ಕೋವಿಡ್ (Covid-19) ಸಂದರ್ಭದಲ್ಲಿ ವಾಟ್ಸಾಪ್‌ನಲ್ಲಿ ಪ್ರಚೋದನಕಾರಿ ಆಡಿಯೋ ಸಂದೇಶವನ್ನು ರೆಕಾರ್ಡ್ ಮಾಡಿ ಹಬ್ಬಿಸಿದ್ದ ಮಂಗಳೂರು (Mangaluru) ಮೂಲದ ಆರೋಪಿಯ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ರದ್ದುಗೊಳಿಸುವುದಕ್ಕೆ ಕರ್ನಾಟಕ ಹೈಕೋರ್ಟ್ (Karnataka High Court) ನಿರಾಕರಿಸಿದೆ.
ಮಂಗಳೂರು ನಗರದ ಉಲ್ಲಾಳದ (Ullal) ಬಸ್ತಿಪಡುವಿನ ಅಲ್ತಾಫ್ ಹುಸೈನ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದಮ್ (JUSTICE SACHIN SHANKAR MAGADUM) ಅವರಿದ್ದ ಏಕಸದಸ್ಯ ನ್ಯಾಯಪೀಠ ವಜಾಗೊಳಿಸಿದೆ.
ಕೋವಿಡ್ ಸಂದರ್ಭದಲ್ಲಿ ಈತ ಮುಸ್ಲಿಂ ಒಕ್ಕೂಟ ಉಲ್ಲಾಳ ಎಂಬ ವಾಟ್ಸಾಪ್ ಗ್ರೂಪ್‌ನಲ್ಲಿ ಕೋವಿಡ್ ಸ್ಥಿತಿಯನ್ನು ನಿರ್ವಹಿಸುತ್ತಿರುವ ರಾಜ್ಯ ಸರ್ಕಾರ, ಸಚಿವರು ಮತ್ತು ಸ್ಥಳೀಯ ಶಾಸಕರ ಯು ಟಿ ಖಾದರ್ (MLA U.T.Khader) ಬಗ್ಗೆ ಪ್ರಚೋದನಕಾರಿ ಆಡಿಯೋವನ್ನು ರೆಕಾರ್ಡ್ ಮಾಡಿ ಹಬ್ಬಿಸಿದ್ದ.
ಯಾವುದೇ ಪರೀಕ್ಷೆಯನ್ನೂ ನಡೆಸದೇ ವಸೂಲಿ ಮಾಡಲಾಗುತ್ತಿದೆ ಮತ್ತು ಕೋವಿಡ್‌ನಿಂದಾಗಿ ಶಾಸಕರು ಲಾಭ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದ. ಅನ್ಯಧರ್ಮದ ಬಗ್ಗೆ ಪ್ರಚೋದನಕಾರಿ, ಅವಹೇಳನಕಾರಿ ಮಾತುಗಳನ್ನೂ ಆಡಿದ್ದ.
ಈತನ ಆಡಿಯೋ ರೆಕಾರ್ಡಿಂಗ್ ಕೋವಿಡ್‌ನಂತಹ ವಿಷಮ ಪರಿಸ್ಥಿತಿಯಲ್ಲಿ ಸಾರ್ವಜನಿಕ ಶಾಂತಿಗೆ ಭಂಗ, ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸುವ ಮತ್ತು ಸಾರ್ವಜನಿಕ ಕೋಮು ಸೌಹಾರ್ದತೆಗೆ ಧಕ್ಕೆ ತರುವಂತಿತ್ತು ಎನ್ನುವ ವಿಶೇಷ ಸರ್ಕಾರಿ ಅಭಿಯೋಜಕರ (ASPP) ವಾದವನ್ನು ನ್ಯಾಯಾಲಯ ಪುರಸ್ಕರಿಸಿದೆ.
FSL ವರದಿಯಲ್ಲೂ ಧ್ವನಿ ಆರೋಪಿಯದ್ದೇ ಎಂದು ದೃಢ ಪಟ್ಟಿರುವುದು ಮತ್ತು ಆರೋಪಪಟ್ಟಿಯಲ್ಲಿರುವ ಅಂಶಗಳ ಆಧಾರದಲ್ಲಿ ಆರೋಪಿ ವಿಚಾರಣೆಯನ್ನು ಎದುರಿಸಬೇಕಾಗುತ್ತದೆ ಮತ್ತು ಆ ಹಿನ್ನೆಲೆಯಲ್ಲಿ ಈ ಹಂತದಲ್ಲಿ ಹೈಕೋರ್ಟ್ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ನ್ಯಾಯಮೂರ್ತಿ ಸಚಿನ್ ಮಗದಮ್ ಆದೇಶಿಸಿದ್ದಾರೆ.


