ಅಪರೂಪದ ಪ್ರಕರಣಗಳಲ್ಲಿ ಹೈಕೋರ್ಟ್‌ಗಳು ಕೇಂದ್ರೀಯ ತನಿಖಾ ದಳ (ಸಿಬಿಐ) ತನಿಖೆಗೆ ಆದೇಶಿಸಬಹುದು ಎಂದು ಪುನರುಚ್ಚರಿಸಿರುವ ಸುಪ್ರೀಂಕೋರ್ಟ್, ಉತ್ತರಪ್ರದೇಶದ ವಿಧಾನಪರಿಷತ್ ಮತ್ತು ವಿಧಾನಸಭೆ ಕಾರ್ಯಾಲಯದಲ್ಲಿ ನಡೆದಿದೆ ಎನ್ನಲಾಗಿರುವ ನೇಮಕಾತಿ ಅಕ್ರಮದ ಸಿಬಿಐ ತನಿಖೆಗೆ ಅಲಹಾಬಾದ್ ಹೈಕೋರ್ಟ್ ನೀಡಿದ್ದ ಆದೇಶವನ್ನು ವಜಾಗೊಳಿಸಿದೆ.
ನ್ಯಾಯಮೂರ್ತಿ ಜೆ ಕೆ ಮಹೇಶ್ವರಿ ಮತ್ತು ನ್ಯಾಯಮೂರ್ತಿ ವಿಜಯ್ ಬಿಷ್ಣೋಯಿ ಅವರಿದ್ದ ದ್ವಿಸದಸ್ಯ ಪೀಠ ಈ ಮಹತ್ವದ ತೀರ್ಪು ನೀಡಿದೆ.
ಸಿಬಿಐ ತನಿಖೆಗೆ ನಿರ್ದೇಶಿಸಲು ದತ್ತವಾದ ಅಧಿಕಾರವನ್ನು ಎಚ್ಚರಿಕೆಯಿಂದ ಮತ್ತು ಅಪರೂಪದ ಸಂದರ್ಭದಲ್ಲಿ ಮಾತ್ರ ಚಲಾಯಿಸಬೇಕು. ರಾಜ್ಯ ಪೊಲೀಸರ ಮೇಲೆ ಸಂಶಯ ವ್ಯಕ್ತಪಡಿಸಿದ ಮಾತ್ರಕ್ಕೆ ಸಿಬಿಐ ತನಿಖೆಯನ್ನು ಆದೇಶಿಸಬಾರದು ಎಂದು ಈ ನ್ಯಾಯಾಲಯ ನಿರಂತರವಾಗಿ ಎಚ್ಚರಿಸುತ್ತಿದೆ. ಪ್ರಕರಣದ ಸಂಕೀರ್ಣತೆ, ರಾಷ್ಟ್ರದ ಮೇಲೆ ಪ್ರಭಾವ ಬೀರುವ ಆರೋಪಗಳಿದ್ದಾಗ ಕೇಂದ್ರೀಯ ತನಿಖಾ ಸಂಸ್ಥೆಯ ತನಿಖೆಗೆ ಬೇಡಿಕೆ ಇಡಬಹುದು.
ಸಿಬಿಐ ತನಿಖೆಗೆ ಆದೇಶ ನೀಡುವುದು ಕೊನೆಯ ಅವಕಾಶ ಎಂದು ಭಾವಿಸಬೇಕಾಗುತ್ತದೆ. ತನಿಖೆಯ ಪ್ರಾಮಾಣಿಕತೆಯಲ್ಲಿ ರಾಜಿ ಮಾಡಿಕೊಳ್ಳಲಾಗಿದೆ ಮತ್ತು ಅದರಿಂದ ನ್ಯಾಯಾಲಯ ಮತ್ತು ನ್ಯಾಯದಾನ ವ್ಯವಸ್ಥೆ ಮೇಲೆ ಸಾರ್ವಜನಿಕರ ನಂಬಿಕೆಗೆ ಪೆಟ್ಟು ಬೀಳಲಿದೆ ಎಂದು ಸಂವಿಧಾನಿಕ ನ್ಯಾಯಾಲಯ ಮನವರಿಕೆಯಾದಾಗ ಮಾತ್ರ ಸಿಬಿಐ ತನಿಖೆಗೆ ಆದೇಶಿಸಲು ಸಾಧ್ಯ. ಮೇಲ್ನೋಟಕ್ಕೆ ಇದನ್ನು ಸಾಬೀತುಪಡಿಸುವುದಕ್ಕೆ ವ್ಯವಸ್ಥೆಯ ವೈಫಲ್ಯ, ರಾಜ್ಯದ ಹಿರಿಯ ಅಧಿಕಾರಿಗಳು ಅಥವಾ ಪ್ರಭಾವಿ ರಾಜಕಾರಣಿಗಳು ಅಥವಾ ತಟಸ್ಥ ತನಿಖೆ ಸಾಧ್ಯವಿಲ್ಲ ಎಂದು ಪ್ರಜೆಗಳಿಗೆ ಅನುಮಾನ ಬರುವಂತೆ ಸ್ಥಳೀಯ ಪೊಲೀಸರೇ ನಡೆದುಕೊಂಡರೆ ಅಂತಹ ಸನ್ನಿವೇಶಗಳು ಏರ್ಪಡುತ್ತವೆ. ಇಂತಹ ಅಂಶಗಳು ಇಲ್ಲದ , ಅಪರೂಪದ ಪ್ರಕರಣವಲ್ಲದ ಹೊರತು ಸಂವಿಧಾನಿಕ ನ್ಯಾಯಾಯಗಳು ವಿಶೇಷ ಕೇಂದ್ರೀಯ ಸಂಸ್ಥೆಯ ಮೇಲೆ ಅನಗತ್ಯ ಹೊರೆ ಹೊರಿಸಬಾರದು
ಎಂದು ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿ ಪುನರುಚ್ಚರಿಸಿದೆ.


