BIG Exclusive: ವಿನಯ್‌ ಕುಲಕರ್ಣಿ ವಿರುದ್ಧ ರಾಜಕೀಯ ಹಗೆತನ: ಸುಪ್ರೀಂಕೋರ್ಟ್‌ ಆದೇಶ ಮುಚ್ಚಿಟ್ಟೇ CBI ತನಿಖೆಗೆ BJP ಸರ್ಕಾರದಿಂದ ಆದೇಶ..!

ಧಾರವಾಡ ಜಿಲ್ಲಾ ಪಂಚಾಯತ್‌ನ BJP ಸದಸ್ಯರಾಗಿದ್ದ ಯೋಗೀಶ್‌ ಗೌಡ (Yogish Gowda Murder Case) ಕೊಲೆ ಪ್ರಕರಣದಲ್ಲಿ ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ, ಮಾಜಿ ಸಚಿವ ವಿನಯ್‌ ಕುಲಕರ್ಣಿ (Vinay Kulkarni) ವಿರುದ್ಧ BJP ಸರ್ಕಾರ ದ್ವೇಷ ಸಾಧನೆ ಮಾಡ್ತಾ..? ರಾಜಕೀಯ ಹಗೆತನ ಸಾಧಿಸುವ ಸಲುವಾಗಿ ಸುಪ್ರೀಂಕೋರ್ಟ್‌ ನೀಡಿದ್ದ ಆದೇಶವನ್ನೇ ಧಿಕ್ಕರಿಸಿ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಕೇಂದ್ರೀಯ ತನಿಖಾ ದಳ (CBI)ಯನ್ನು ಬಳಸಿಕೊಳ್ತಾ..? ಪ್ರತಿಕ್ಷಣಕ್ಕೆ ಲಭ್ಯವಾಗಿರುವ ದಾಖಲೆಗಳ ಪ್ರಕಾರ CBI ತನಿಖೆಗೆ ಆದೇಶಿಸುವ ವೇಳೆ BJP ಸರ್ಕಾರ ಘೋರ ಲೋಪ ಎಸಗಿರುವುದು ಸ್ಪಷ್ಟವಾಗಿದೆ.
2016ರ ಜೂನ್‌ 15ರಂದು ಯೋಗೀಶ್‌ ಗೌಡ ಕೊಲೆಯಾಗಿತ್ತು. ಈ ಕೃತ್ಯ ಸಂಬಂಧ ಧಾರವಾಡ ಉಪನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ಸಂಬಂಧ 2016ರ ಸೆಪ್ಟೆಂಬರ್‌ 14ರಂದು ಪೊಲೀಸರು ನ್ಯಾಯಾಲಯಕ್ಕೆ ಆರೋಪಪಟ್ಟಿಯನ್ನೂ ಸಲ್ಲಿಸಿದ್ದರು.
ಕರ್ನಾಟಕ ಹೈಕೋರ್ಟ್‌ ಮಹತ್ವದ ಆದೇಶ: CBI ತನಿಖೆ ಅಗತ್ಯವಿಲ್ಲ:
ಯೋಗೀಶ್‌ ಗೌಡ ಹತ್ಯೆ ಪ್ರಕರಣದ ತನಿಖೆಯಾಗಿ ನ್ಯಾಯಾಲಯಕ್ಕೆ ಧಾರವಾಡ ಪೊಲೀಸರು ಆರೋಪಪಟ್ಟಿ ಸಲ್ಲಿಸಿ 1 ವರ್ಷ 3 ತಿಂಗಳು ಕಳೆದ ಬಳಿಕ ಅಂದರೆ ಡಿಸೆಂಬರ್‌ 20, 2017ರಂದು ಯೋಗೀಶ್‌ ಗೌಡ ತಾಯಿ ತುಂಗಮ್ಮ ಪ್ರಕರಣದ ತನಿಖೆಯನ್ನು ಕೇಂದ್ರೀಯ ತನಿಖೆ ದಳ (CBI)ಗೆ ಹಸ್ತಾಂತರಿಸುವಂತೆ ಕೋರಿ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿಯನ್ನು ಸಲ್ಲಿಸಿದ್ದರು.
ತುಂಗಮ್ಮ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಕರ್ನಾಟಕ ಹೈಕೋರ್ಟ್‌ನ ಧಾರವಾಡದ ಪೀಠದ ಏಕಸದಸ್ಯ ಪೀಠದ ನ್ಯಾಯಮೂರ್ತಿ H.P.ಸಂದೇಶ್‌ ಅವರು, ಈ ಪ್ರಕರಣವನ್ನು CBIಗೆ ವಹಿಸುವ ಅಗತ್ಯವಿಲ್ಲ ಹಾಗೂ ತನಿಖೆಯನ್ನು CBIಗೆ ಹಸ್ತಾಂತರಿಸಿ ಆದೇಶಿಸುವುಕ್ಕೆ ಯಾವುದೇ ಸಕಾರಣಗಳಿಲ್ಲ ಎಂದು ಅಭಿಪ್ರಾಯಪಟ್ಟು ತುಂಗಮ್ಮ ಅವರು ಸಲ್ಲಿಸಿದ್ದ ಅರ್ಜಿಯನ್ನು 2019ರ ಮಾರ್ಚ್‌ 1ರಂದು ವಜಾಗೊಳಿಸಿದ್ದರು.

