ಕಾಸ್ಮೋಪಾಲಿಟನ್‌ ಕ್ಲಬ್‌ ಚುನಾವಣೆ: ಹೈಕೋರ್ಟ್‌ ಆದೇಶಕ್ಕೂ ಡೋಂಟ್‌ಕೇರ್‌..!

ಕಾಸ್ಮೋಪಾಲಿಟನ್‌ ಕ್ಲಬ್‌. ಬೆಂಗಳೂರಿನ ಜಯನಗರದಲ್ಲಿರುವ ಪ್ರತಿಷ್ಠಿತ ಕ್ಲಬ್‌. ಈ ಕ್ಲಬ್‌ನಲ್ಲಿ ನಾಲ್ಕು ಸಾವಿರ ಮಂದಿ ಸದಸ್ಯರಿದ್ದಾರೆ. ಮುಂದಿನ ತಿಂಗಳು ಅಂದರೆ ಆಗಸ್ಟ್‌ 9ರಂದು ಕ್ಲಬ್‌ಗೆ ಹೊಸ ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿ ಆಯ್ಕೆಗಾಗಿ ಚುನಾವಣೆ ನಡೆಯಲಿದೆ. ಆದ್ರೆ ಕ್ಲಬ್‌ಗೆ ನಡೆಯಲಿರುವ ಈ ಚುನಾವಣೆ ಪ್ರಕ್ರಿಯೆಗಳ ಬಗ್ಗೆಯೇ ಕ್ಲಬ್‌ನ ಹಲವು ಸದಸ್ಯರು ಅನುಮಾನಗಳನ್ನು ವ್ಯಕ್ತಪಡಿಸಿದ್ದಾರೆ. ಕರ್ನಾಟಕ ಹೈಕೋರ್ಟ್‌ನ ಆದೇಶದ ಪ್ರಕಾರ ಕ್ಲಬ್‌ನ ಬೈಲಾದ ಪ್ರಕಾರ ಪಾರದರ್ಶಕ, ನಿಷ್ಪಕ್ಷಪಾತ ಚುನಾವಣೆ ನಡೆಸುವಂತೆ ಚುನಾವಣಾಧಿಕಾರಿಗೆ ಆಗ್ರಹಿಸಿದ್ದಾರೆ.

ಕ್ಲಬ್‌ನ ಬೈಲಾ ಏನ್‌ ಹೇಳುತ್ತೆ:

ಕ್ಲಬ್‌ನ 12(a)(e) ಬೈಲಾದ ಪ್ರಕಾರ ಕ್ಲಬ್‌ನ ಅಧ್ಯಕ್ಷ, ಉಪಾಧ್ಯಕ್ಷ, ಗೌರವ ಕಾರ್ಯದರ್ಶಿ, ಖಜಾಂಜಿ ಮತ್ತು ಕಾರ್ಯಕಾರಿ ಸಮಿತಿಗೆ 7 ಮಂದಿ ಸದಸ್ಯರ ಆಯ್ಕೆ ಸಂಬಂಧ ಚುನಾವಣೆ ಘೋಷಣೆ ಮಾಡಲಾಗಿದೆ. ಕ್ಲಬ್‌ನ 13.1ರ ಬೈಲಾ ಪ್ರಕಾರ ಕ್ಲಬ್‌ಗೆ ಚುನಾವಣೆಯನ್ನು ನಡೆಸಲಾಗುತ್ತಿದೆ ಎಂದು ಚುನಾವಣಾಧಿಕಾರಿ ಘೋಷಿಸಿದ್ದಾರೆ.

ಕಾಸ್ಮೋಪಾಲಿಟನ್‌ ಕ್ಲಬ್‌ನ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಇವತ್ತೇ ಅಂದರೆ ಜುಲೈ ೨೫ ಕಡೆಯ ದಿನ. ಜುಲೈ ೩೧ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ.

