ಮಹತ್ವದ ನಿರ್ಧಾರ ಕೈಗೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮನೆ ಕೆಲಸದವರ ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ ಸಂಬಂಧ ಕಾನೂನು ಜಾರಿಗೆ ಪ್ರಮುಖ ಹೆಜ್ಜೆ ಇಟ್ಟಿದೆ.
ಈ ಹಿನ್ನೆಲೆಯಲ್ಲಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರ ಕಾರ್ಮಿಕ ಇಲಾಖೆಯು ಇವತ್ತು ಕರ್ನಾಟಕ ಮನೆಕೆಲಸದವರ (ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ) ಮಸೂದೆ-2025ರ ಕರಡು ಅಧಿಸೂಚನೆಯನ್ನು ಪ್ರಕಟಿಸಿದೆ.
ಈ ಕರಡು ಅಧಿಸೂಚನೆ ಪ್ರಕಟವಾದ 30 ದಿನದೊಳಗೆ ಈ ಮಸೂದೆಗೆ ಆಕ್ಷೇಪಣೆಗಳು ಅಥವಾ ಸಲಹೆಗಳಿದ್ದಲ್ಲಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಬಹುದಾಗಿದೆ.
ಕರಡು ಮಸೂದೆಯಲ್ಲಿ ಏನಿದೆ..?
- ಮನೆ ಕೆಲಸದವರ ಜೊತೆಗೆ ಮಾಲೀಕರು ಒಪ್ಪಂದ ಮಾಡಿಕೊಳ್ಳುವುದು ಕಡ್ಡಾಯವಾಗಲಿದೆ. ಈ ಒಪ್ಪಂದ ಮಾಡಿಕೊಳ್ಳದೇ ಮನೆ ಕೆಲಸ ಮಾಡಿಸಿಕೊಳ್ಳುವುದು ನಿಷೇಧವಾಗಲಿದೆ. ಆ ಒಪ್ಪಂದದಲ್ಲಿ ಮನೆ ಕೆಲಸದವರಿಗೆ ಒಪ್ಪಿಸಲಾಗಿರುವ ಕೆಲಸದ ಸ್ವರೂಪ, ಕೆಲಸದ ಅವಧಿ, ಸಂಬಳ, ಮನೆ ಕೆಲಸವರಿಗೆ ನೀಡಲಾಗುವ ಇತರೆ ಸೌಲಭ್ಯಗಳನ್ನು ಉಲ್ಲೇಖ ಮಾಡುವುದು ಕಡ್ಡಾಯವಾಗಲಿದೆ.
- ಮನೆ ಕೆಲಸದವರು ಮತ್ತು ಮನೆ ಕೆಲಸ ಮಾಡಿಸಿಕೊಳ್ಳುವ ಉದ್ಯೋಗದಾತರು ಮತ್ತು ಮನೆಕೆಲಸದ ಸೇವೆ ನೀಡುವ ಏಜೆನ್ಸಿಗಳು ನಿರ್ದಿಷ್ಟ ನಮೂನೆಯಲ್ಲಿ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಲಿದೆ.
- ಒಂದು ವೇಳೆ ಮನೆಕೆಲಸದವರು ಅನಕ್ಷರಸ್ಥರು ಅಥವಾ ವಲಸಿಗರು ಆಗಿದ್ದರೆ ಆಗ ಅಂತಹ ಮನೆಕೆಲಸದವರನ್ನು ನೋಂದಣಿ ಮಾಡಿಸುವುದು ಮನೆ ಕೆಲಸ ನೀಡುವ ಮನೆ ಮಾಲೀಕರು ಅಥವಾ ಏಜೆನ್ಸಿಗಳ ಜವಾಬ್ದಾರಿಯಾಗಿರಲಿದೆ.
- ಮನೆಕೆಲಸದವರ ಸೇವೆಯನ್ನು ಪೂರೈಸುವ ಏಜೆನ್ಸಿಗಳು ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕಾಗುತ್ತದೆ.
- ಮನೆ ಕೆಲಸ ನೀಡುವ ಮನೆ ಮಾಲೀಕರು ಮನೆ ಕೆಲಸದವರನ್ನು ನಿಯೋಜನೆ ಮಾಡಿಕೊಂಡ 30 ದಿನದೊಳಗೆ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಲಿದೆ.
- ಪ್ರತಿ 3 ವರ್ಷಕ್ಕೊಂದು ಬಾರಿ ನಿರ್ದಿಷ್ಟ ಶುಲ್ಕವನ್ನು ಪಾವತಿಸಿ ಮನೆ ಕೆಲಸದವರು, ಮನೆ ಕೆಲಸ ನೀಡುವ ಮಾಲೀಕರು ಮತ್ತು ಸೇವೆಯನ್ನು ಪೂರೈಸುವ ಏಜೆನ್ಸಿಗಳು ತಮ್ಮ ಪ್ರಮಾಣಪತ್ರವನ್ನು ನವೀಕರಿಸಿಕೊಳ್ಳಬೇಕಾಗುತ್ತದೆ.