ಸುಪ್ರೀಂಕೋರ್ಟ್‌ನಲ್ಲೂ CBI ತನಿಖೆ ಕೋರಿದ್ದ ಅರ್ಜಿ ವಜಾ:
ಪ್ರಕರಣದ ತನಿಖೆಯನ್ನು CBIಗೆ ಹಸ್ತಾಂತರಿಸಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದ್ದರ ಹಿನ್ನೆಲೆಯಲ್ಲಿ ಹೈಕೋರ್ಟ್‌ ತೀರ್ಪಿನ ವಿರುದ್ಧ ತುಂಗಮ್ಮ ಅವರು 6 ತಿಂಗಳ ಬಳಿಕ ಅಂದರೆ ಜುಲೈ 1, 2019ರಂದು ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್‌ನ ಆದೇಶವನ್ನು ವಜಾಗೊಳಿಸಿ ತನ್ನ ಮಗನ ಕೊಲೆ ಪ್ರಕರಣದ ತನಿಖೆಯನ್ನು CBIಗೆ ಹಸ್ತಾಂತರಿಸುವಂತೆ ಮನವಿ ಮಾಡಿದ್ದರು.
ಆಗ ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿದ್ದ (CJI) ರಂಜನ್‌ ಗಗೋಯ್‌, ನ್ಯಾಯಮೂರ್ತಿ ದೀಪಕ್‌ ಗುಪ್ತಾ ಮತ್ತು ನ್ಯಾಯಮೂರ್ತಿ ಅನಿರುದ್ಧ ಬೋಸ್‌ ಅವರಿದ್ದ ತ್ರಿಸದಸ್ಯ ಅದೇ ತಿಂಗಳಲ್ಲಿ ಅಂದರೆ ಜುಲೈ 22, 2019ರಲ್ಲಿ ತುಂಗಮ್ಮ ಅವರು CBI ತನಿಖೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸ್ತು.
ಪ್ರಕರಣದ ಅಂಶಗಳನ್ನು ಗಮನಿಸಿದಾಗ ಕರ್ನಾಟಕ ಹೈಕೋರ್ಟ್‌ನ ಏಕಸದಸ್ಯ ಪೀಠದ ಆದೇಶದಲ್ಲಿ ಮಧ್ಯಪ್ರವೇಶ ಮಾಡುವ ಅಗತ್ಯವಿಲ್ಲ ಎಂದು ಸುಪ್ರೀಂಕೋರ್ಟ್‌ ತನ್ನ ಆದೇಶದಲ್ಲಿ ಹೇಳಿತ್ತು.

