ಕುಡಿದು ವಾಹನ ಚಾಲನೆ ಮಾಡಿದ್ದ ಡ್ರೈವರ್‌ಗಳಿಗೆ ನೀಡಲಾಗಿದ್ದ ಚಾಲನಾ ಪರವಾನಿಗೆ (DL) ರದ್ದುಗೊಳಿಸುವಂತೆ ಬೆಂಗಳೂರು ಸಂಚಾರಿ ಪೊಲೀಸರು (Bengaluru Traffic Police) ಸಾರಿಗೆ ಇಲಾಖೆಗೆ (RTO) ಪತ್ರ ಬರೆದಿದ್ದಾರೆ.
ಮದ್ಯಪಾನ ಮಾಡಿ ಶಾಲಾ ವಾಹನಗಳನ್ನು (School Bus) ಚಾಲನೆ ಮಾಡುತ್ತಿದ್ದ 36 ಡ್ರೈವರ್‌ಗಳ ವಿರುದ್ಧ ಬೆಂಗಳೂರು ಸಂಚಾರಿ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.
ಬೆಂಗಳೂರು ಪೂರ್ವ ವಲಯದಲ್ಲಿ (Bengaluru East) 1,653 ಶಾಲಾ ವಾಹನಗಳನ್ನು ತಪಾಸಣೆ ನಡೆಸಲಾಯಿತು. ಆ ವೇಳೆ 9 ಮಂದಿ ಶಾಲಾ ಬಸ್‌ಗಳ ಡ್ರೈವರ್‌ಗಳು ಮದ್ಯ ಸೇವನೆ ಮಾಡಿರುವುದು ಪತ್ತೆಯಾಗಿದೆ.
ಬೆಂಗಳೂರು ಪಶ್ಚಿಮದಲ್ಲಿ (Bengaluru West) 1,118 ಶಾಲಾ ವಾಹನಗಳನ್ನು ತಪಾಸಣೆ ಮಾಡಿದಾಗ ಅಲ್ಲೂ 9 ಮಂದಿ ಚಾಲಕರು ಮದ್ಯಪಾನ ಸೇವನೆ ಮಾಡಿರುವುದು ದೃಢಪಟ್ಟಿದೆ.
ಬೆಂಗಳೂರು ಉತ್ತರದಲ್ಲಿ (Bengaluru North) 2,122 ಶಾಲಾ ವಾಹನಗಳನ್ನು ತಪಾಸಣೆ ನಡೆಸಿದಾಗ 13 ಚಾಲಕರು ಮದ್ಯ ಸೇವಿಸಿದ್ದು ದೃಢಪಟ್ಟರೆ, ಬೆಂಗಳೂರು ದಕ್ಷಿಣದಲ್ಲಿ (Bengaluru South) 988 ಶಾಲಾ ವಾಹನಗಳನ್ನು ತಪಾಸಣೆ ನಡೆಸಿದಾಗ 5 ಚಾಲಕರು ಮದ್ಯ ಸೇವನೆ ಮಾಡಿ ಚಾಲನೆ ಮಾಡ್ತಿರುವುದು ದೃಢಪಟ್ಟಿತ್ತು.
ಈ ಹಿನ್ನೆಲೆಯಲ್ಲಿ 36 ಮಂದಿ ಚಾಲಕರ ಡಿಎಲ್ (DL) ಅಮಾನತು ಮಾಡುವಂತೆ ಸಾರಿಗೆ ಇಲಾಖೆಗೆ ಶಿಫಾರಸ್ಸು ಮಾಡಲು ಪೊಲೀಸರು ನಿರ್ಧರಿಸಿದ್ದು, ಈ ಚಾಲಕರನ್ನು ಕೆಲಸಕ್ಕೆ ನೇಮಿಸಿಕೊಂಡಿದ್ದ ಶಾಲೆಗಳಿಗೂ ನೋಟಿಸ್ ನೀಡಲಾಗಿದೆ.
ಶಾಲಾ ವಾಹನಗಳಲ್ಲಿ ಮದ್ಯಪಾನ ಮಾಡಿ ಚಾಲನೆ ಮಾಡುವುದರ ವಿರುದ್ಧ ವಿಶೇಷ ಅಭಿಯಾನ ಕೈಗೊಂಡಿದ್ದು, ಇಂದು ಬೆಳಗ್ಗೆ ನಗರಾದ್ಯಂತ ನಡೆದ ಅಭಿಯಾನದಲ್ಲಿ, ಬೆಂಗಳೂರು ಸಂಚಾರ ಪೊಲೀಸ್ 5881 ಕ್ಕೂ ಅಧಿಕ ಶಾಲಾ ವಾಹನಗಳನ್ನು ಪರಿಶೀಲಿಸಿದರು.
36 ಚಾಲಕರನ್ನು, ಮದ್ಯಪಾನ ಮಾಡಿ ಚಾಲನೆ ಮಾಡುತ್ತಿದ್ದಕ್ಕಾಗಿ ವಶಕ್ಕೆ ಪಡೆಯಲಾಗಿದ್ದು, ಡಿಎಲ್ ಅಮಾನ್ಯಗೊಳಿಸುವುದು ಮತ್ತು ಶಾಲೆಗಳಿಗೆ ನೋಟಿಸ್ ಜಾರಿಯಂತಹ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಅಲ್ಲದೇ ಸುರಕ್ಷಿತ ಮತ್ತು ಜವಾಬ್ದಾರಿಯುತವಾಗಿ ಶಾಲೆಗೆ ತಲುಪುವುದು ಕೂಡ ಪ್ರತಿ ಮಗುವಿನ ಹಕ್ಕಾಗಿದೆ
ಎಂದು ಬೆಂಗಳೂರು ಸಂಚಾರಿ ಪೊಲೀಸರು ಹೇಳಿದ್ದಾರೆ.


