ಬಲ್ಡೋಟಾ ಸಮೂಹದ ಗಣಿ ಕಂಪನಿಗೆ ಲಾಭ ಮಾಡಿಕೊಡುವ ಸಲುವಾಗಿ ಭೂ ನಕಾಶೆಯ ಸುಳ್ಳು ದಾಖಲೆ ಸೃಷ್ಟಿಸಿದ ತಾಲೂಕು ಸರ್ವೆಯರ್ ವಿರುದ್ಧ ಲೋಕಾಯುಕ್ತದಲ್ಲಿ (Karnataka Lokayuktha) FIR ದಾಖಲಾಗಿದೆ. FIR ಪ್ರತಿ ಪ್ರತಿಕ್ಷಣಕ್ಕೆ ಲಭ್ಯವಾಗಿದೆ.
ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (KIADB) ಆರ್‌ಪಿಸಿಎಲ್ (RPCL) ಗಣಿ ಕಂಪನಿಗೆ ಮಂಜೂರು ಮಾಡಿದ್ದ ಭೂಮಿಯಲ್ಲಿ ರಸ್ತೆ ಇದೆ ಎಂದು ಸುಳ್ಳು ದಾಖಲೆ ಸೃಷ್ಟಿಸಿದ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಎಡಿಎಲ್‌ಆರ್ (ADLR) ಕಚೇರಿಯಲ್ಲಿ ತಾಲೂಕು ಸರ್ವೆಯರ್ ಆಗಿದ್ದ ಹನುಮಂತಪ್ಪ ಎಂಬವರ ಮೇಲೆ FIR ದಾಖಲಾಗಿದೆ.
ಪ್ರಾದೇಶಿಕ ಭೂ ದಾಖಲೆಗಳ ಜಂಟಿ ನಿರ್ದೇಶಕರ ಕಚೇರಿ ಇವರಿಂದ ಪೂರ್ವಾನುಮತಿಯನ್ನು ಪಡೆದು ಪ್ರಾಥಮಿಕ ವಿಚಾರಣೆ ನಡೆಸಿದ್ದ ಲೋಕಾಯುಕ್ತ ಪೊಲೀಸರು ತಾಲೂಕು ಸರ್ವೆಯರ್ ಹನುಮಂತಪ್ಪ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆಯ 13(1)(A), 13(2), ಭಾರತೀಯ ದಂಡ ಸಂಹಿತೆ ಕಲಂಗಳಾದ 120(B), 409, 420, 465, 468, 471ರ ಅಡಿಯಲ್ಲಿ FIR ದಾಖಲಿಸಿಕೊಂಡಿದ್ದಾರೆ.
ಏನಿದು ಪ್ರಕರಣ..?
ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಚೋರುನೂರು ಹೋಬಳಿಯ ಸೋಮಲಾಪುರ ಗ್ರಾಮದಲ್ಲಿ ಸರ್ವೆ ನಂಬರ್ 110ಬಿ ಜಮೀನಿನ ಹಿಸ್ಸಾ ಸಂಖ್ಯೆ 191 ಮತ್ತು ಸರ್ವೆ ನಂಬರ್ 195ರಲ್ಲಿ ಕೈಗಾರಿಕಾ ಅಭಿವೃದ್ಧಿ ಮಂಡಳಿಯು (KIADB) ರಿಸೋರ್ಸ್ ಪೆಲ್ಲಟ್ಸ್ ಕಾನ್ಸ್‌ನ್‌ಟ್ರೇಟ್ ಪ್ರೈವೇಟ್ ಲಿಮಿಟೆಡ್‌ಗೆ ಭೂಮಿಯನ್ನು ಮಂಜೂರು ಮಾಡಿತ್ತು.