ಬದಲಾದ ಸರ್ಕಾರ..! ಸುಪ್ರೀಂಕೋರ್ಟ್‌ ಆದೇಶ ಮುಚ್ಚಿಟ್ಟೇ CBI ತನಿಖೆಗೆ ಆದೇಶ:
ಆದರೆ, ಪ್ರತಿಕ್ಷಣಕ್ಕೆ ಲಭ್ಯವಾಗಿರುವ ದಾಖಲೆಗಳ ಪ್ರಕಾರ CBI ತನಿಖೆ ಕೋರಿ ತುಂಗಮ್ಮ ಅವರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್‌ ವಜಾಗೊಳಿಸಿದ್ದ ಅಂಶವನ್ನೇ ಮರೆಮಾಚಿ ಈ ಪ್ರಕರಣದ ತನಿಖೆಯನ್ನು ಯಡಿಯೂರಪ್ಪ ಸರ್ಕಾರ ಸಿಬಿಐ ತನಿಖೆಗೆ ಒಪ್ಪಿಸಿರುವುದು ಸ್ಪಷ್ಟವಾಗಿದೆ.
ಅದರಲ್ಲೂ ಮಾಜಿ ಸಚಿವ ವಿನಯ್‌ ಕುಲಕರ್ಣಿ ವಿರುದ್ಧ ದ್ವೇಷ ಸಾಧನೆಯಾಗಿಯೇ ಕೇಂದ್ರೀಯ ತನಿಖಾ ದಳ (CBI)ಯನ್ನು BJP ಬಳಸಿಕೊಂಡಿರುವುದು ದೃಢವಾಗ್ತಿದೆ.
2019ರ ಜುಲೈ 23ರವರೆಗೂ ಕರ್ನಾಟಕದಲ್ಲಿ H.D.ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್‌-JDS ಸಮ್ಮಿಶ್ರ ಸರ್ಕಾರ ಇತ್ತು. CBI ತನಿಖೆ ಕೋರಿ ತುಂಗಮ್ಮ ಅವರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್‌ ವಜಾಗೊಳಿಸಿದ್ದು ಜುಲೈ 22, 2019ರಲ್ಲಿ.
ಕುಮಾರಸ್ವಾಮಿ ಅವರ ಸರ್ಕಾರ ಪತನವಾದ ಬಳಿಕ ಜುಲೈ 26, 2019ರಂದು ಯಡಿಯೂರಪ್ಪ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿ ರಾಜ್ಯದಲ್ಲಿ BJP ಸರ್ಕಾರ ಆಡಳಿತಕ್ಕೆ ಬಂತು.
ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದ ಕೇವಲ 19 ದಿನದಲ್ಲೇ (13-08-2019) ಯೋಗೀಶ್‌ ಗೌಡ ಅವರ ಕೊಲೆ ಪ್ರಕರಣದ ತನಿಖೆಯನ್ನು ಕೇಂದ್ರೀಯ ತನಿಖಾ ದಳ (CBI)ಗೆ ವಹಿಸಿ ರಾಜ್ಯದಲ್ಲಿದ್ದ BJP ಸರ್ಕಾರ ಆದೇಶ ಹೊರಡಿಸಿತು.
ಈ ಪ್ರಕರಣದ ತನಿಖೆಯನ್ನು CBIಗೆ ಹಸ್ತಾಂತರಿಸಿ ಆದೇಶ ಹೊರಡಿಸುವ ವೇಳೆ ರಾಜ್ಯ ಸರ್ಕಾರ ತನ್ನ ಪೀಠಿಕೆಯಲ್ಲಿ ಉಲ್ಲೇಖಿಸಿದ್ದ ಎರಡನೇ ಪ್ಯಾರಾದಲ್ಲಿ CBI ತನಿಖೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್‌ ವಜಾಗೊಳಿಸಿದ್ದರ ಬಗ್ಗೆ ಮಾಹಿತಿಯನ್ನು ಒದಗಿಸಲಾಗಿದೆ.
