ಯಾವುದೇ ಕಾನೂನು ಹೋರಾಟವನ್ನು ನಡೆಸದೇ ಸ್ವಾಧೀನಪಡಿಸಿಕೊಂಡ ಭೂಮಿಗೆ ಪರಿಹಾರವನ್ನು ಸ್ವೀಕರಿಸಿದ ಬಳಿಕ ಅಂತಹ ಭೂ ಸ್ವಾಧೀನವನ್ನು ಪ್ರಶ್ನಿಸಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜೋಯ್‌ಮಲ್ಯ ಬಾಗಚಿ ಅವರಿದ್ದ ದ್ವಿಸದಸ್ಯ ಪೀಠ ತೀರ್ಪು ನೀಡಿದೆ.
ಪಶ್ಚಿಮ ಬಂಗಾಳದ ಹೂಗ್ಲಿಯಲ್ಲಿ 2001-2002ರ ಅವಧಿಯಲ್ಲಿ ಶಾಂತಿ ಸೆರಾಮಿಕ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿ ಸೆರಾಮಿಕ್ ಎಲೆಕ್ಟ್ರಿಕಲ್ ಉತ್ಪನ್ನಗಳ ತಯಾರಿಕಾ ಕಾರ್ಖಾನೆ ಸ್ಥಾಪಿಸುವ ಸಂಬಂಧ ಭೂಮಿಯನ್ನು ಖರೀದಿಸಿತ್ತು. ಈ ಕಂಪನಿಯ ಮನವಿಯ ಮೇರಗೆ 2003ರಲ್ಲಿ ಕೃಷಿ ಭೂಮಿಯನ್ನು ವಾಣಿಜ್ಯ ಬಳಕೆಯ ಭೂಮಿಯನ್ನಾಗಿ ಪರಿವರ್ತನೆ ಮಾಡಿಕೊಳ್ಳುವುದಕ್ಕೆ ಜಿಲ್ಲಾಡಳಿತ ಅನುಮತಿ ನೀಡಿತ್ತು. ಇದಾದ ಬಳಿಕ ಈ ಕಂಪನಿ ಭೂಮಿಯಲ್ಲಿ ಕಾರ್ಖಾನೆಯನ್ನೂ ಆರಂಭಿಸಿತ್ತು.
2006ರ ಜುಲೈ 21ರಂದು ಹೂಗ್ಲಿ ಜಿಲ್ಲಾ ಭೂ ಸ್ವಾಧೀನಾಧಿಕಾರಿ ಟಾಟಾ ಮೋಟಾರ್ಸ್‌ನ ನ್ಯಾನೋ ಕಾರು ಘಟಕ ಸ್ಥಾಪನೆಗಾಗಿ ಭೂ ಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಿದ್ದರು.
ನ್ಯಾನೋ ಕಾರು ಸ್ಥಾಪನೆಗಾಗಿ ಭೂ ಸ್ವಾಧೀನ ಅಧಿಸೂಚನೆ ಹೊರಡಿಸಲಾಗಿದ್ದ ಭೂಮಿಯಲ್ಲಿ ಶಾಂತಿ ಸೆರಾಮಿಕ್ಸ್ ಕಂಪನಿಗೆ ಸೇರಿದ ಭೂಮಿಯೂ ಸೇರಿತ್ತು. ತಮ್ಮ ಭೂಮಿಯನ್ನು ಭೂ ಸ್ವಾಧೀನದಿಂದ ಕೈಬಿಡುವಂತೆ ಕೋರಿ ಶಾಂತಿ ಸೆರಾಮಿಕ್ಸ್ ಭೂ ಸ್ವಾಧೀನಾಧಿಕಾರಿಗೆ ಮನವಿ ಸಲ್ಲಿಸಿದ್ದರು. ಆದರೆ ಆ ಮನವಿಯನ್ನು ಭೂ ಸ್ವಾಧೀನಾಧಿಕಾರಿ ತಿರಸ್ಕರಿಸಿದ್ದರು.
ಇದಾದ ಬಳಿಕ 2006ರ ಸೆಪ್ಟೆಂಬರ್ 25ರಂದು ಶಾಂತಿ ಸೆರಾಮಿಕ್ಸ್ ಕಂಪನಿ ಹೊಂದಿದ್ದ ಭೂಮಿಗೆ 5 ಕೋಟಿ 46 ಲಕ್ಷ ರೂಪಾಯಿ ಪರಿಹಾರ ಮತ್ತು ಕಾರ್ಖಾನೆ ಸ್ಥಾಪನೆಗಾಗಿ ಶಾಂತಿ ಸೆರಾಮಿಕ್ಸ್ ಮಾಡಿದ ಮೂಲಭೂತ ಸೌಕರ್ಯ ವೆಚ್ಚದ ಆಧಾರದಲ್ಲಿ 9 ಕೋಟಿ ರೂಪಾಯಿ ಒಟ್ಟು 14 ಕೋಟಿ 54 ಲಕ್ಷ ರೂಪಾಯಿಗಳನ್ನು ಶಾಂತಿ ಸೆರಾಮಿಕ್ಸ್‌ಗೆ ಪರಿಹಾರವಾಗಿ ಘೋಷಿಸಲಾಗಿತ್ತು. ಈ ಪರಿಹಾರದ ಬಳಿಕ ಶಾಂತಿ ಸೆರಾಮಿಕ್ಸ್‌ನಿಂದ ಸ್ವಾಧೀನಪಡಿಸಿಕೊಂಡಿದ್ದ ಭೂಮಿಯನ್ನು ಟಾಟಾ ಮೋಟಾರ್ಸ್‌ಗೆ ಹಸ್ತಾಂತರಿಸಲಾಗಿತ್ತು.
