762 ಕೋಟಿ ರೂಪಾಯಿ ಮೊತ್ತದ ಟೆಂಡರ್‌ನ ಬಿಡ್ಡಿಂಗ್ ವೇಳೆ ನಕಲಿ, ಸುಳ್ಳು, ಬೋಗಸ್ ದಾಖಲೆಗಳನ್ನು ಸಲ್ಲಿಸಿದ ಕರ್ನಾಟಕದ ಕಂಪನಿಗೆ ಕರ್ನಾಟಕದಲ್ಲೇ ಮೂರು ವರ್ಷಗಳವರೆಗೆ ನಿಷೇಧ ಹೇರಲಾಗಿದೆ. ಈ ಕಂಪನಿಯನ್ನು ಮೂರು ವರ್ಷ ಕಪ್ಪು ಪಟ್ಟಿಗೆ ಸೇರಿಸಿ ಹೊರಡಿಸಿರುವ ಅದೇಶದ ಪ್ರತಿ ಪ್ರತಿಕ್ಷಣಕ್ಕೆ ಲಭ್ಯವಾಗಿದೆ.
ದೇವನಹಳ್ಳಿ-ವೇಮಗಲ್-ಕೋಲಾರ ನಡುವಿನ 49.24 ಕಿಲೋ ರಾಜ್ಯ ಹೆದ್ದಾರಿ-96ಕ್ಕೆ ಸಂಬಂಧಿಸಿದಂತೆ ಕರೆಯಲಾಗಿದ್ದ ಟೆಂಡರ್ ವೇಳೆ ಸುಳ್ಳು, ನಕಲಿ ದಾಖಲೆಗಳನ್ನು ಸಲ್ಲಿಸಿದ ಗಂಭೀರ ಕೃತ್ಯದ ಹಿನ್ನೆಲೆಯಲ್ಲಿ MP24 ಕನಸ್ಟ್ರಕ್ಷನ್ ಕಂಪನಿಯನ್ನು 3 ವರ್ಷಗಳ ಮಟ್ಟಿಗೆ ನಿಷೇಧಿಸುವಂತೆ ಲೋಕೋಪಯೋಗಿ ಇಲಾಖೆ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಐಎಎಸ್ ಅಧಿಕಾರಿ ಆಮ್ಲಾನ್ ಆದಿತ್ಯ ಬಿಸ್ವಾಸ್ ಆದೇಶ ಹೊರಡಿಸಿದ್ದಾರೆ. ಪ್ರಧಾನ ಕಾರ್ಯದರ್ಶಿಗಳ ನೇತೃತ್ವದ ರಾಜ್ಯ ಡಿಬಾರ್‌ಮೆಂಟ್ ಸಮಿತಿಯ ಸೂಚನೆಯ ಬಳಿಕ ಈ ಕಂಪನಿಯನ್ನು ಮೂರು ವರ್ಷದ ಮಟ್ಟಿಗೆ ಕಪ್ಪು ಪಟ್ಟಿಗೆ ಸೇರಿಸಿ ಲೋಕೋಪಯೋಗಿ ಇಲಾಖೆ ಆಧೀನ ಕಾರ್ಯದರ್ಶಿ ರಾಜಶೇಖರ ಎಂ.ಜಿ. ಅವರು ಆದೇಶ ಹೊರಡಿಸಿದ್ದಾರೆ.
ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನಲ್ಲಿ ಮತ್ತು ಬೆಂಗಳೂರಿನ ಮಾಳಗಾಳ 2ನೇ ಹಂತ, ನಾಗರಭಾವಿಯಲ್ಲಿ ಕಚೇರಿ ಹೊಂದಿದೆ ಈ MP24ಕನ್‌ಸ್ಟ್ರಕ್ಷನ್ ಕಂಪನಿ.