ಆ ಆದೇಶದ 3ನೇ ಪ್ಯಾರಾದಲ್ಲಿ ರಾಜ್ಯ ಸರ್ಕಾರದ ಕಾನೂನು ಸಲಹೆಗಾರರಾಗಿರುವ ಅಡ್ವೋಕೇಟ್‌ ಜನರಲ್‌ ಅವರ ಅಭಿಪ್ರಾಯವನ್ನು ಪಡೆಯಲಾಗಿದೆ ಎಂದು ಹೇಳಲಾಗಿದೆ.
ಸಿಆರ್‌ಪಿಸಿಯ ಕಲಂ 156 ಮತ್ತು 173(8)ರ ಅಡಿಯಲ್ಲಿ ತನಿಖೆಯನ್ನು ಮುಂದುವರಿಸುವ ಅಧಿಕಾರ ಶಾಸನಬದ್ಧ ಹಕ್ಕಾಗಿದೆ ಎಂದೂ, ವಿಚಾರಣಾ ನ್ಯಾಯಾಲಯಗಳಲ್ಲಿ ವಿಚಾರಣೆ ನಡೆಯುತ್ತಿದ್ದರೂ ಪ್ರಕರಣಗಳ ತನಿಖೆಯನ್ನು ಮತ್ತಷ್ಟು ತನಿಖೆಗಾಗಿ ಕೇಂದ್ರೀಯ ತನಿಖಾ ದಳ (CBI)ಗೆ ಹಸ್ತಾಂತರಿಸಬಹುದು ಎಂದು ಸುಪ್ರೀಂಕೋರ್ಟ್‌ ಹಲವು ಪ್ರಕರಣಗಳಲ್ಲಿ ತೀರ್ಪು ನೀಡಿದೆಯೆಂದೂ, CBIಗೆ ತನಿಖೆಯನ್ನು ಹಸ್ತಾಂತರಿಸುವುದು ರಾಜ್ಯ ಸರ್ಕಾರದ ಸ್ವತಂತ್ರ ಅಧಿಕಾರವೆಂದೂ, CBI ತನಿಖೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್‌ ವಜಾಗೊಳಿಸಿದ್ದು ಈ ಪ್ರಕರಣದ ತನಿಖೆಯನ್ನು CBIಗೆ ಹಸ್ತಾಂತರಿಸುವ ರಾಜ್ಯ ಸರ್ಕಾರದ ಅಧಿಕಾರಕ್ಕೆ ಯಾವುದೇ ನಿರ್ಬಂಧ ಹೇರುವುದಿಲ್ಲವೆಂದೂ ಅಡ್ವೋಕೇಟ್‌ ಜನರಲ್‌ ಅಭಿಪ್ರಾಯ ನೀಡಿದ್ದರು.
ಅಡ್ವೋಕೇಟ್‌ ಜನರಲ್‌ ಅವರು ನೀಡಿದ ಆ ಅಭಿಪ್ರಾಯದ ಆಧಾರದಲ್ಲಿ ಧಾರವಾಡ ಉಪ ನಗರ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವನ್ನು ಮತ್ತಷ್ಟು ತನಿಖೆಗಾಗಿ CBIಗೆ ಹಸ್ತಾಂತರಿಸಿ ಆಗ ಕರ್ನಾಟಕದಲ್ಲಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸರ್ಕಾರ ಆದೇಶ ಹೊರಡಿಸಿತ್ತು.
ಆದರೆ ಯೋಗೀಶ್‌ ಗೌಡ ಅವರ ಕೊಲೆ ಪ್ರಕರಣದ ತನಿಖೆಯನ್ನು ಮತ್ತಷ್ಟು ತನಿಖೆ ಮಾಡುವ ಸಂಬಂಧ ಸಿಬಿಐಗೆ ಹಸ್ತಾಂತರಿಸುವ ಆ ಆದೇಶದಲ್ಲಿ ರಾಜ್ಯ ಸರ್ಕಾರ 2019ರ ಜುಲೈ 22ರಂದು ಅಂದರೆ ಕೇವಲ 23 ದಿನಗಳ ಹಿಂದೆಯಷ್ಟೇ CBIತನಿಖೆ ಕೋರಿ ತುಂಗಮ್ಮ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಜಾಗೊಳಿಸಿ ಸುಪ್ರೀಂಕೋರ್ಟ್‌ ನೀಡಿದ್ದ ಆದೇಶವನ್ನು ಮರೆಮಾಚಿತ್ತು. ಆ ಬಗ್ಗೆ ರಾಜ್ಯ ಸರ್ಕಾರ ತನ್ನ ಅದೇಶದಲ್ಲಿ ಉಲ್ಲೇಖವನ್ನೇ ಮಾಡಿಲ್ಲ.