ಎರಡು ವರ್ಷಗಳ ಹಿಂದೆಯಷ್ಟೇ ತಿದ್ದುಪಡಿ ಮಾಡಲಾದ ಕ್ಲಬ್‌ನ ಬೈಲಾದ ಪ್ರಕಾರ ಕ್ಲಬ್‌ನಲ್ಲಿ ನಾಲ್ಕು ಬಾರಿ ಅಧಿಕಾರವಧಿ ಪೂರೈಸಿದ ಪದಾಧಿಕಾರಿಗಳು ಅಥವಾ ಕಾರ್ಯಕಾರಿ ಸಮಿತಿ ಸದಸ್ಯರು ಚುನಾವಣೆಗೆ ಸ್ಪರ್ಧಿಸುವಂತಿಲ್ಲ. ಅಷ್ಟೇ ಅಲ್ಲದೇ ಸತತವಾಗಿ ಎರಡು ಬಾರಿ ಅಧಿಕಾರವಧಿ ಪೂರೈಸಿದ ಪದಾಧಿಕಾರಿಗಳು ಕೂಡಾ ಚುನಾವಣೆಗೆ ಸ್ಪರ್ಧಿಸುವಂತಿಲ್ಲ.

2024ರ ಸೆಪ್ಟೆಂಬರ್‌ನಲ್ಲಿ ತಿದ್ದುಪಡಿ ಮಾಡಲಾಗಿರುವ ಬೈಲಾ

ಆದ್ರೆ ಕ್ಲಬ್‌ನ ಬೈಲಾವನ್ನೇ ಉಲ್ಲಂಘಿಸಿ ಕ್ಲಬ್‌ನ ಹಾಲಿ ಅಧ್ಯಕ್ಷ ಎಸ್‌.ಸಿ.ಕರೀಗೌಡ, ಗೌರವ ಖಜಾಂಚಿ ತಲ್ಲಂ ಪ್ರಸಾದ್‌ ನಾಮಪತ್ರ ಸಲ್ಲಿಸಿದ್ದು ಅಚ್ಚರಿ ಮೂಡಿಸಿದೆ.

ಕಾಸ್ಮೋಪಾಲಿಟನ್‌ ಕ್ಲಬ್‌ನ ಅಧಿಕೃತ ದಾಖಲೆಗಳ ಪ್ರಕಾರ ಕರೀಗೌಡ ಅವರು ನಾಲ್ಕು ಅವಧಿಗೆ ಕ್ಲಬ್‌ನ ಪದಾಧಿಕಾರಿಯಾಗಿದ್ದಾರೆ. 1976-1978ರ ಅವಧಿಗೆ ಗೌರವ ಕಾರ್ಯದರ್ಶಿಯಾಗಿಯೂ, 1993-1995, 2010-2012, 2024-2026ರ ಅವಧಿಗೆ ಮೂರು ಬಾರಿ ಅಧ್ಯಕ್ಷರಾಗಿಯೂ ಆಯ್ಕೆಯಾಗಿದ್ದರು. ತಿದ್ದುಪಡಿ ಆಗಿರುವ ಬೈಲಾದ ಪ್ರಕಾರ ಇವರಿಗೂ ಚುನಾವಣೆಗೆ ನಿಲ್ಲಲು ಅರ್ಹತೆ ಇಲ್ಲ.

ಇನ್ನು ಕ್ಲಬ್‌ನ ಗೌರವ ಖಜಾಂಚಿಯಾಗಿರುವ ತಲ್ಲಂ ಪ್ರಸಾದ್‌ ಅವರು ನಾಲ್ಕು (4) ಬಾರಿ ಕಾರ್ಯಕಾರಿ ಸಮಿತಿ ಸದಸ್ಯರಾಗಿಯೂ 1 ಬಾರಿ ಗೌರವ ಖಜಾಂಚಿಯಾಗಿ ಸೇವೆ ಸಲ್ಲಿಸಿದ್ದಾರೆ. ಈ ಮೂಲಕ ಒಟ್ಟು ಐದು ಅವಧಿಗೆ ತಲ್ಲಂ ಪ್ರಸಾದ್‌ ಅವರು ಕ್ಲಬ್‌ನಲ್ಲಿ ಅಧಿಕಾರ ಅನುಭವಿಸಿದ್ದಾರೆ. ತಲ್ಲಂ ಪ್ರಸಾದ್‌ ಅವರು 2000ನೇ ಇಸವಿಯಿಂದ 2010ರವರೆಗೆ ಸತತವಾಗಿ ಮೂರು ಬಾರಿ, 2012-2015ರವರೆಗೆ 1 ಬಾರಿ ಕಾರ್ಯಕಾರಿ ಸಮಿತಿ ಸದಸ್ಯರಾಗಿ, 2024-2026ರವರೆಗೆ ಗೌರವ ಖಜಾಂಚಿಯಾಗಿದ್ದರು. ಇವರಿಗೂ ಕ್ಲಬ್‌ ಎರಡೂ ಬೈಲಾಗಳ ಪ್ರಕಾರ ಚುನಾವಣೆಗೆ ನಿಲ್ಲಲು ಅರ್ಹತೆ ಇಲ್ಲ.

