ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಸರ್ಕಾರ ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS) ಆರ್‌ಎಸ್‌ಎಸ್ (RSS) ನಾಯಕನಿಗೆ ಅತ್ಯಂತ ಮಹತ್ವದ ಜವಾಬ್ದಾರಿ ಹುದ್ದೆಯನ್ನು ನೀಡಿ ಅದೇಶ ಹೊರಡಿಸಿದೆ.
ಯಶಸ್ವಿನಿ ಯೋಜನೆ ಜಾರಿಗೊಳಿಸಲು ಸಹಕಾರ ಇಲಾಖೆಯಲ್ಲಿ ಯಶಸ್ವಿನಿ ಸಹಕಾರಿ ಸದಸ್ಯರ ಆರೋಗ್ಯ ರಕ್ಷಣಾ ಟ್ರಸ್ಟ್ ರಚಿಸಿ ಸಹಕಾರ ಇಲಾಖೆ ಆಧೀನ ಕಾರ್ಯದರ್ಶಿ ರಂಗನಾಥ.ಜಿ. ಆದೇಶ ಹೊರಡಿಸಿದ್ದರು.
ಯಶಸ್ವಿನಿ ಟ್ರಸ್ಟ್‌ನಲ್ಲಿ 13 ಟ್ರಸ್ಟ್‌ಗಳಿದ್ದು ಆ 13 ಟ್ರಸ್ಟಿಗಳ ಪೈಕಿ RSS ನಾಯಕ ಡಾ.ಶ್ರೀಧರ್ ಕೂಡಾ ಒಬ್ಬರು.
ತುಮಕೂರು (Tumukuru) ಜಿಲ್ಲೆಯ ತಿಪಟೂರಿನಲ್ಲಿರುವ ಕುಮಾರ್ ಆಸ್ಪತ್ರೆಯ (Kumar Hospital) ಡಾ ಶ್ರೀಧರ್ ಅವರು ಆರ್‌ಎಸ್‌ಎಸ್‌ನ (RSS) ಸಕ್ರಿಯ ಕಾರ್ಯಕರ್ತರು. ಆರ್‌ಎಸ್‌ಎಸ್ (RSS) ಆಯೋಜನೆ ಮಾಡುವ ಸಭೆ-ಸಮಾರಂಭಗಳು, ಪಥಸಂಚಲನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ.
ಈ ಟ್ರಸ್ಟ್‌ಗೆ ಮುಖ್ಯಮಂತ್ರಿಗಳೇ (Chief Minister) ಪ್ರಧಾನ ಪೋಷಕರು ಮತ್ತು ಸಹಕಾರ ಇಲಾಖೆಯ ಸಚಿವರೇ ಟ್ರಸ್ಟ್‌ನ ಪೋಷಕರು. ಕೆ.ಎನ್.ರಾಜಣ್ಣ ರಾಜೀನಾಮೆ ಬಳಿಕ ಸಹಕಾರ ಇಲಾಖೆ ಈಗ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೈಯಲ್ಲೇ ಇದೆ.
ಈ ಟ್ರಸ್ಟ್‌ಗೆ ಸಹಕಾರ ಇಲಾಖೆ ಪ್ರಧಾನ ಕಾರ್ಯದರ್ಶಿ ಅಧ್ಯಕ್ಷರಾಗಿರುತ್ತಾರೆ.
ಆರ್‌ಎಸ್‌ಎಸ್ (RSS) ಪಥಸಂಚಲನದಲ್ಲಿ ಪಾಲ್ಗೊಂಡು ಸೇವಾ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂಬ ಆರೋಪದಡಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಯನ್ನೇ ಕರ್ತವ್ಯದಿಂದ ಅಮಾನತುಗೊಳಿಸಲಾಗಿತ್ತು. ಆರ್‌ಎಸ್‌ಎಸ್ ಪಥಸಂಚಲನದಲ್ಲಿ ಪಾಲ್ಗೊಂಡ ಆರೋಪದಡಿ ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್‌ನಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ನೌಕರನನ್ನೂ ಕೆಲಸದಿಂದ ತೆಗೆದು ಹಾಕಲಾಯಿತು.
ಆದರೆ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯವರೇ ಹೊಂದಿರುವ ಸಹಕಾರ ಇಲಾಖೆಯೇ ಆರ್‌ಎಸ್‌ಎಸ್ (RSS) ನಾಯಕನನ್ನು ಸರ್ಕಾರವೇ ರಚಿಸಿರುವ ಯಶಸ್ವಿ ಸಹಕಾರಿ ಸದಸ್ಯರ ಆರೋಗ್ಯ ರಕ್ಷಣಾ ಟ್ರಸ್ಟ್‌ಗೆ ಸದಸ್ಯರನ್ನಾಗಿ ನೇಮಿಸಿ ಆದೇಶ ಹೊರಡಿಸಿದ್ದು, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರ ಮಗ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆ ಸಚಿವ ಪ್ರಿಯಾಂಕ್ ಖರ್ಗೆಗೆ (Priyank Kharge) ಭಾರೀ ಮುಖಭಂಗವಾಗಿದೆ.
ವಿಚಿತ್ರ ಎಂದರೆ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿನಿಧಿಸುವ ಚಿತ್ತಾಪೂರದಲ್ಲೇ (Chittapur) ಆರ್‌ಎಸ್‌ಎಸ್ (RSS) ಪಥಸಂಚಲನಕ್ಕೆ ಅನುಮತಿ ನಿರಾಕರಿಸಲಾಗಿದೆ. ಆದರೆ ಈಗ ಆರ್‌ಎಸ್‌ಎಸ್ ಪ್ರಮುಖನಿಗೆ ಕಾಂಗ್ರೆಸ್ ಸರ್ಕಾರವೇ ಪ್ರಮುಖ ಹುದ್ದೆಯನ್ನು ನೀಡಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ:
ಕಾಂಗ್ರೆಸ್ ಸರ್ಕಾರವೇ ಆರ್‌ಎಸ್‌ಎಸ್ ಕಾರ್ಯಕರ್ತನನ್ನು ಯಶಸ್ವಿನಿ ಟ್ರಸ್ಟ್‌ಗೆ ಟ್ರಸ್ಟಿಯಾಗಿ ನೇಮಕ ಮಾಡಿದ್ದರ ವಿರುದ್ಧ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಸಿ.ಬಿ.ಶಶಿಧರ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದಿದ್ದಾರೆ.
ಅಲ್ಲದೇ ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯಲ್ಲಿ ವಿರೋಧ ಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಎಐಸಿಸಿ ಮಯೂರ್ ಜಯಕುಮಾರ್‌ಗೂ ಪತ್ರ ಬರೆದಿದ್ದಾರೆ.