ದೆಹಲಿ ಪೊಲೀಸ್‌ ಸ್ಥಾಪನೆ ಕಾಯ್ದೆ ಹೇಳೋದೇನು..?
ಕೇಂದ್ರೀಯ ತನಿಖಾ ದಳ (CBI) ಸ್ಥಾಪನೆಯಾಗಿದ್ದು ದೆಹಲಿ ಪೊಲೀಸ್‌ ಎಸ್ಟಾಬ್ಲಿಷ್‌ಮೆಂಟ್‌ ಕಾಯ್ದೆಯ ಅಡಿಯಲ್ಲಿ. ಈ ಕಾಯ್ದೆಯ ಪ್ರಕರಣ ರಾಜ್ಯಗಳಲ್ಲಿ ಸಿಬಿಐ ತನಿಖೆ ನಡೆಸುವುದಕ್ಕೆ ಆಯಾಯ ರಾಜ್ಯಗಳ ಪೂರ್ವಾನುಮತಿ ಕಡ್ಡಾಯ. ಅಂದರೆ ಯಾವುದೇ ಪ್ರಕರಣಗಳನ್ನು ಸಿಬಿಐಗೆ ಹಸ್ತಾಂತರಿಸುವ ಸಂಬಂಧ ರಾಜ್ಯ ಸರ್ಕಾರಗಳೇ ಆದೇಶ ಹೊರಡಿಸಬೇಕು.
ಸುಪ್ರೀಂಕೋರ್ಟ್‌ ಅಥವಾ ಹೈಕೋರ್ಟ್‌ ಆದೇಶದ ಮೇರೆಗೂ CBI ತನಿಖೆಯನ್ನು ಕೈಗೊಳ್ಳಬಹುದಾಗಿದೆ.
2016ರಲ್ಲಿ ಯೋಗೀಶ್‌ ಗೌಡ ಕೊಲೆಯಾದ ಸಂದರ್ಭದಲ್ಲಿ ಕರ್ನಾಟಕದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಇತ್ತು. ಹೀಗಾಗಿ ಈ ಪ್ರಕರಣದ ತನಿಖೆಯನ್ನು CBIಗೆ ವಹಿಸಲು ಒಪ್ಪಿರಲಿಲ್ಲ. ಹೀಗಾಗಿ ಯೋಗೀಶ್‌ ಗೌಡ ತಾಯಿ ಕಾಂಗ್ರೆಸ್‌ ಸರ್ಕಾರ ಇದ್ದ ಅವಧಿಯಲ್ಲೇ ಅಂದರೆ 2017ರಲ್ಲೇ CBI ತನಿಖೆಗೆ ಆದೇಶಿಸುವಂತೆ ಕೋರಿ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಆ ಅರ್ಜಿಯನ್ನು 2019ರಲ್ಲಿ ಹೈಕೋರ್ಟ್‌ ವಜಾಗೊಳಿಸಿತ್ತು. 2019ರಲ್ಲೇ ಆರು ತಿಂಗಳ ಬಳಿಕ ತುಂಗಮ್ಮ CBI ತನಿಖೆಗೆ ಆದೇಶಿಸುವಂತೆ ಕೋರಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಸುಪ್ರೀಂಕೋರ್ಟ್‌ನಲ್ಲೂ ಅವರ ಅರ್ಜಿ ವಜಾಗೊಂಡಿತ್ತು.
ಆಘಾತ ಮೂಡಿಸಿದ ರಾಜ್ಯ ಸರ್ಕಾರದ ಆದೇಶ:
ಯೋಗೀಶ್‌ ಗೌಡ ಕೊಲೆ ಪ್ರಕರಣದ ತನಿಖೆಯನ್ನು CBIಗೆ ಒಪ್ಪಿಸುವ ಅಗತ್ಯವಿಲ್ಲವೆಂದು ಕರ್ನಾಟಕ ಹೈಕೋರ್ಟ್‌ ನೀಡಿದ ತೀರ್ಪು ಮತ್ತು ಆ ತೀರ್ಪನ್ನು ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳ ತ್ರಿಸದಸ್ಯ ಪೀಠ ಎತ್ತಿ ಹಿಡಿದಿದ್ದರೂ ತನಿಖೆಯನ್ನು CBIಗೆ ವಹಿಸಿದ್ದು ಕಾನೂನುಬಾಹಿರ ಹಾಗೂ ಇದು ಅಪಾಯಕಾರಿ ಬೆಳವಣಿಗೆ ಎಂದು ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ದೇಶದ ಸರ್ವೋಚ್ಛ ನ್ಯಾಯಾಲಯದ ಆದೇಶವನ್ನೇ ಮೀರಿ ಹೋಗುವ ಅಧಿಕಾರ ಸರ್ಕಾರಗಳಿಗೆ ಇಲ್ಲ. ಆದಾಗ್ಯೂ ರಾಜ್ಯದಲ್ಲಿ ಸರ್ಕಾರ ಬದಲಾದ ಕೇವಲ 19 ದಿನದಲ್ಲೇ CBIಗೆ ವಹಿಸಿದ್ದು ರಾಜಕೀಯ ಹಗೆತನ ಮತ್ತು ದ್ವೇಷ ಸಾಧನೆ ಸ್ಷಷ್ಟವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

