ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿರುವ ಹಾಸನ ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ (Prajwal Revanna Rape Case) ತಾಯಿ ಜಿಲ್ಲಾ ಪಂಚಾಯತ್ ಸದಸ್ಯೆಗೂ ಆಗಿರುವ ಭವಾನಿ ರೇವಣ್ಣ (Bhavani Revanna) ವಿರುದ್ಧ ತಮ್ಮ ಮಗನಿಂದ ಅತ್ಯಾಚಾರಕ್ಕೊಳಗಾದ ಮನೆಕೆಲಸದಾಕೆಯನ್ನು ಅಪರಿಸಿದ್ದರ ಬಗ್ಗೆ ಸಾಕ್ಷ್ಯಗಳಿವೆ ಎಂದು ಬೆಂಗಳೂರಿನಲ್ಲಿರುವ ಜನಪ್ರತಿನಿಧಿಗಳ ನ್ಯಾಯಾಲಯ (Bengaluru Court) ಅಭಿಪ್ರಾಯಪಟ್ಟಿದೆ.
ಅಪಹರಣ ಪ್ರಕರಣದಲ್ಲಿ ದೇವೇಗೌಡರ ಸೊಸೆ ಮತ್ತು ಮಾಜಿ ಸಚಿವ, ಹೊಳೆನರಸೀಪುರ ಕ್ಷೇತ್ರದ ಶಾಸಕ ಹೆಚ್ ಡಿ ರೇವಣ್ಣ ಪತ್ನಿ ಭವಾನಿ ರೇವಣ್ಣ ಎಂಟನೇ ಆರೋಪಿಯಾಗಿದ್ದಾರೆ. ಈ ಪ್ರಕರಣದಲ್ಲಿ ಮಾಜಿ ಸಚಿವ ಹೆಚ್ ಡಿ ರೇವಣ್ಣ ಮೊದಲನೇ ಆರೋಪಿಯಾಗಿದ್ದಾರೆ.
ಈ ಪ್ರಕರಣದಲ್ಲಿ ತಮ್ಮನ್ನು ಆರೋಪ ಮುಕ್ತಗೊಳಿಸುವಂತೆ ಭವಾನಿ ರೇವಣ್ಣ ಮತ್ತು ಏಳನೇ ಆರೋಪಿಯಾಗಿರುವ ಕೆ.ಎ.ರಾಜಗೋಪಾಲ್ ಸಲ್ಲಿಸಿದ್ದ ಅರ್ಜಿಯನ್ನು ಬೆಂಗಳೂರಿನ 42ನೇ ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಕೆ ಎನ್ ಶಿವಕುಮಾರ್ (K N Shivakumar, Magistrate MP/MLA Special court) ವಜಾಗೊಳಿಸಿದ್ದಾರೆ.
ನ್ಯಾಯಾಲಯ ಹೇಳಿದ್ದೇನು..?
2024ರ ಏಪ್ರಿಲ್ 22 ಮತ್ತು 24ರಂದು ಸಂತ್ರಸ್ತೆಯನ್ನು ಭವಾನಿ ಅವರ ಸೂಚನೆಯಂತೆ ಅಪಹರಿಸಿಲ್ಲ ಎಂದಾದರೂ ಆನಂತರದ ಘಟನೆಗಳು ಸಂತ್ರಸ್ತೆಯನ್ನು ಅಪಹರಿಸಿರುವಂತೆ ಕಾಣುತ್ತಿವೆ. ಸಂತ್ರಸ್ತೆಯು ತನಿಖಾಧಿಕಾರಿ ಮುಂದೆ ಸಿಆರ್‌ಪಿಸಿ ಸೆಕ್ಷನ್ 161 ಮತ್ತು ಮ್ಯಾಜಿಸ್ಟ್ರೇಟ್ ಮುಂದೆ ಸಿಆರ್‌ಪಿಸಿ ಸೆಕ್ಷನ್ 164 ಅಡಿ ದಾಖಲಿಸಿರುವ ಹೇಳಿಕೆಯಲ್ಲಿ ಭವಾನಿ ರೇವಣ್ಣ ಅವರ ಪಾತ್ರದ ಕುರಿತು ಉಲ್ಲೇಖಿಸಿದ್ದಾರೆ. ಅಪಹರಣ ನಡೆದಿದೆ ಎನ್ನಲಾದ ದಿನದಂದು ಭವಾನಿ ರೇವಣ್ಣ ಮತ್ತು ಇತರೆ ಆರೋಪಿಗಳ ನಡುವೆ ನಡೆದಿರುವ ದೂರವಾಣಿ ಕರೆ ದಾಖಲೆಗಳ ವಿಶ್ಲೇಷಣೆ, ವಾಟ್ಸಾಪ್ ಕರೆ ದಾಖಲೆಗಳ ವಿಶ್ಲೇಷಣೆ ಮತ್ತು ಸಂತ್ರಸ್ತೆ ಹೇಳಿಕೆಯನ್ನು ಗಮನಿಸಿದರೆ ಮೇಲ್ನೋಟಕ್ಕೆ ಆಕೆಯನ್ನು ಒತ್ತೆಯಾಳಾಗಿ ಇಡುವುದಕ್ಕೆ ಪಿತೂರಿ ನಡೆಸಿರುವುದಕ್ಕೆ ಸಾಕ್ಷ್ಯಗಳಿವೆ.
ತನ್ನ ಅಪಹರಣದಲ್ಲಿ ಭವಾನಿ ರೇವಣ್ಣ ಪಾತ್ರ ಇದೆ ಎಂಬುದರ ಕುರಿತು ಕೆಲವು ಸಾಕ್ಷಿಗಳು ಸಮಗ್ರವಾಗಿ ಮಾಹಿತಿ ಒದಗಿಸಿದ್ದಾರೆ ಎಂದು ಆರೋಪ ಪಟ್ಟಿಯಲ್ಲಿ ಹೇಳಲಾಗಿದೆ. ಸಂತ್ರಸ್ತೆಯ ಪುತ್ರ/ದೂರುದಾರನ ಹೇಳಿಕೆಯ ಪ್ರಕಾರ ಅಪಹರಣ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ಸತೀಶ್ ಬಾಬಣ್ಣ ಹೇಗೆ ಭವಾನಿ ರೇವಣ್ಣ ಸೂಚನೆಯಂತೆ ತಮ್ಮ ತಾಯಿಯನ್ನು ಕರೆದೊಯ್ದು ರಹಸ್ಯವಾಗಿ ರಾಜಗೋಪಾಲ್‌ಗೆ ಸೇರಿದ ತೋಟದ ಮನೆಯಲ್ಲಿ ಒತ್ತೆಯಾಗಿಸಿದ್ದ ಎಂಬುದಕ್ಕೆ ಪೂರಕವಾಗಿದೆ. ಹೀಗಾಗಿ ರಾಜಗೋಪಾಲ್ ಮತ್ತು ಭವಾನಿ ರೇವಣ್ಣ ಪಾತ್ರದ ಬಗ್ಗೆ ಸಾಕಷ್ಟು ದಾಖಲೆಗಳಿರುವುದರಿಂದ ಈ ಹಂತದಲ್ಲಿ ಆರೋಪ ಮುಕ್ತಗೊಳಿಸಲು ಅರ್ಹರಲ್ಲ
ಎಂದು ನ್ಯಾಯಾಧೀಶರು ಹೇಳಿದ್ದಾರೆ.