ಇನ್ನು, ಈಗ ಗೌರವ ಕಾರ್ಯದರ್ಶಿಯಾಗಿರುವ ಎಂ.ಆರ್‌. ಸಂಜಯ್‌ ಅವರು 2012-2015ರವರೆಗೆ (ಸತತ ಎರಡು ಬಾರಿ) ಮತ್ತು 2022-2024ರವರೆಗೆ ಒಟ್ಟು ಮೂರು ಬಾರಿ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಹಾಗೂ 2024ರಿಂದ 2026ರವರೆಗೆ ಗೌರವ ಕಾರ್ಯದರ್ಶಿಯಾಗಿದ್ದರು (ಮತ್ತೊಮ್ಮೆ ಸತತ ಎರಡು ಬಾರಿ). ಇವರು ಕೂಡಾ ಎರಡು ಸಲ ಸತತವಾಗಿ ಎರಡು ಬಾರಿ ಕ್ಲಬ್‌ನಲ್ಲಿ ಅಧಿಕಾರ ಅನುಭವಿಸಿದ್ದಾರೆ. ಇವರಿಗೂ ಕ್ಲಬ್‌ನ ಎರಡೂ ಬೈಲಾಗಳ ಪ್ರಕಾರ ಚುನಾವಣೆಗೆ ಸ್ಪರ್ಧಿಸಲು ಅರ್ಹತೆ ಇಲ್ಲ.

ಸ್ಪರ್ಧೆಗೆ ನಿರ್ಬಂಧ, ಹೊಸಬರಿಗೆ ಅವಕಾಶ:

2024ರ ಸೆಪ್ಟೆಂಬರ್‌ನಲ್ಲಿ ನಡೆದಿದ್ದ ಕ್ಲಬ್‌ನ ವಾರ್ಷಿಕ ಸಭೆಯಲ್ಲಿ 9ನೇ ಬೈಲಾಕ್ಕೆ ತಿದ್ದುಪಡಿ ತಂದು ಹೊಸ ಕಲಂನ್ನು ಸೇರ್ಪಡೆಗೊಳಿಸಲಾಯಿತು. ಹೊಸದಾಗಿ ಸೇರ್ಪಡೆಗೊಳಿಸಲಾದ 9(d)(i(a) ಬೈಲಾದ ಪ್ರಕಾರ ಕ್ಲಬ್‌ನ ಕಾರ್ಯಕಾರಿ ಸಮಿತಿಯಲ್ಲಿ ಸದಸ್ಯರಾಗಿ ಅಥವಾ ಪದಾಧಿಕಾರಿಯಾಗಿ ನಾಲ್ಕು ಅವಧಿಯನ್ನು ಪೂರೈಸಿದವರು ಮತ್ತೆ ಚುನಾವಣೆಗೆ ಸ್ಪರ್ಧಿಸುವಂತಿಲ್ಲ.

ಕ್ಲಬ್‌ನಲ್ಲಿ ಹೆಚ್ಚು ಸದಸ್ಯರಿಗೆ ಅವಕಾಶ ಮಾಡಿಕೊಡುವುದು ಈ ಬೈಲಾ ತಿದ್ದುಪಡಿಯ ಉದ್ದೇಶವಾಗಿತ್ತು. ಅಲ್ಲದೇ ಕ್ಲಬ್‌ನ ಬೈಲಾ 13(2)(b) ಅಡಿಯಲ್ಲಿ ಸತತ ಎರಡು ಬಾರಿ ಕಾರ್ಯಕಾರಿ ಸಮಿತಿಗೆ ಆಯ್ಕೆಯಾದವರು ಸತತ ಮೂರನೇ ಬಾರಿಗೆ ಚುನಾವಣೆಗೆ ಸ್ಪರ್ಧಿಸುವಂತಿಲ್ಲ.