ರಾಜ್ಯ ಹೆದ್ದಾರಿ -86ರಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಮಾದರಿಯಲ್ಲಿ ಅಭಿವೃದ್ಧಿ ಪಡಿಸುವ ಸಲುವಾಗಿ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ ಇದೇ ವರ್ಷದ ಫೆಬ್ರವರಿ 25ರಂದು ಟೆಂಡರ್‌ನ್ನು ಆಹ್ವಾನಿಸಿತ್ತು.
ಟೆಂಡರರ್‌ಗಳಿಂದ ಅರ್ಜಿ ಸ್ವೀಕಾರಕ್ಕೆ ಏಪ್ರಿಲ್ 14 ಕಡೆಯ ದಿನವಾಗಿತ್ತು. ಏಪ್ರಿಲ್ 19ರಂದು ಟೆಕ್ನಿಕಲ್ ಬಿಡ್ಡಿಂಗ್ ಶುರುವಾಗಿತ್ತು. ಅವತ್ತೇ ಬಿಡ್ಡಿಂಗ್‌ನ್ನು ತೆರೆಯಲಾಗಿತ್ತು.
ಈ ವೇಳೆ ನಾಲ್ಕು ಕಂಪನಿಗಳು ಯಶಸ್ವಿಯಾಗಿ ಬಿಡ್ಡಿಂಗ್‌ನ್ನು ಮಾಡಿದ್ವು.
1) MP24 ಕನ್‌ಸ್ಟ್ರಕ್ಷನ್ ಕಂಪನಿ ಮತ್ತು ರಾಮಲಿಂಗಂ ಕನ್‌ಸ್ಟ್ರಕ್ಷನ್ ಕಂಪನಿ ಪ್ರೈವೇಟ್ ಲಿಮಿಟೆಡ್ (ಜೊತೆಯಾಗಿ).
2) ಭಾರತ್ ವಾಣಿಜ್ಯ ಈಸ್ಟರ್ನ್ ಪ್ರೈವೇಟ್ ಲಿಮಿಟೆಡ್.
3) ದಿನೇಶ್‌ಚಂದ್ರ ಆರ್ ಅಗರ್‌ವಾಲ್ ಇನ್ಫಾಕಾನ್ ಪ್ರೈವೇಟ್ ಲಿಮಿಟೆಡ್
4) ಭಾರತೀಯ ಇನ್ಫಾ ಪ್ರಾಜೆಕ್ಟ್ ಲಿಮಿಟೆಡ್
ಹಣಕಾಸು ಬಿಡ್ಡಿಂಗ್ ಶುರುವಾದ ಬಳಿಕ ಬಿಡ್ಡಿಂಗ್‌ನಲ್ಲಿ ಪಾಲ್ಗೊಂಡಿದ್ದ ಭಾರತ್ ವಾಣಿಜ್ಯ ಈಸ್ಟರ್ನ್ ಪ್ರೈವೇಟ್ ಲಿಮಿಟೆಡ್ ಕಂಪನಿಯು ಮೇ 19ರಂದು ರಾಜ್ಯ ಸರ್ಕಾರ ಮತ್ತು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತಕ್ಕೆ MP24 ಕನ್‌ಸ್ಟ್ರಕ್ಷನ್ ಕಂಪನಿಯು ಸುಳ್ಳು ದಾಖಲೆಗಳನ್ನು ಸಲ್ಲಿಸಿದೆ ಎಂದು ಆರೋಪಿಸಿ ಪತ್ರವನ್ನು ಬರೆದಿತ್ತು.
ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಕದಿರಿಯಲ್ಲಿ HNSS ಮುಖ್ಯ ಕಾಲುವೆ 45.6 ಕಿಲೋ ಮೀಟರ್‌ನಿಂದ 110 ಕಿಲೋ ಮೀಟರ್‌ವರೆಗಿನ P9ಯಿಂದ ಹಿಡಿದು P13ರವರೆಗೆ ಕಾಮಗಾರಿಯನ್ನು ತಾನೇ ನಡೆಸಿದ್ದಾಗಿ MP24 ಕನ್‌ಸ್ಟ್ರಕ್ಷನ್ ಕಂಪನಿಯು ದಾಖಲೆಯನ್ನು ಸಲ್ಲಿಸಿತ್ತು.