ರೈತರ ತೀವ್ರ ಪ್ರತಿರೋಧದ ಹಿನ್ನೆಲೆಯಲ್ಲಿ 2010ರಲ್ಲಿ ಟಾಟಾ ಮೋಟಾರ್ಸ್ ಸಿಂಗೂರಲ್ಲಿ ನ್ಯಾನೋ ಕಾರು ತಯಾರಿಕಾ ಘಟಕ ಸ್ಥಾಪಿಸುವ ನಿರ್ಧಾರವನ್ನು ಕೈಬಿಡ್ತು. ಇತ್ತ, ಸಿಂಗೂರಿನ ರೈತರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಆಧರಿಸಿ ಸ್ವಾಧೀನಪಡಿಸಿಕೊಂಡಿದ್ದ ಭೂಮಿಯನ್ನು ರೈತರಿಗೆ ವಾಪಸ್ ನೀಡುವಂತೆ 2016ರಲ್ಲಿ ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ನೀಡಿತ್ತು.
2016ರಲ್ಲಿ ಸುಪ್ರೀಂಕೋರ್ಟ್ ನೀಡಿದ್ದ ಆ ತೀರ್ಪನ್ನೇ ಆಧರಿಸಿ ತನ್ನಿಂದ ಸ್ವಾಧೀನಪಡಿಸಿಕೊಂಡಿದ್ದ ಭೂಮಿಯನ್ನು ವಾಪಸ್ ಕೊಡುವಂತೆ ಕೋರಿ ಶಾಂತಿ ಸೆರಾಮಿಕ್ಸ್ ಪ್ರೈವೇಟ್ ಲಿಮಿಟೆಡ್ ಸಲ್ಲಿಸಿದ್ದ ಅರ್ಜಿಯನ್ನು ಕಲ್ಕತ್ತಾ ಹೈಕೋರ್ಟ್ ಮಾನ್ಯ ಮಾಡಿತ್ತು. ಆದರೆ ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸಲ್ಲಿಸಿ ಪಶ್ಚಿಮ ಬಂಗಾಳ ಸರ್ಕಾರ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಅರ್ಜಿ ಸಲ್ಲಿಸಿತ್ತು.
ಸುಪ್ರೀಂಕೋರ್ಟ್ ಹೇಳಿದ್ದೇನು..?
ಭೂಸ್ವಾಧೀನದ ಬಗ್ಗೆ ಶಾಂತಿ ಸೆರಾಮಿಕ್ಸ್ ಪ್ರೈವೇಟ್ ಲಿಮಿಟೆಡ್ 2006ರಿಂದ 2016ರವರೆಗೆ ಮೌನವಾಗಿಯೇ ಇತ್ತು. 2006ರಲ್ಲೇ ಭೂ ಪರಿಹಾರವನ್ನು ವಿತರಣೆ ಮಾಡಲಾಗಿತ್ತಾದರೂ ಭೂ ಸ್ವಾಧೀನವನ್ನು ಪ್ರಶ್ನಿಸಲಿಲ್ಲ. ಒಂದು ಬಾರಿ ಭೂ ಪರಿಹಾರ ಕೊಟ್ಟಾದ ಬಳಿಕ ಮತ್ತು ಯಾವುದೇ ಆಕ್ಷೇಪಗಳಿಲ್ಲದೇ ಭೂ ಸ್ವಾಧೀನವಾದ ಬಳಿಕ ಭೂ ಸ್ವಾಧೀನದ ವಿರುದ್ಧ ದೀರ್ಘ ವಿಳಂಬದ ಯಾವುದೇ ಅರ್ಜಿಗಳನ್ನು ಪುರಸ್ಕರಿಸಲು ಸಾಧ್ಯವಿಲ್ಲ.
ಆದರೆ ಸಿಂಗೂರು ಭೂ ಸ್ವಾಧೀನದ ವಿರುದ್ಧ 2006ರಲ್ಲೇ ರೈತರು ನಿಯಮಗಳ ಉಲ್ಲಂಘನೆ ವಿರುದ್ಧ PIL ಮೂಲಕ ಹೈಕೋರ್ಟ್‌ನಲ್ಲಿ ಕಾನೂನು ಹೋರಾಟ ಕೈಗೊಂಡಿದ್ದರು.
ಕಂಪನಿಗೆ ಕಾನೂನು ಹೋರಾಟ ಮಾಡುವುದಕ್ಕೆ ಹಣಕಾಸು ಸಂಪನ್ಮೂಲ ಮತ್ತು ಕಾನೂನು ಹೋರಾಟಕ್ಕೆ ಅವಕಾಶಗಳಿದ್ದರೂ ಆ ಹೋರಾಟವನ್ನು ಮಾಡದೇ ಮೌನವಹಿಸಿತ್ತು. ಹೀಗಾಗಿ PIL ಮೂಲಕ ದುರ್ಬಲ ಸಮುದಾಯಗಳು ಪಡೆದ ಕಾನೂನು ಪರಿಹಾರದ ಲಾಭವನ್ನು ಈ ಪ್ರತಿವಾದಿ ಕಂಪನಿಗೆ ಅನ್ವಯಿಸಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ.




