ಬಿಹಾರ (Bihar Assembly Election) ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ (NDA) ಮೈತ್ರಿಕೂಟ ಸೀಟು ಹಂಚಿಕೆ ಘೋಷಿಸಿಕೊಂಡಿದೆ.
ಎನ್‌ಡಿಎ ಮೈತ್ರಿಕೂಟದ ಎರಡು ಪ್ರಮುಖ ಪಾಲುದಾರ ಪಕ್ಷಗಳಾದ ಭಾರತೀಯ ಜನತಾ ಪಕ್ಷ (BJP) ಮತ್ತು ಸಂಯುಕ್ತ ಜನತಾ ದಳ (JDU) ತಲಾ 101 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲಿವೆ.
ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ (Chirag Paswan) ಅವರ ನೇತೃತ್ವದ ಲೋಕಜನಶಕ್ತಿ ಪಕ್ಷ (ರಾಮ್‌ವಿಲಾಸ್) 29 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲಿದೆ.
ಜಿತನ್ ರಾಂ ಮಾಂಝಿ ಅವರ ಹಿಂದೂಸ್ತಾನಿ ಅವಾಮ್ ಮೋರ್ಚಾ (HAM) ಮತ್ತು ಉಪೇಂದ್ರ ಕುಶ್ವಾ (Upendra Kushwa) ಅವರ ರಾಷ್ಟ್ರ ಲೋಕ ಮೋರ್ಚಾ ತಲಾ 6 ಸೀಟುಗಳಲ್ಲಿ ಸ್ಪರ್ಧೆ ಮಾಡಲಿದೆ.
1996ರಲ್ಲಿ ಬಿಜೆಪಿ ಮತ್ತು ಜೆಡಿಯು ಮೈತ್ರಿ ಆರಂಭಿಸಿದ ಬಳಿಕ ಇದೇ ಮೊದಲ ಬಾರಿಗೆ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಯು ಸಮ ಸಂಖ್ಯೆ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುತ್ತಿವೆ.
2020ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಯು 122 ಕ್ಷೇತ್ರಗಳಲ್ಲಿ ಮತ್ತು ಬಿಜೆಪಿ 121 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿತ್ತು. 122 ಕ್ಷೇತ್ರಗಳ ಪೈಕಿ ಜೆಡಿಯು ಮಿತ್ರ ಪಕ್ಷ ಹೆಚ್‌ಎಎಂಗೆ 7 ಕ್ಷೇತ್ರಗಳನ್ನು ಬಿಟ್ಟು ಕೊಟ್ಟಿತ್ತು. ಬಿಜೆಪಿ ಮುಖೇಶ್ ಸಹಾನಿ ನೇತೃತ್ವದ ವಿಕಾಸ್‌ಶೀಲ್ ಇನ್ಸಾನ್ ಪಕ್ಷಕ್ಕೆ 11 ಸೀಟು ಬಿಟ್ಟು ಕೊಟ್ಟಿತ್ತು.
ಕಳೆದ ವರ್ಷ ನಡೆದಿದ್ದ ಲೋಕಸಭಾ (Loksabha Election) ಚುನಾವಣೆಯಲ್ಲಿ ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಅವರ ಪಕ್ಷ ತಾನು ಎನ್‌ಡಿಎ ಮೈತ್ರಿಕೂಟದಡಿ ಸ್ಪರ್ಧೆ ಮಾಡಿದ್ದ ಎಲ್ಲಾ 6 ಕ್ಷೇತ್ರಗಳಲ್ಲೂ ಗೆದ್ದಿತ್ತು ಮತ್ತು ಶೇಕಡಾ 6ರಷ್ಟು ಮತಗಳನ್ನೂ ಪಡೆದಿತ್ತು. ಈ ಕಾರಣದಿಂದ ಚಿರಾಗ್ ಪಾಸ್ವಾನ್ ಅವರ ಪಕ್ಷಕ್ಕೂ 29 ಕ್ಷೇತ್ರಗಳನ್ನು ಬಿಟ್ಟು ಕೊಡಲಾಗಿದೆ.


