ಬೆಂಗಳೂರಿನ ರಾಜಾಜಿನಗರದಲ್ಲಿರುವ ಖಾಸಗಿ ಆಸ್ಪತ್ರೆ ಲೆಕ್ಸಿಂಗ್‌ಟನ್ ವಿರುದ್ಧ ಬೆಂಗಳೂರು ನಗರ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ (DHO) ದೂರು ಸಲ್ಲಿಕೆ ಆಗಿದೆ.
ಕರ್ನಾಟಕ ಖಾಸಗಿ ವೈದ್ಯಕೀಯ ಸ್ಥಾಪನೆಗಳ (ಕೆಪಿಎಂಇ) ಕಾಯ್ದೆಯ ಅಡಿಯಲ್ಲಿ ಪೂರ್ವಾನುಮತಿಯನ್ನು ಪಡೆಯದೇ ಈ ಆಸ್ಪತ್ರೆಯನ್ನು ನಡೆಸಲಾಗುತ್ತಿದೆ ಎಂದು ಹರೀಶ್ ಎಂಬವರು ಬೆಂಗಳೂರು ನಗರ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ.
ರಾಜಾಜಿನಗರದ ೨ನೇ ಬ್ಲಾಕ್‌ನಲ್ಲಿ ಲೆಕ್ಸಿಂಗ್‌ಟನ್ ಹೆಲ್ತ್ ಕೇರ್ ಪ್ರೈವೇಟ್ ಲಿಮಿಟೆಡ್ ಎಂಬ ಹೆಸರಿನ ಖಾಸಗಿ ಆಸ್ಪತ್ರೆಯು ಮೇ 15ರಿಂದಲೇ ಕಾರ್ಯನಿರ್ವಹಿಸುತ್ತಿದೆ. ಈ ಆಸ್ಪತ್ರೆ ಕರ್ನಾಟಕ ಖಾಸಗಿ ಆಸ್ಪತ್ರೆ ಸ್ಥಾಪನೆ ಕಾಯ್ದೆಯಡಿಯಲ್ಲಿ ಪರವಾನಿಗೆಯನ್ನು ಪಡೆದಿರುವುದಿಲ್ಲ. ಆದರೂ ಕೂಡಾ ಸದರಿ ಆಸ್ಪತ್ರೆಯು ಪರವಾನಿಗೆಯನ್ನು ಪಡೆಯದೆಯೇ ಕಳೆದ 5 ತಿಂಗಳಿಂದ ಕಾರ್ಯನಿರ್ವಹಿಸುತ್ತಿದೆ.
ಈ ಆಸ್ಪತ್ರೆಯು ಅಗ್ನಿ ಸುರಕ್ಷತೆಗೆ ಸಂಬಂಧಿಸಿದಂತೆ ಅಗ್ನಿಶಾಮಕ ದಳ ಪ್ರಮಾಣಪತ್ರವನ್ನೂ ಹೊಂದಿರುವುದಿಲ್ಲ. ಅಲ್ಲದೇ ಮಾಲಿನ್ಯ ನಿಯಂತ್ರಣ ಮಂಡಳಿಯಿಂದಲೂ ಸದರಿ ಆಸ್ಪತ್ರೆಯು ಪ್ರಮಾಣಪತ್ರವನ್ನೂ ಪಡೆದಿರುವುದಿಲ್ಲ. ರಾಜಾಜಿನಗರದಲ್ಲಿರುವ ಸರ್ಕಾರಿ ESI ಆಸ್ಪತ್ರೆಯ ಸಮೀಪದಲ್ಲೇ ಇದ್ದು ಕೂಡಾ ಕೆಪಿಎಂಇ ಕಾಯ್ದೆಯ ನಿಯಮಗಳಿಗೆ ವಿರುದ್ಧವಾಗಿದೆ.
ಕೆಪಿಎಂಇ ಕಾಯ್ದೆಯ ಪ್ರಕಾರ ಪ್ರತಿಯೊಂದು ಖಾಸಗಿ ಆಸ್ಪತ್ರೆಯು ತಾನು ಹೊಂದಿರುವ ಕೆಪಿಎಂಇ ನೋಂದಣಿ ಸಂಖ್ಯೆ, ಸಂಸ್ಥೆಯ ಹೆಸರು ಮತ್ತು ಸಂಸ್ಥೆಯ ಮಾಲೀಕರ ಮಾಹಿತಿಯನ್ನು ಸಾರ್ವಜನಿಕರಿಗೆ ತಿಳಿಯುವಂತೆ ಪ್ರದರ್ಶಿಸುವುದು ಕಡ್ಡಾಯವಾಗಿದೆ. ಆದರೆ ಸದರಿ ಆಸ್ಪತ್ರೆಯು ಇನ್ನೂ ಕೆಪಿಎಂಇನಲ್ಲಿ ನೋಂದಣಿ ಆಗದೇ ಇರುವ ಹಿನ್ನೆಲೆಯಲ್ಲಿ ಕೆಪಿಎಂಇ ಸಂಖ್ಯೆಯನ್ನು ಪ್ರದರ್ಶನ ಮಾಡಿರುವುದಿಲ್ಲ. ಸದರಿ ಆಸ್ಪತ್ರೆಯು 29 ಹಾಸಿಗೆಗಳ ಸಾಮರ್ಥ್ಯವನ್ನು ಹೊಂದಿದ್ದು, ಈ ಆಸ್ಪತ್ರೆಗೆ ಯಾವುದೇ ಪಾರ್ಕಿಂಗ್ ವ್ಯವಸ್ಥೆಯಾಗಲೀ ಇರುವುದಿಲ್ಲ.