ಆದರೆ ಸಂಡೂರು ತಾಲೂಕು ಸರ್ವೆಯರ್ ಹನುಮಂತಪ್ಪ ಎಂಎಸ್‌ಪಿಎಲ್ ಕಂಪನಿಯವರ ಜೊತೆಗೆ ಸೇರಿಕೊಂಡು ಅವರಿಗೆ ಸಹಾಯ ಮಾಡುವ ಉದ್ದೇಶದಿಂದ ಅಸ್ತಿತ್ವದಲ್ಲೇ ಇರದ ರಸ್ತೆಯನ್ನು ಇದೆ ಎಂದು ಸುಳ್ಳು ಸರ್ವೆ ಸೃಷ್ಟಿಸಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯು ಮಂಜೂರು ಮಾಡಿದ್ದ ಭೂಮಿಯನ್ನು ಆರ್‌ಪಿಸಿಎಲ್ ಕಂಪನಿ (RPCL) ಸ್ವಾಧೀನಪಡಿಸಿಕೊಂಡ ಬಳಿಕ ಆ ಜಮೀನಿನ ಮಧ್ಯದಲ್ಲಿ ರಸ್ತೆ ಇದೆ ಎಂದು ಸರ್ವೆ ನಕ್ಷೆಯಲ್ಲಿ ಬ್ಲಾಕ್ 12, ಅದರ ವೀಸ್ತೀರ್ಣ 2 ಎಕರೆ 1 ಸೆಂಟ್ಸ್ ಎಂದು ತಪ್ಪಾಗಿ ನಮೂದಿಸಿ ಸುಳ್ಳು ಸರ್ವೆ ನಕಾಶೆಯಲ್ಲಿ ರಸ್ತೆಯನ್ನಾಗಿ ತೋರಿಸಿದ್ದಾರೆ. ಇದರಿಂದ ಆರ್‌ಪಿಸಿಎಲ್ (RPCL) ನಿರ್ಮಿಸಿರುವ ಕಾರ್ಖಾನೆಗೆ ತೊಂದರೆ ಉಂಟು ಮಾಡಿ ಎಂಎಸ್‌ಪಿಎಲ್ (MSPL) ಕಂಪನಿಯವರು ಡೌನ್ ಹಿಲ್ ಕನ್‌ವೆಯರ್ ಸಿಸ್ಟಂ ಅಳವಡಿಸುವ ಸಂಬಂಧ ಸರ್ವೆ ನಂಬರ್ 110/ಬಿಯಲ್ಲಿ ರೈಟ್ ಆಫ್ ವೇ ಬಳಸಲು ಅನುಮತಿ ಕೋರಿದ ಅರ್ಜಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು ತಾಲೂಕು ಸರ್ವೆಯರ್ ಆಗಿದ್ದ ಹನುಮಂತಪ್ಪ ವಿರುದ್ಧ ದೂರಲಾಗಿತ್ತು.
ಈ ಸಂಬಂಧ RPCL ಕಂಪನಿ ಲೋಕಾಯುಕ್ತ IGPಯವರಿಗೆ ದೂರು ನೀಡಿತ್ತು. ಆ ದೂರಿನ ಆಧಾರದಲ್ಲಿ ಭೂ ದಾಖಲೆಗಳ ಜಂಟಿ ನಿರ್ದೇಶಕರ ಕಚೇರಿಯಿಂದ ಪೂರ್ವಾನುಮತಿ ಪಡೆದು ನಡೆಸಿದ್ದ ಪ್ರಾಥಮಿುಕ ತನಿಖೆಯಿಂದ ಅಕ್ರಮ ಲಾಭಕ್ಕಾಗಿ ಹುದ್ದೆಯನ್ನು ದುರ್ಬಳಕೆ ಮಾಡಿಕೊಂಡಿರುವುದು ಸಾಬೀತಾದ ಹಿನ್ನೆಲೆಯಲ್ಲಿ ತಾಲೂಕು ಸರ್ವೆಯರ್ ಆಗಿದ್ದ ಹನುಮಂತಪ್ಪ ವಿರುದ್ಧ FIR ದಾಖಲಾಗಿದೆ.


