ಕರ್ನಾಟಕದಲ್ಲಿ ಯಡಿಯೂರಪ್ಪ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದ ರಾಜಕಾರಣವನ್ನೇ ತಲ್ಲಣಗೊಳಿಸಿದ್ದ ಬೇಲೆಕೇರಿ ಅದಿರು ಕಳ್ಳ ಸಾಗಾಣಿಕೆ ಈಗ ಮತ್ತೆ ಕರ್ನಾಟಕ ರಾಜಕಾರಣದಲ್ಲಿ ನಡುಕ ಹುಟ್ಟಿಸಿದೆ.
50 ಸಾವಿರ ಮೆಟ್ರಿಕ್ ಟನ್‌ನ್ನಷ್ಟು ಕಬ್ಬಿಣದ ಅದಿರನ್ನು ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿರುವ ಬೆಲೆಕೇರಿ ಬಂದರಿನಿಂದ ಅಕ್ರಮ ಸಾಗಾಟ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (Directorate of Enforcement (ED)) ದೇಶದ 20 ಕಡೆಗಳಲ್ಲಿ ಶೋಧ ಕೈಗೊಂಡಿದೆ.
ಕರ್ನಾಟಕದ ಬೆಂಗಳೂರು, ಹೊಸಪೇಟೆ ಮತ್ತು ಹರಿಯಾದ ಗುರುಗ್ರಾಮಗಳಲ್ಲಿ 20 ಕಡೆ ಇಡಿ ದಾಳಿಯನ್ನು ನಡೆಸಿತ್ತು.
ದಾಳಿ ವೇಳೆ ಅಕ್ರಮ ಕಬ್ಬಿಣದ ಅದಿರು ಸಾಗಾಟಕ್ಕೆ ಸಂಬಂಧಿಸಿದಂತೆ ದಾಖಲೆಗಳು ಲಭ್ಯವಾಗಿವೆ. ಈ ಅಕ್ರಮ ಅದಿರು ಸಾಗಾಟದಿಂದ ಗಳಿಸಲಾಗಿರುವ 12.84 ಕೋಟಿ ರೂಪಾಯಿ ಮೊತ್ತದ ಆಸ್ತಿಯನ್ನು ಜಪ್ತಿ ಮಾಡಿಕೊಂಡಿದ್ದಾಗಿ ಜಾರಿ ನಿರ್ದೇಶನಾಲಯ ಹೇಳಿದೆ. 42 ಲಕ್ಷ ರೂಪಾಯಿ ಮೊತ್ತದ ನಗದನ್ನು ವಶಪಡಿಸಿಕೊಳ್ಳಲಾಗಿದೆ.
ಬೆಲೆಕೇರಿ ಬಂದರಿನಿಂದ ಮಾಡಲಾದ ಅಕ್ರಮ ಕಬ್ಬಿಣದ ಅದಿರು ಕಳ್ಳ ಸಾಗಾಣಿಕೆಯಿಂದ ಗಳಿಸಲಾಗಿರುವ ಚರಾಸ್ತಿಗಳ ದಾಖಲೆಗಳನ್ನೂ ವಶಪಡಿಸಿಕೊಳ್ಳಲಾಗಿದೆ ಎಂದು ಇಡಿ ಹೇಳಿದೆ.
ಸುಪ್ರೀಂಕೋರ್ಟ್ ಆದೇಶದ ಮೇರೆ ಅಕ್ರಮ ಗಣಿಗಾರಿಕೆ ಸಂಬಂಧ ಸಿಬಿಐ ತನಿಖೆ ನಡೆಸಿತ್ತು. ಸಿಬಿಐ ಸಲ್ಲಿಸಿದ್ದ ಆ ಆರೋಪಪಟ್ಟಿಯನ್ನು ಆಧರಿಸಿ ಇಡಿ ತನಿಖೆ ಕೈಗೊಂಡಿದೆ.
ಕಬ್ಬಿಣದ ಅದಿರು ಕಂಪನಿಗಳು, ಸಾಗಾಟದಾರರು ಮತ್ತು ರಫ್ತುದಾರರು ಸೇರಿಕೊಂಡು ರಾಜ್ಯಕ್ಕೆ ರಾಯಧನ ಮತ್ತು ತೆರಿಗೆ ವಂಚನೆ ಮಾಡಿದ್ದಾರೆ. ಅಕ್ರಮ ಹಣ ವರ್ಗಾವಣೆಗಾಗಿ ನಕಲಿ ದಾಖಲೆಗಳನ್ನು ಸಲ್ಲಿಸಲಾಗಿದೆ.
ಈ ಅಕ್ರಮಗಳಿಂದ ಎಂಎಸ್‌ಪಿಎಲ್ ಕಂಪನಿಯ ನರೇಂದ್ರ ಕುಮಾರ್ ಬಲ್ಡೋಟಾ, ಗ್ರೀನ್‌ಟೆಕ್ಸ್ ಮೈನಿಂಗ್ ಇಂಡಸ್ಟ್ರೀಸ್‌ನ ಅಜಯ್ ಖಾರವಂದಾ, ಶ್ರೀನಿವಾಸ ಮಿನಿರಲ್ಸ್ ಟ್ರೇಡಿಂಗ್ ಕಂಪನಿಯ ವೈ ಶ್ರೀನಿವಾಸ ರಾವ್, ಅರ್ಷದ್ ಎಕ್ಸ್‌ಪೋರ್ಟ್‌ನ ಮೊಹಮ್ಮದ್ ಅಸ್ಗರ್ ಖಾನ್, ಎಸ್‌ವಿಎಂ ನೆಟ್ ಪ್ರಾಜೆಕ್ಟ್ ಸಲ್ಯೂಷನ್ ಪ್ರೈವೇಟ್ ಲಿಮಿಟೆಡ್‌ನ ಬಸವರಾಜ ಬಿ ಮತ್ತು ಅಲ್ಫೈನ್ ಮಿನ್‌ಮೆಟಲ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಗಗನ್ ಶುಕ್ಲಾಗೆ ಲಾಭವಾಗಿದೆ ಎಂದು ಇಡಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. (M/s MSPL Ltd (Narendra Kumar
Baldota), M/s Greentex Mining Industries Ltd (Ajay Kharwanda), M/s Srinivasa Minerals Trading Co (YSrinivas Rao), M/s Arshad Exports (Md. Asghar Khan), M/s SVM Nett Project Solutions Pvt. Ltd (Basavaraj B) and M/s Alphine Minmetals India Pvt. Ltd. (Gagan Shukla).
ಇತ್ತೀಚೆಗಷ್ಟೇ ಬೆಲೆಕೇರಿ ಬಂದರಿನಿಂದ ಅದಿರು ಕಳ್ಳ ಸಾಗಾಣಿಕೆಗೆ ಸಂಬಂಧಿಸಿದಂತೆ ಕಾರವಾರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಅವರನ್ನು ಇಡಿ ಬಂಧಿಸಿತ್ತು.