ಅಲ್ಲದೇ ಚುನಾವಣಾಧಿಕಾರಿಯಾಗಿರುವ ಸತ್ಯನಾರಾಯಣ ಅವರು ಜುಲೈ 10ರಂದು ಹೊರಡಿಸಿದ ಚುನಾವಣಾ ಅಧಿಸೂಚನೆ ಪ್ರಕಾರ ಕ್ಲಬ್‌ನ ಬೈಲಾ 13.2ರ ಪ್ರಕಾರ ಕ್ಲಬ್‌ನ ಪದಾಧಿಕಾರಿಯಾಗಿ ಅಥವಾ ಕಾರ್ಯಕಾರಿ ಸಮಿತಿ ಸದಸ್ಯರಾಗಿರುವವರು ಸತತ ಮೂರನೇ ಬಾರಿಗೆ ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎಂದು ಆದೇಶಿಸಿದ್ದಾರೆ.

ಕ್ಲಬ್‌ನ ಈ ನಿಯಮಗಳ ಪ್ರಕಾರವೇ ಕ್ಲಬ್‌ನ ಹಾಲಿ ಅಧ್ಯಕ್ಷ ಕರೀಗೌಡ, ಗೌರವ ಖಜಾಂಚಿ ತಲ್ಲಂ ಪ್ರಸಾದ್‌, ಗೌರವ ಕಾರ್ಯದರ್ಶಿ ಎಂ.ಆರ್‌ ಸಂಜಯ್‌ಗೆ ಈ ಬಾರಿ ನಡೆಯುತ್ತಿರುವ ಚುನಾವಣೆಗೆ ನಿಲ್ಲುವುದಕ್ಕೆ ಅರ್ಹತೆ ಇಲ್ಲ.

ಚುನಾವಣಾಧಿಕಾರಿ ಮೇಲೆಯೇ ಅನುಮಾನ:

ಆದರೆ ಚುನಾವಣಾ ಅಧಿಸೂಚನೆಯಲ್ಲಿ ಹೊಸದಾಗಿ ಸೇರ್ಪಡೆಗೊಳಿಸಲಾದ 9(d)(i(a) ಬೈಲಾದ ಪ್ರಕಾರ ಕ್ಲಬ್‌ನ ಕಾರ್ಯಕಾರಿ ಸಮಿತಿಯಲ್ಲಿ ಸದಸ್ಯರಾಗಿ ಅಥವಾ ಪದಾಧಿಕಾರಿಯಾಗಿ ನಾಲ್ಕು ಅವಧಿಯನ್ನು ಪೂರೈಸಿದವರು ಮತ್ತೆ ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎಂಬ ಬಗ್ಗೆ ಉಲ್ಲೇಖ ಮಾಡದಿರುವ ಚುನಾವಣಾಧಿಕಾರಿ ಸತ್ಯನಾರಾಯಣ ಅವರ ನಿರ್ಧಾರದ ಬಗ್ಗೆಯೇ ಅನುಮಾನ, ಸಂಶಯಗಳನ್ನು ಕ್ಲಬ್‌ನ ಸದಸ್ಯರು ವ್ಯಕ್ತಪಡಿಸಿದ್ದಾರೆ.

