ಎರಡು ವಿಶಿಷ್ಟ ಸಾಧನೆಗಾಗಿ ಕರ್ನಾಟಕದ ಸಾರಿಗೆ ನಿಗಮಗಳು ಲಂಡನ್ ಬುಕ್ ಆಫ್ ವರ್ಲ್ದ್ ರೆಕಾರ್ಡ್‌ಗೆ ಸೇರ್ಪಡೆಯಾಗಿದೆ.
ಮೊದಲನೇ ವಿಶಿಷ್ಟ ಸಾಧನೆ ಎಂದರೆ ಶಕ್ತಿ ಯೋಜನೆ ಮೂಲಕ ಕರ್ನಾಟಕದ ನಾಲ್ಕು ಸಾರಿಗೆ ನಿಗಮಗಳಾದ ಕೆಎಸ್‌ಆರ್‌ಟಿಸಿ, ಎನ್‌ಡಬ್ಲ್ಯೂಕೆಆರ್‌ಟಿಸಿ, ಕೆಕೆಆರ್‌ಟಿಸಿ ಮತ್ತು ಬಿಎಂಟಿಸಿ ಮೂಲಕ 564 ಕೋಟಿ 10 ಲಕ್ಷ ಬಾರಿ ಮಹಿಳೆಯರು ಪ್ರಯಾಣಿಸಿದ್ದಾರೆ. ಈ ಮೂಲಕ ಪ್ರತಿದಿನ ಮಹಿಳೆಯರ ಓಡಾಟಕ್ಕೆ ಸರ್ಕಾರವೇ ಮಾಡಿಕೊಟ್ಟ ವಿಶ್ವದ ಅತೀ ದೊಡ್ಡ ಉಚಿತ ವ್ಯವಸ್ಥೆ ಇದಾಗಿದೆ. ಈ ಸಾಧನೆ ಸಾಮಾಜಿಕ ಕಲ್ಯಾಣ ಮತ್ತು ಮಹಿಳಾ ಸಮಾನತೆಯ ದೃಷ್ಟಿಯಲ್ಲಿ ಅತ್ಯಂತ ಮಹತ್ವದ್ದು ಎಂದು ಲಂಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಹೇಳಿದೆ.

ಎರಡನೇ ವಿಶಿಷ್ಟ ಸಾಧನೆ ಎಂದರೆ 1997ರಿಂದ ಇದೇ ವರ್ಷದ ಅಕ್ಟೋಬರ್ 3ರವರೆಗೆ ಕರ್ನಾಟಕ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಒಟ್ಟು 464 ಗೌರವಗಳನ್ನು ಪಡೆದುಕೊಂಡಿದೆ. ಇದು ಸಾರ್ವಜನಿಕ ರಸ್ತೆ ಸಾರಿಗೆ ವ್ಯವಸ್ಥೆಯಲ್ಲಿನ ದಕ್ಷತೆ, ಬದ್ಧತೆ ಮತ್ತು ವಿನೂತನ ಪ್ರಯೋಗಗಳ ಅಭೂತಪೂರ್ವ ದ್ಯೋತಕ. ಕೆಎಸ್‌ಆರ್‌ಟಿಸಿಯ ಈ ಸಾಧನೆ ಜಾಗತಿಕ ಮಟ್ಟದಲ್ಲಿ ಹೊಸ ಮಾನದಂಡವನ್ನೇ ಸೃಷ್ಟಿಸಿದೆ ಎಂದು ಲಂಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಹೇಳಿದೆ.

ಈ ಗೌರವಗಳನ್ನು ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಎನ್‌ಡಬ್ಲ್ಯೂಕೆಎಸ್‌ಆರ್‌ಟಿಸಿ, ಕೆಕೆಆರ್‌ಟಿಸಿ ಮತ್ತು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಮತ್ತು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರಾಗಿರುವ ಐಎಎಸ್ ಅಧಿಕಾರಿ ಅಕ್ರಂ ಪಾಷಾ ಅವರಿಗೆ ಗೌರವದಿಂದ ನೀಡುತ್ತಿದ್ದೇವೆ ಎಂದು ಲಂಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಹೇಳಿದೆ.


