ಋತುಚಕ್ರ ರಜೆ ನೀತಿ – 2025ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಅಂಕಿತ ದೊರೆತಿದೆ. ಇದರೊಂದಿಗೆ ನಾಡಿನ ಉದ್ಯೋಗಸ್ಥ ಮಹಿಳೆಯರಿಗೆ ಋತುಚಕ್ರದ ರಜೆ ಕೊಡಿಸಲು ಮಾನ್ಯ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ನಡೆಸಿದ ಸತತ ಪ್ರಯತ್ನಕ್ಕೆ ಫಲ ದೊರೆತಿದೆ.
ಈ ನೀತಿಯ ಜಾರಿಯೊಂದಿಗೆ ಪ್ರತಿತಿಂಗಳು ಋತು ಚಕ್ರದ ಅವಧಿಯಲ್ಲಿ ವೇತನ ಸಹಿತ ಒಂದು ದಿನದ ರಜೆ ಎಲ್ಲ ಸರ್ಕಾರಿ ಹಾಗೂ ಖಾಸಗಿ ವಲಯಗಳಲ್ಲಿ ಕೆಲಸ ಮಾಡುತ್ತಿರುವ ರಾಜ್ಯದ ಮಹಿಳೆಯರಿಗೆ ಸಿಗಲಿದೆ. ಈ ಮೂಲಕ ವರ್ಷಕ್ಕೆ 12 ವೇತನ ಸಹಿತ ರಜೆ ಸಿಕ್ಕಂತಾಗುತ್ತದೆ.
ಮೊದಲಿಂದಲೂ ಕೆಲಸ ಮಾಡುವ ಮಹಿಳೆಯರಿಗೆ, ಮಹಿಳಾ ಕಾರ್ಮಿಕರಿಗೆ ನೆರವಾಗುವ ಹಲವು ಯೋಜನೆಗಳನ್ನು ಕಾರ್ಮಿಕ ಇಲಾಖೆಯ ಮೂಲಕ ರೂಪಿಸುತ್ತಿರುವ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರ ಹಿರಿಮೆಗೆ ಮತ್ತೊಂದು ಗರಿ ಮೂಡಿದೆ. ಇಂದು ಈ ಪ್ರಸ್ತಾವನೆಗೆ ಸಚಿವ ಸಂಪುಟ ಒಪ್ಪಿಗೆ ನೀಡಿರುವುದರ ಹಿಂದೆ ಸಚಿವ ಸಂತೋಷ್ ಲಾಡ್ ಅವರ ಅಪಾರ ಶ್ರಮವಿದೆ.
ಬೇರೆ ಬೇರೆ ರಾಜ್ಯಗಳಲ್ಲಿ, ದೇಶಗಳಲ್ಲಿ ಈ ವಿಷಯದಲ್ಲಿರುವ ರಜೆ ನೀತಿಗಳನ್ನೆಲ್ಲ ಕೂಲಂಕುಷವಾಗಿ ಅಧ್ಯಯನ ನಡೆಸಿರುವ ಸಂತೋಷ್ ಲಾಡ್ ಅವರು ಕರ್ನಾಟಕದಲ್ಲೂ ಈ ನೀತಿ ಸಮರ್ಪಕವಾಗಿ ಜಾರಿಗೆ ಬರುವಂತೆ ನೋಡಿಕೊಂಡಿದ್ದಾರೆ. ಸರ್ಕಾರಿ ವಲಯದಷ್ಟೇ ಅಲ್ಲದೇ ಖಾಸಗಿ ವಲಯದ ಮಹಿಳಾ ಉದ್ಯೋಗಿಗಳಿಗೂ ಈ ನೀತಿಯ ಲಾಭ ಸಿಗಲಿದೆ. ಈಗಾಗಲೇ ಖಾಸಗಿ ವಲಯದ ಹಲವು ಸಂಸ್ಥೆಗಳು ರಾಜ್ಯ ಸರ್ಕಾರದ ಈ ನೂತನ ನೀತಿಗೆ ಒಮ್ಮತ ತೋರಿವೆ. ಇನ್ನಷ್ಟು ಸಂಸ್ಥೆಗಳಿಗೆ ಈ ಬಗ್ಗೆ ಕ್ರಮ ವಹಿಸುವಂತೆ ಮಾತುಕತೆ ನಡೆಸಲಾಗುತ್ತಿದೆ.
ಒಟ್ಟಿನಲ್ಲಿ ಕಾರ್ಮಿಕ ಸಚಿವರಾದ ಸಂತೋಷ್ ಲಾಡ್ ಅವರು ತಮ್ಮ ಇಲಾಖೆಯ ಮೂಲಕ ಮಹಿಳಾ ಸಬಲೀಕರಣದ ಜೊತೆ ಅವರ ರಕ್ಷಣೆ, ಸುರಕ್ಷತೆ, ಗೌರವವನ್ನು ಸಹ ಕಾಪಾಡಲು ದೃಢ ಹೆಜ್ಜೆ ಇರಿಸಿರುವುದು ವ್ಯಾಪಕ ಶ್ಲಾಘನೆಗೆ ಪಾತ್ರವಾಗುತ್ತಿದೆ.