ಈ ಬೈಲಾದ ಪ್ರಕಾರ ಈ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಕರೀಗೌಡ, ತಲ್ಲಂ ಪ್ರಸಾದ್‌ ಅವರು ಸ್ಪರ್ಧೆಯನ್ನೇ ಮಾಡುವಂತಿಲ್ಲ. 2024ರಲ್ಲಿ ಸ್ವತಃ ಕಾಸ್ಮೋಪಾಲಿಟನ್‌ ಕ್ಲಬ್‌ ತನ್ನ ವಿಶೇಷ ಸಾಮಾನ್ಯ ಸಭೆಯಲ್ಲಿ ನಾಲ್ಕು ಅವಧಿಗೆ ಪದಾಧಿಕಾರಿ ಅಥವಾ ಕಾರ್ಯಕಾರಿ ಸಮಿತಿ ಸದಸ್ಯರಾಗಿದ್ದವರು ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎಂಬ ನಿಯಮವನ್ನು ಅಂಗೀಕರಿಸಿದ್ದರೂ ಈ ಬಾರಿಯ ಚುನಾವಣೆಯ ಅಧಿಸೂಚನೆಯಲ್ಲಿ ತಿದ್ದುಪಡಿ ಆಗಿರುವ ಆ ಬೈಲಾವನ್ನೇ ಹೊರಗಿಟ್ಟು ಚುನಾವಣಾಧಿಕಾರಿ ಚುನಾವಣಾ ಅಧಿಸೂಚನೆ ಪ್ರಕಟಿಸಿರುವ ಬಗ್ಗೆ ಕ್ಲಬ್‌ನ ಸದಸ್ಯರು ಅನುಮಾನ ವ್ಯಕ್ತಪಡಿಸಿದ್ದಾರೆ. ಹಾಲಿ ಅಧ್ಯಕ್ಷ ಕರೀಗೌಡ ಮತ್ತು ತಲ್ಲಂ ಪ್ರಸಾದ್‌ ಅವರಿಗೆ ಅನುಕೂಲ ಮಾಡಿಕೊಡುವ ಸಲುವಾಗಿಯೇ ಚುನಾವಣಾಧಿಕಾರಿ ಸತ್ಯನಾರಾಯಣ ಅವರು ಕ್ಲಬ್‌ನ ಈ ಮಹತ್ವದ ಬೈಲಾವನ್ನು ಕಡೆಗಣಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಅಷ್ಟೇ ಅಲ್ಲದೇ, ಕಾಸ್ಮೋಪಾಲಿಟನ್‌ ಕ್ಲಬ್‌ನ ಚುನಾವಣೆ ಸಂಬಂಧ ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರ ನೇತೃತ್ವದ ಏಕಸದಸ್ಯ ಪೀಠ ಇದೇ ತಿಂಗಳು ಅಂದರೆ ಜುಲೈ 1ರಂದು ಮಹತ್ವದ ಆದೇಶಗಳನ್ನು ನೀಡಿತ್ತು. 1) ಕ್ಲಬ್‌ನ ಬೈಲಾ 12 ಮತ್ತು 13.1ರ ಪ್ರಕಾರವೇ ಕಟ್ಟುನಿಟ್ಟಾಗಿ ಚುನಾವಣೆ ನಡೆಸಬೇಕು. 2) ಕೋ-ಆಪರೇಟಿವ್‌ ಸೊಸೈಟಿಗಳ ಜಿಲ್ಲಾ ನೋಂದಣಾಧಿಕಾರಿಯವರು ಕ್ಲಬ್‌ನ ಚುನಾವಣಾ ಪ್ರಕ್ರಿಯೆಗಳ ಮೇಲುಸ್ತುವಾರಿ ನೋಡಿಕೊಳ್ಳುವ ಸಂಬಂಧ ಮೇಲ್ವಿಚಾರಕರನ್ನು ನೇಮಿಸಬೇಕು.

ಹೈಕೋರ್ಟ್‌ ಆದೇಶವನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವಂತೆ ಕ್ಲಬ್‌ನ ಸದಸ್ಯರು ಸಹಕಾರ ಇಲಾಖೆ ಕಾರ್ಯದರ್ಶಿ ಮತ್ತು ಬೆಂಗಳೂರು ನಗರ ಜಿಲ್ಲಾ ಕೋ-ಆಪರೇಟಿವ್‌ ಸೊಸೈಟಿಗಳ ನೋಂದಣಾಧಿಕಾರಿಗೆ ಪತ್ರಗಳನ್ನೂ ಬರೆದಿದ್ದಾರೆ. ಕ್ಲಬ್‌ಗೆ ಚುನಾವಣೆ ಘೋಷಣೆಯಾಗಿದ್ದು ಹೈಕೋರ್ಟ್‌ ಆದೇಶ ಬಂದ ಬಳಿಕ. ಆದ್ರೆ ಇದುವರೆಗೆ ಚುನಾವಣಾ ಪ್ರಕ್ರಿಯೆಗಳ ಮೇಲುಸ್ತುವಾರಿಗಾಗಿ ರಾಜ್ಯ ಸರ್ಕಾರ ಇನ್ನೂ ಯಾರನ್ನೂ ನೇಮಕ ಮಾಡಿಲ್ಲ. ಕ್ಲಬ್‌ನ ಚುನಾವಣೆ ಸಂಬಂಧ ಹೈಕೋರ್ಟ್‌ ಆದೇಶ ಪಾಲನೆಗೆ ಬೆಂಗಳೂರು ನಗರ ಜಿಲ್ಲಾ ಕೋ-ಆಪರೇಟಿವ್‌ ಸೊಸೈಟಿಗಳ ನೋಂದಣಾಧಿಕಾರಿ ತೋರುತ್ತಿರುವ ಅಸಡ್ಡೆ ಕೂಡಾ ಕ್ಲಬ್‌ನ ಸದಸ್ಯರಲ್ಲಿ ನಾನಾ ಅನುಮಾನ ಸೃಷ್ಟಿಸಿದೆ.