- ನೋಂದಣಿ ಮಾಡಿಕೊಂಡ ಮನೆ ಕೆಲಸದವರು 1948ರ ಕನಿಷ್ಠ ವೇತನ ನಿಯಮಗಳ ಅಡಿಯಲ್ಲಿ ಕನಿಷ್ಠ ವೇತನಕ್ಕೆ ಅರ್ಹರಾಗಿರುತ್ತಾರೆ.
- ಅವಧಿ ಮೀರಿದ ಕೆಲಸಕ್ಕೆ (ಓವರ್‌ಟೈಮ್)ಗೆ ಪ್ರತ್ಯೇಕ ವೇತನವನ್ನು ಮಾಲೀಕರು ಪಾವತಿಸಬೇಕಾಗುತ್ತದೆ.
- ನಿರ್ದಿಷ್ಟ ಕೆಲಸದ ಅವಧಿ, ವಿರಾಮದ ವೇಳೆ, ವೇತನ ಸಹಿತ ರಜೆ, ತಾಯ್ತನದ ರಜೆಗೂ ಕೂಡಾ ಅರ್ಹರಾಗಿರುತ್ತಾರೆ.
- ರಾಜ್ಯದ ಕಾರ್ಮಿಕ ಮಂಡಳಿ ಜಾರಿಗೊಳಿಸುವ ಸಾಮಾಜಿಕ ಭದ್ರತೆ ಮತ್ತು ಇತರೆ ಕಲ್ಯಾಣ ಯೋಜನೆಗಳನ್ನು ಪಡೆಯಲು ಅರ್ಹರಾಗಿರುತ್ತಾರೆ.
- ಮನೆಕೆಲಸದವರು ಕನಿಷ್ಠ ವೇತವನನ್ನು ರಾಜ್ಯ ಸರ್ಕಾರವೇ ನಿರ್ಧಾರ ಮಾಡಲಿದೆ. ಮನೆ ಕೆಲಸದವರ ಕೆಲಸದ ಅವಧಿಯನ್ನೂ ರಾಜ್ಯ ಸರ್ಕಾರವೇ ತೀರ್ಮಾನಿಸಲಿದೆ. ಕರಡು ಮಸೂದೆ ಪ್ರಕಾರ ಮನೆ ಕೆಲಸದವರ ಕೆಲಸದ ಅವಧಿ ವಾರಕ್ಕೆ 48 ಗಂಟೆಯನ್ನು ಮೀರುವಂತಿಲ್ಲ.
- ಮನೆ ಕೆಲಸದವರಿಗೆ ವಾರದಲ್ಲಿ 1 ರಜೆ ಅಥವಾ ವಾರದಲ್ಲಿ 2 ಅರ್ಧ ರಜೆಗಳನ್ನು ನೀಡಬೇಕಾಗುತ್ತದೆ.
- ಮನೆ ಕೆಲಸದವರಿಗಾಗಿ ರಾಜ್ಯ ಮನೆ ಕೆಲಸದವರ ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ ಮಂಡಳಿಯನ್ನು ರಚನೆ ಮಾಡಲಾಗುತ್ತದೆ.
- ಮನೆ ಕೆಲಸದವರ ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ ನಿಧಿಯನ್ನು ರಚನೆ ಮಾಡಲಾಗುತ್ತದೆ. ಆಗ ನಿಧಿಗೆ ಮಾಲೀಕರು, ಮನೆ ಕೆಲಸದ ಸೇವೆ ನೀಡುವ ಏಜೆನ್ಸಿಗಳು ಶೇಕಡಾ 5ರಷ್ಟು ಕಲ್ಯಾಣ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
- ಮನೆ ಕೆಲಸದವರ ಬಗ್ಗೆ ನೋಂದಣಿ ಮಾಡಿಕೊಳ್ಳದ ಮಾಲೀಕರು ಅಥವಾ ಏಜೆನ್ಸಿಗಳಿಗೆ 3 ತಿಂಗಳವರೆಗೆ ಜೈಲು ಮತ್ತು 20 ಸಾವಿರ ರೂಪಾಯಿವರೆಗೆ ದಂಡ ವಿಧಿಸಲಾಗುತ್ತದೆ.
- ನೋಂದಾಯಿತ ಮನೆ ಕೆಲಸದವರಿಗೆ ರಾಜ್ಯ ಕಾರ್ಮಿಕ ವಿಮೆ ಮೂಲಕ ಲಭಿಸುವ ಆರೋಗ್ಯ ವಿಮೆ ಸೌಲಭ್ಯ ಸಿಗಲಿದೆ.