Bengaluru: ವಾರ್ಡ್ ರಸ್ತೆ ಅಭಿವೃದ್ಧಿಗಾಗಿ 2000 ಕೋಟಿ ರೂ. ವಿಶೇಷ ಅನುದಾನ ಬಿಡುಗಡೆ : ಸಚಿವ ಕೃಷ್ಣ ಬೈರೇಗೌಡ

ಜಿಬಿಎ ವ್ಯಾಪ್ತಿಯ 5 ನಗರ ಪಾಲಿಕೆಗಳಲ್ಲಿ ವಾರ್ಡ್ ರಸ್ತೆಗಳನ್ನು ಸುಧಾರಿಸಿ ಅಭಿವೃದ್ಧಿಪಡಿಸಲು...

Exclusive: ಜನಪ್ರಿಯ ಆಸ್ಪತ್ರೆ ಮಾಲೀಕ Dr.ಬಶೀರ್‌ಗೆ ಮತ್ತೊಂದು ಶಾಕ್‌ – B ರಿಪೋರ್ಟ್‌ ವಜಾ – ಹಾಸನ ಪೊಲೀಸರಿಗೆ ಕೋರ್ಟ್‌ ಛೀಮಾರಿ

ರೋಗಿಯೊಬ್ಬರಿಗೆ ವಂಚಿಸಿದ್ದರ ಸಂಬಂಧ ಹಾಸನ ನಗರದಲ್ಲಿರುವ ಜನಪ್ರಿಯ ಆಸ್ಪತ್ರೆಯ ಮಾಲೀಕ ಡಾ.ಅಬ್ದುಲ್‌...

KAS ಅಧಿಕಾರಿ ಶೀತಲ್‌ T.S.ಗೆ ಕಂದಾಯ ಇಲಾಖೆಯಲ್ಲಿ ಆಗಿರುವ ಸಮಸ್ಯೆ ಏನು..?

ಕೆಎಎಸ್‌ ಅಧಿಕಾರಿ ಶೀತಲ್‌ ಟಿ.ಎಸ್‌.ಗೆ ಅವರು ತಮ್ಮ ಎಕ್ಸ್‌ ಖಾತೆಯಲ್ಲಿ ಮಾಡಿರುವ...

ಪ್ರತಿಕ್ಷಣ Exclusive: ಲೆಕ್ಸಿಂಗ್‌ಟನ್‌ ಆಸ್ಪತ್ರೆ ವಿರುದ್ಧ ತನಿಖಾ ವರದಿ ಸಲ್ಲಿಕೆ, ಇನ್ನೂ ಬಂದಿಲ್ಲ ಎಂದ DHO ಕಚೇರಿ..! ಸುಳ್ಳು ಹೇಳ್ತಿರೋದು ಯಾರು..?

ಬೆಂಗಳೂರಿನ ರಾಜಾಜಿನಗರದಲ್ಲಿರುವ ಖಾಸಗಿ ಆಸ್ಪತ್ರೆ ಕೆಪಿಎಂಇ ನಿಯಮಗಳನ್ನು ಉಲ್ಲಂಘಿಸಿ ನಡೆಯುತ್ತಿದೆ ಎಂಬ...