ಕಳೆದ ವಿಧಾನಸಭಾ ಚುನಾವಣೆ ವೇಳೆ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಚುನಾವಣಾಧಿಕಾರಿಗಳು ದಾಖಲಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ದೋಷಪೂರಿತ ಆರೋಪಪಟ್ಟಿ ಸಲ್ಲಿಸಿದ್ದ ಪೊಲೀಸ್ ಅಧಿಕಾರಿಯ ವಿರುದ್ಧ ಕರ್ನಾಟಕ ಹೈಕೋರ್ಟ್ ಕೆಂಡಾಮಂಡಲವಾಗಿದೆ.
ಚುನಾವಣಾ ಕೃತ್ಯಗಳ ಗಂಭೀರತೆ ಬಗ್ಗೆ ಟಿಪ್ಪಣಿ ಮಾಡಬೇಕಾಗುತ್ತದೆ. ಚುನಾವಣೆಗೆ ಸಂಬಂಧಿಸಿದ ಅಪರಾಧಗಳಿಗೆ ಸಂಬಂಧಿಸಿದಂತೆ ಭಾರತೀಯ ದಂಡ ಸಂಹಿತೆಯಲ್ಲಿ 9ಎ ಎಂಬ ಪ್ರತ್ಯೇಕ ಅಧ್ಯಾಯವೇ ಇದೆ.
ಪ್ರಭಾವಿಗಳು ಒಳಗೊಂಡಿರುವ ಪ್ರಕರಣಗಳಲ್ಲಿ ಸಂಬಂಧಪಟ್ಟ ಅಧಿಕಾರಿಗಳು ದೋಷಪೂರಿತ ಆರೋಪಪಟ್ಟಿ ಸಲ್ಲಿಸುತ್ತಿರುವುದು ಕಾಣಿಸುತ್ತಿದೆ, ಆರೋಪಪಟ್ಟಿಯನ್ನು ಸಲ್ಲಿಸಿದ್ದೇವೆ ಎಂದು ತೋರಿಸಿಕೊಳ್ಳುವುದು ಮತ್ತು ಆ ಆರೋಪಪಟ್ಟಿಯನ್ನು ನ್ಯಾಯಾಲಯ ವಜಾಗೊಳಿಸಲಿ ಎನ್ನುವುದು ದೋಷಪೂರಿತ ಆರೋಪಪಟ್ಟಿ ಸಲ್ಲಿಕೆಯ ಉದ್ದೇಶವಾಗಿದೆ. ಆದರೆ ದೋಷಪೂರಿತ ಆರೋಪಪಟ್ಟಿಯನ್ನು ವಜಾಗೊಳಿಸುವುದಕ್ಕೆ ನ್ಯಾಯಾಲಯಕ್ಕೆ ಬಾಗಿಲನ್ನು ತೆರೆದಿಡುತ್ತಿದ್ದಾರೆ. ಅಧಿಕಾರಿಗಳ ಇಂತಹ ವರ್ತನೆಯನ್ನು ಖಂಡಿಸಬೇಕಾಗುತ್ತದೆ
ಎಂದು ಏಕಸದಸ್ಯ ಪೀಠ ನ್ಯಾಯಮೂರ್ತಿ ಸುನಿಲ್ ದತ್ ಯಾದವ್ ಕೆಂಡಾಮಂಡಲರಾಗಿದ್ದಾರೆ.
ವಿಧಾನಸಭಾ ಚುನಾವಣೆಯ ವೇಳೆ 2023ರ ಏಪ್ರಿಲ್ 23ರಂದು ಬಿಜೆಪಿ ಕಾರ್ಯಕರ್ತರು ಬೈಕ್ ರ್ಯಾಲಿ ನಡೆಸಿದ್ದರು. ಮಾಜಿ ಸಂಸದ ಪ್ರತಾಪ್ ಸಿಂಹ ಆಗಿನ ಮುಡಾದ ಅಧ್ಯಕ್ಷರ ಜೊತೆಗೆ ಇನ್ನೋವಾ ಕಾರಿನಲ್ಲಿ ತೆರೆಳುತ್ತಿದ್ದರು ಮತ್ತು ಮತದಾರರನ್ನು ಉದ್ದೇಶಿಸಿ ಭಾಷಣ ಮಾಡಿದ್ದರು.
ಈ ವೇಳೆ ಚುನಾವಣಾಧಿಕಾರಿಗಳು ಚುನಾವಣಾ ಆಯೋಗದಿಂದ ಪಡೆದುಕೊಂಡ ಅನುಮತಿ ಬಗ್ಗೆ ಪ್ರಶ್ನಿಸಿದರು. ಅನುಮತಿ ಇಲ್ಲದ ಕಾರಣ ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಐಪಿಸಿ ಸೆಕ್ಷನ್ 171H (ಚುನಾವಣಾ ವೆಚ್ಚದ ಲೆಕ್ಕ ಪತ್ರವನ್ನು ಇಡುವುದು) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು.
ತನಿಖೆ ನಡೆಸಿದ್ದ ಪೊಲೀಸರು ಆರೋಪಪಟ್ಟಿ ಸಲ್ಲಿಸಿದ್ದರು. ಆದರೆ ಆ ಆರೋಪಪಟ್ಟಿಯಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧದ ದಾಖಲಿಸಲಾಗಿದ್ದ ಐಪಿಸಿ ಸೆಕ್ಷನ್ 171H ಅಡಿಯಲ್ಲಿ ಹೇಳಲಾಗಿರುವ ಆರೋಪಕ್ಕೂ ಆರೋಪಪಟ್ಟಿಯಲ್ಲಿನ ಅಂಶಗಳಿಗೂ ಸಂಬಧವೇ ಇಲ್ಲ. ಸಾರ್ವಜನಿಕ ಅಧಿಕಾರಿಯ ಆದೇಶದ ಪಾಲನೆಗೆ ವಿಫಲ ಆರೋಪಕ್ಕೆ ಸಂಬಂಧಿಸಿದಂತೆ ಸೆಕ್ಷನ್ 188ರಡಿಯಲ್ಲಿ ಅಂಶಗಳಿಗೆ ಸಂಬಂಧಿಸಿದಂತ ಆರೋಪಪಟ್ಟಿ ಸಲ್ಲಿಸಿದ್ದರು.
ಆರೋಪಪಟ್ಟಿಯನ್ನು ಸಲ್ಲಿಸುವಾಗ ಸಬ್‌ಇನ್ಸ್‌ಪೆಕ್ಟರ್ ಐಪಿಸಿ ಸೆಕ್ಷನ್ 171H ಮತ್ತು ಐಪಿಸಿ ಸೆಕ್ಷನ್ 188ರ ನಡುವಿನ ಮೂಲಭೂತ ವ್ಯತ್ಯಾಸವನ್ನು ಗಮನಿಸಿಲ್ಲ
ಎಂದು ಹೈಕೋರ್ಟ್ ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟಿದ್ದಾರೆ.
ತಮ್ಮ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸಬೇಕೆಂದು ಕೋರಿ ಪ್ರತಾಪ್ ಸಿಂಹ ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿದ ಹೈಕೋರ್ಟ್, ಪೊಲೀಸರು ದೋಷಪೂರಿತ ಆರೋಪಪಟ್ಟಿ ಸಲ್ಲಿಸಿದ್ದಾರೆ ಎಂದು ಹೇಳಿ ಪ್ರಕರಣವನ್ನೇ ರದ್ದುಗೊಳಿಸಿ ಆದೇಶ ನೀಡಿದೆ.


