಕಾಣುವಂತೆ ಎಲ್ಲಾ ಖಾಸಗಿ ಆಸ್ಪತ್ರೆಗಳು, ಕ್ಲಿನಿಕ್‌ಗಳು, ಲ್ಯಾಬ್‌ಗಳು ಪ್ರದರ್ಶನ ಮಾಡಬೇಕೆಂದು ಆರೋಗ್ಯ ಇಲಾಖೆ ಆದೇಶ ನೀಡಿತ್ತು. ಒಂದು ವೇಳೆ ಈ ನಿಯಮ ಉಲ್ಲಂಘಿಸಿದ್ರೆ ಕೆಪಿಎಂಇ ಕಾಯ್ದೆಯ ಕಲಂ 19(5)ರ ಅಡಿಯಲ್ಲಿ ಕಠಿಣ ಕ್ರಮದ ಎಚ್ಚರಿಕೆ ನೀಡಲಾಗಿತ್ತು.
ಇದೇ ವರ್ಷದ ಜುಲೈ 23ರಂದು ಬೆಂಗಳೂರು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕೆಪಿಎಂಇ ನಿಯಮ ಉಲ್ಲಂಘನೆ ಮಾಡಿದ ಆರೋಪದಡಿಯಲ್ಲಿ ಆಸ್ಪತ್ರೆ ಮತ್ತು ಕ್ಲಿನಿಕ್ ಒಳಗೊಂಡಂತೆ 14 ಸಂಸ್ಥೆಗಳಿಗೆ ದಂಡ ವಿಧಿಸಲಾಗಿತ್ತು. ಅಲ್ಲದೇ ಆಸ್ಪತ್ರೆಗಳು ಮತ್ತು ಕ್ಲಿನಿಕ್‌ಗಳು ಒಳಗೊಂಡಂತೆ 5 ಖಾಸಗಿ ವೈದ್ಯಕೀಯ ಸಂಸ್ಥೆಗಳ ವಿರುದ್ಧ ಎಫ್‌ಐಆರ್‌ಗೆ ಆದೇಶಿಸಲಾಗಿತ್ತು.
ಮೂರು ತಿಂಗಳಿಂದ ಲೈಸನ್ಸ್ ಇಲ್ಲದೇ ನಿರ್ವಹಣೆ:
ಪ್ರತಿಕ್ಷಣ ತಂಡ ಡಾ.ಪದ್ಮನಾಭ ಶೆಟ್ಟಿಗಾರ್ ಅವರ ಜೊತೆಗೆ ಮಾತಾಡಿದ ವೇಳೆ ತಮ್ಮ ಆಸ್ಪತ್ರೆ ಕಳೆದ 3 ತಿಂಗಳಿಂದ ಅನುಮತಿಯಿಲ್ಲದೇ ಕಾರ್ಯನಿರ್ವಹಿಸುತ್ತಿರುವುದನ್ನು ಒಪ್ಪಿಕೊಂಡಿದ್ದಾರೆ. ಅಲ್ಲದೇ ಅನುಮತಿಯಿಲ್ಲದೇ ಸಾವಿರಾರು ಆಸ್ಪತ್ರೆಗಳೂ ನಡೆಯುತ್ತಿವೆ ಎಂಬ ಸಮರ್ಥನೆಯನ್ನು ಕೊಟ್ಟಿದ್ದಾರೆ.