KPME ಕಾಯ್ದೆಯಡಿ ಖಾಸಗಿ ಆಸ್ಪತ್ರೆಗಳು ನೋಂದಣಿಯ ವೇಳೆ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಮಾಣ ಪತ್ರ, ಅಗ್ನಿ ಸುರಕ್ಷತೆ ಪ್ರಮಾಣಪತ್ರ, ಸ್ವಾಧೀನಾನುಭವ ಪ್ರಮಾಣಪತ್ರ, ಕಟ್ಟಡದ ನಕಾಶೆ ಮತ್ತು ಕಟ್ಟಡದ ಫೋಟೋಗಳನ್ನು ಸಲ್ಲಿಸುವುದು ಕಡ್ಡಾಯವಾಗಿದೆ. ಈ ದಾಖಲೆಗಳ ಸಲ್ಲಿಕೆಯ ಬಳಿಕವಷ್ಟೇ ನೋಂದಣಿ ಪ್ರಮಾಣಪತ್ರ ಲಭ್ಯವಾಗುತ್ತದೆ. ನೋಂದಣಿ ಪ್ರಮಾಣಪತ್ರ ಲಭ್ಯವಾದ ಬಳಿಕವಷ್ಟೇ ಆಸ್ಪತ್ರೆಯನ್ನು ನಡೆಸುವುದಕ್ಕೆ ಕಾನೂನಿನಡಿ ಅವಕಾಶವಿದೆ.
ಪೂರ್ವಾನುಮತಿಯಿಲ್ಲದೇ ಖಾಸಗಿ ಆಸ್ಪತ್ರೆಗಳನ್ನು ನಡೆಸುವುದು ಮೂರು ವರ್ಷಗಳವರೆಗೆ ಶಿಕ್ಷೆ ವಿಧಿಸಬಹುದಾದ ಶಿಕ್ಷಾರ್ಹ ಅಪರಾಧವಾಗಿದೆ ಮತ್ತು ೧೦ ಸಾವಿರ ರೂಪಾಯಿ ದಂಡ ವಿಧಿಸುವುದಕ್ಕೂ ಅವಕಾಶಗಳಿವೆ.
ಇದೇ ವರ್ಷದ ಮಾರ್ಚ್ ಮತ್ತು ಜುಲೈನಲ್ಲಿ (2025) ಬೆಂಗಳೂರು ನಗರ ಜಿಲ್ಲಾ ಆರೋಗ್ಯಾಧಿಕಾರಿಗಳ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಕೆಪಿಎಂಇ ಕಾಯ್ದೆಯಡಿಯಲ್ಲಿ ನೋಂದಣಿಯಾಗದ ಆಸ್ಪತ್ರೆಗಳು ಮತ್ತು ಕ್ಲಿನಿಕ್‌ಗಳ ವಿರುದ್ಧ ಕಠಿಣ ಕಾನೂನು ಕ್ರಮಗಳನ್ನು ಕೈಗೊಂಡಿದ್ದನ್ನು ನಾವು ಗಮನಿಸಬೇಕಾಗುತ್ತದೆ.
ಈ ಹಿನ್ನೆಲೆಯಲ್ಲಿ ಕೆಪಿಎಂಇ ಆಡಿಯಲ್ಲಿ ಸೂಚಿಸಲಾಗಿರುವ ನಿಯಮಗಳನ್ನು ಪಾಲಿಸದೇ ಪರವಾನಿಗೆಯನ್ನೂ ಪಡೆದುಕೊಳ್ಳದೇ ಕಾರ್ಯನಿರ್ವಹಿಸುತ್ತಿರುವ ಸದರಿ ಆಸ್ಪತ್ರೆಯ ವಿರುದ್ಧ ಕ್ರಮಕೈಗೊಳ್ಳಬೇಕೆಂದು
ಬೆಂಗಳೂರು ನಗರ ಜಿಲ್ಲಾ ಆರೋಗ್ಯಾಧಿಕಾರಿಗೆ ಸಲ್ಲಿಸಿರುವ ದೂರಿನಲ್ಲಿ ಹರೀಶ್ ಎಂಬವರು ಮನವಿ ಮಾಡಿದ್ದಾರೆ.