ಭಾರತ್ ವಾಣಿಜ್ಯ ಈಸ್ಟರ್ನ್ ಪ್ರೈವೇಟ್ ಲಿಮಿಟೆಡ್ ದೂರಿನ ಬಳಿಕ ಕೆಆರ್‌ಡಿಸಿಎಲ್ ಈ ಬಗ್ಗೆ ಆಂಧ್ರಪ್ರದೇಶದ ಜಲಸಂಪನ್ಮೂಲ ಇಲಾಖೆಯ ಮುಖ್ಯ ಇಂಜಿನಿಯರ್ ಅವರಿಂದ ಮಾಹಿತಿಯನ್ನು ಪಡೆಯಿತು.
ಆ ಮಾಹಿತಿಯ ಪ್ರಕಾರ ಆಂಧ್ರಪ್ರದೇಶದ ಜಲಸಂಪನ್ಮೂಲ ಇಲಾಖೆಯು MP24 ಕನ್‌ಸ್ಟ್ರಕ್ಷನ್ ಕಂಪನಿಗೆ ಯಾವುದೇ ಕಾಮಗಾರಿಯ ಗುತ್ತಿಗೆಯನ್ನು ಕೊಟ್ಟಿಲ್ಲವೆಂದೂ, MP24 ಕನ್‌ಸ್ಟ್ರಕ್ಷನ್ ಕಂಪನಿಯು KRDCLಗೆ ಸಲ್ಲಿಸಿದ್ದ ದಾಖಲೆಗಳೆಲ್ಲವೂ ಬೋಗಸ್ ಮತ್ತು ನಕಲಿ ಎಂದು ಸ್ಪಷ್ಟಪಡಿಸಿತ್ತು.
ಇದಲ್ಲದೇ ಮದನಪಲ್ಲಿಯ ಸೂಪರಿಟೆಂಡಿಂಗ್ ಇಂಜಿನಿಯರ್ ಕೂಡಾ ಕೆಆರ್‌ಡಿಸಿಎಲ್‌ಗೆ ಪತ್ರ ಬರೆದು MP24 ಕನ್‌ಸ್ಟ್ರಕ್ಷನ್ ಕಂಪನಿಗೆ ಯಾವುದೇ ಕಾಮಗಾರಿಗಳ ಗುತ್ತಿಗೆಯನ್ನು ನೀಡಿಲ್ಲವೆಂದೂ, ಯಾವುದೇ ಪ್ರಮಾಣಪತ್ರವನ್ನೂ ಕೊಟ್ಟಿಲ್ಲವೆಂದೂ, ಆ ಕಂಪನಿ ಅಪ್‌ಲೋಡ್ ಮಾಡಿರುವ ಪ್ರಮಾಣಪತ್ರಗಳು ನಕಲಿ ಎಂದೂ ಸ್ಪಷ್ಟಪಡಿಸಿದ್ದರು. ಅಲ್ಲದೇ MP24 ಕನ್‌ಸ್ಟ್ರಕ್ಷನ್ ಕಂಪನಿ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ಕೆಆರ್‌ಡಿಸಿಎಲ್ ಮುಖ್ಯ ಇಂಜಿನಿಯರ್‌ಗೆ ಬರೆದ ಪತ್ರದಲ್ಲಿ ಆಗ್ರಹಿಸಿದ್ದರು.