ಚುನಾವಣಾಧಿಕಾರಿ ಹೇಳಿದ್ದೇನು..?

ಕಾಸ್ಮೋಪಾಲಿಟನ್‌ ಕ್ಲಬ್‌ ಚುನಾವಣೆಯಲ್ಲಿ ಚುನಾವಣಾಧಿಕಾರಿಯಾಗಿ ನೇಮಕಗೊಂಡಿರುವ ಸತ್ಯನಾರಾಯಣ್‌ ಅವರನ್ನು ಪ್ರತಿಕ್ಷಣ ಸಂಪರ್ಕಿಸಿ ಪ್ರತಿಕ್ರಿಯೆ ಕೇಳಿತು. ಅವರು ಪ್ರತಿಕ್ಷಣಕ್ಕೆ ಕೊಟ್ಟ ಪ್ರತಿಕ್ರಿಯೆ ಹೀಗಿದೆ:

ʻನೀವು ಏನ್‌ ಬೇಕಾದ್ರೂ ಬರ್ಕೊಳ್ಳಿ ಸರ್‌. ಐ ಡೋಂಟ್‌ ಗೋಯಿಂಗ್‌ ಟು ಆನ್ಸರ್‌ ದ್ಯಾಟ್‌ ಆಲ್‌ ಥಿಂಗ್ಸ್‌. ಕ್ಲಬ್‌ನ ಸದಸ್ಯರು ಬೇಕಾದ್ರೆ ನನಗೆ ದೂರನ್ನು ಕೊಡಬೇಕಾಬಹುದು. ಚುನಾವಣಾ ಮೇಲುಸ್ತುವಾರಿ ನೇಮಕ ಆಗುತ್ತೆ. ಚುನಾವಣಾ ಮೇಲುಸ್ತುವಾರಿ ನೇಮಕ ಬಗ್ಗೆ ನೀವು ಸರ್ಕಾರವನ್ನೇ ಕೇಳ್ಬೇಕು. ಹೈಕೋರ್ಟ್‌ ಆದೇಶದಲ್ಲಿ ಏನಿದೆ ಅದರ ಪ್ರಕಾರ ನಾನು ಚುನಾವಣೆ ನಡೆಸ್ತಿದ್ದೇನೆʼ

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

Bengaluru: ಟ್ರಾಫಿಕ್‌ ಸಿಗ್ನಲ್‌ ಬಳಿ ವಾಹನಗಳನ್ನು ನಿಲ್ಲಿಸುವಂತಿಲ್ಲ – ಬೆಂಗಳೂರಲ್ಲಿ ಹೊಸ ನಿಯಮ

ಗ್ರೇಟರ್‌ ಬೆಂಗಳೂರು (Greater Bengaluru) ನಗರದ ಸಿಗ್ನಲ್‌ಗಳಿಂದ 75 ಮೀಟರ್ ವ್ಯಾಪ್ತಿಯಲ್ಲಿ...

Bengaluru: ಫುಟ್‌ಪಾತ್‌ ಮೇಲೆ ವ್ಯಾಪಾರಕ್ಕೆ ಜುಲೈ 1ರಿಂದಲೇ ನಿಷೇಧ – ಸಚಿವ ಕೃಷ್ಣ ಬೈರೇಗೌಡ

ಜಿಬಿಎ (GBA) ವ್ಯಾಪ್ತಿಯ ಪಾದಚಾರಿ ಮಾರ್ಗಗಳಲ್ಲಿ (footpath) ಉಂಟಾಗಿರುವ ಒತ್ತುವರಿಗಳನ್ನು ಅಂಗಡಿ...

Bengaluru: ವಾರ್ಡ್ ರಸ್ತೆ ಅಭಿವೃದ್ಧಿಗಾಗಿ 2000 ಕೋಟಿ ರೂ. ವಿಶೇಷ ಅನುದಾನ ಬಿಡುಗಡೆ : ಸಚಿವ ಕೃಷ್ಣ ಬೈರೇಗೌಡ

ಜಿಬಿಎ ವ್ಯಾಪ್ತಿಯ 5 ನಗರ ಪಾಲಿಕೆಗಳಲ್ಲಿ ವಾರ್ಡ್ ರಸ್ತೆಗಳನ್ನು ಸುಧಾರಿಸಿ ಅಭಿವೃದ್ಧಿಪಡಿಸಲು...