1) ಫೋರ್ಜರಿ ಮತ್ತು ಸುಳ್ಳು ದಾಖಲೆಗಳನ್ನು ಸಲ್ಲಿಸಿ ಭ್ರಷ್ಟಾಚಾರ ಮತ್ತು ವಂಚನೆಗೆ ಯತ್ನಿಸಿರುವುದು ಆಂಧ್ರಪ್ರದೇಶದ ಮುಖ್ಯ ಇಂಜಿನಿಯರ್ ಮತ್ತು ಸೂಪರಿಟೆಂಡಿಂಗ್ ಇಂಜಿನಿಯರ್ ಅವರ ಪತ್ರಗಳಿಂದ ಸ್ಪಷ್ಟವಾಗಿದೆ.
2) ಒರಿಜಿನಲ್ ಆಡಿಟರ್ ಅಲ್ಲದವರಿಂದ ಕಂಪನಿಯ ತೆರಿಗೆ ಮತ್ತು ಆದಾಯದ ಬಗ್ಗೆ ಸುಳ್ಳು ಪ್ರಮಾಣಪತ್ರವನ್ನು ಸಲ್ಲಿಸಲಾಗಿದೆ.
3) ಅಸತ್ಯವಾದ ಕ್ರೆಡಿಂಗ್ ರೇಟಿಂಗ್‌ನ್ನು ಕಂಪನಿಯು ಪಡೆದುಕೊಂಡಿದೆ. ಈ ಟೆಂಡರ್‌ಗೆ ಬಿಬಿಬಿ ರೇಟಿಂಗ್ ಇರುವುದು ಕಡ್ಡಾಯ. ಆದರೆ ಇದರ ಹೆಸರಲ್ಲಿ ಕಂಪನಿ ಎಂದು ಇದೆಯಾದರೂ ಇದು ಕಂಪನಿ ಕಾಯ್ದೆಯ ಅಡಿಯಲ್ಲಿ ನೋಂದಣಿಯಾದ ಕಂಪನಿಯಲ್ಲ.
ಟೆಂಡರ್ ಬಿಡ್ಡಿಂಗ್ ವೇಳೆ ಸುಳ್ಳು ದಾಖಲೆ, ನಕಲಿ ಪ್ರಮಾಣಪತ್ರಗಳನ್ನು ಸಲ್ಲಿಸಿ ಭ್ರಷ್ಟಾಚಾರ, ವಂಚನೆ ಎಸಗಿರುವ ಹಿನ್ನೆಲೆಯಲ್ಲಿ MP24 ಕನ್‌ಸ್ಟ್ರಕ್ಷನ್ ಕಂಪನಿಯನ್ನು ಕರ್ನಾಟಕದಲ್ಲಿ ನಡೆಯುವ ಯಾವುದೇ ಕಾಮಗಾರಿಗಳ ಟೆಂಡರ್, ಬಿಡ್ಡಿಂಗ್ ಪ್ರಕ್ರಿಯೆಗಳಲ್ಲೂ ಭಾಗವಹಿಸದಂತೆ ಮೂರು ವರ್ಷದ ಮಟ್ಟಿಗೆ ನಿರ್ಬಂಧ ಹೇರಿ ಲೋಕೋಪಯೋಗಿ ಇಲಾಖೆ ಪ್ರಧಾನ ಕಾರ್ಯದರ್ಶಿಯೂ ಆಗಿರುವ ರಾಜ್ಯ ಡಿಬಾರ್‌ಮೆಂಟ್ ಸಮಿತಿಯ ಮುಖ್ಯಸ್ಥರೂ ಆಗಿರುವ ಆಮ್ಲಾನ್ ಆದಿತ್ಯ ಬಿಸ್ವಾಸ್ ಆದೇಶಿಸಿದ್ದಾರೆ. ಇವರ ನೇತೃತ್ವದಲ್ಲಿನ ಸಮಿತಿಯ ತೀರ್ಮಾನದ ಬಳಿಕ ಈ ಕಂಪನಿಗೆ ನಿಷೇಧ ಹೇರಿ ಮೂರು ವರ್ಷ ಕಪ್ಪು ಪಟ್ಟಿಗೆ ಸೇರಿಸಿ ಆದೇಶ ಹೊರಡಿಸಲಾಗಿದೆ.