ಗೃಹ ಲಕ್ಷ್ಮೀ ಯೋಜನೆ ಮೂಲಕ ರಾಜ್ಯದ ಮಹಿಳೆಯರಿಗೆ ಆರ್ಥಿಕ-ಸಾಮಾಜಿಕ ಭದ್ರತೆ ನೀಡಿದ್ದ ಕಾಂಗ್ರೆಸ್ ಸರ್ಕಾರ ಈಗ ದೀಪಾವಳಿಗೆ ರಾಜ್ಯದ ಮಹಿಳೆಯರಿಗಾಗಿ ಮಹತ್ವದ ಉಡುಗೊರೆ ನೀಡಿದೆ.
ರಾಜ್ಯದಲ್ಲಿ ಗೃಹಲಕ್ಷ್ಮೀ ವಿವಿದೋದ್ದೇಶ ಸಹಕಾರ ಸಂಘ ಸ್ಥಾಪನೆಗೆ ಸಹಕಾರ ಸಂಘಗಳ ಅಪರ ನಿಬಂಧಕರು ಅನುಮೋದನೆಯನ್ನು ನೀಡಿದ್ದಾರೆ.
ಗೃಹ ಲಕ್ಷ್ಮೀ ವಿವಿದೋದ್ದೇಶ ಸಹಕಾರ ಸಂಘ ಸ್ಥಾಪಿಸುವುದಾಗಿ 21 ಗೃಹ ಲಕ್ಷ್ಮೀ ಫಲಾನುಭವಿಗಳನ್ನು ಪ್ರವರ್ತಕರಗಾಗಿ ಪರಿಗಣಿಸಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮುಖ್ಯ ಪ್ರವರ್ತಕರ ಮೂಲಕ ಸಹಕಾರ ಇಲಾಖೆಗೆ ಪ್ರಸ್ತಾವನೆಯನ್ನು ಸಲ್ಲಿಸಿತ್ತು.
ನೋಂದಣಿ ಪೂರ್ವದಲ್ಲಿ ಕನಿಷ್ಠ ಒಂದು ಸಾವಿರ ಸದಸ್ಯರಿಂದ 20 ಲಕ್ಷ ರೂಪಾಯಿ ಷೇರು ಹಣ ಸಂಗ್ರಹಿಸಬೇಕು ಎಂದು 90 ದಿನಗಳ ಗಡುವನ್ನು ವಿಧಿಸಿ ಸಹಕಾರ ಇಲಾಖೆ ಅನುಮತಿಯನ್ನು ನೀಡಿದೆ.
ಗೃಹ ಲಕ್ಷ್ಮೀ ವಿವಿದೋದ್ದೇಶ ಸಹಕಾರ ಸಂಘ ನೋಂದಣಿಗೆ ಅನುಮತಿ ಸಿಗುತ್ತಿದ್ದಂತೆ 31 ಜಿಲ್ಲೆಗಳ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರಿಗೆ ಇಲಾಖೆಯ ನಿರ್ದೇಶಕರು ಪತ್ರ ಬರೆದಿದ್ದಾರೆ.
ಕೊಡಗು ಜಿಲ್ಲೆಗೆ 50, ಉಳಿದ ಜಿಲ್ಲೆಗಳಿಂದ ಜಿಲ್ಲೆಗೆ 65 ಫಲಾನುಭವಿಗಳಿಂದ ಸದಸ್ಯತ್ವದ ಅರ್ಜಿಯನ್ನು ಸ್ವೀಕರಿಸುವಂತೆ ಸೂಚಿಸಲಾಗಿದೆ. ಷೇರು ಮೌಲ್ಯ 1 ಸಾವಿರ ರೂಪಾಯಿ, ಪ್ರವೇಶ ಶುಲ್ಕ 100 ರೂ. ಅರ್ಜಿ ಶುಲ್ಕ 50 ರೂಪಾಯಿ ಒಟ್ಟು 1,250 ರೂಪಾಯಿಯನ್ನು ಸಂಗ್ರಹಿಸುವಂತೆ ಸೂಚಿಸಲಾಗಿದೆ.
ಷೇರುದಾರರ ಆಧಾರ್ ಕಾರ್ಡ್, ಪಾನ್ ಕಾರ್ಡ್, 4 ಪಾಸ್‌ಪೋರ್ಟ್ ಅಳತೆಯ ಫೋಟೋಗಳೊಂದಿಗೆ ಪ್ರಧಾನ ಕಚೇರಿಗೆ ಸಲ್ಲಿಸಬೇಕು ಎಂದು ಉಪ ನಿರ್ದೇಶಕರಿಗೆ ಸೂಚಿಸಿದ್ದಾರೆ.
ಗೃಹ ಲಕ್ಷ್ಮೀ ಯೋಜನೆಯ ಫಲಾನುಭವಿ ಮಹಿಳೆಯರ ಉಳಿತಾಯವನ್ನು ಹೆಚ್ಚಳ ಮಾಡುವುದು ಸಂಘದ ಪ್ರಮುಖ ಉದ್ದೇಶ. ಇದರ ಜೊತೆಗೆ ಸಂಘದ ಮೂಲಕ ಅಂಗನವಾಡಿಗಳಿಗೆ ಪೌಷ್ಠಿಕ ಆಹಾರ ಪೂರೈಕೆ, ಜನತಾ ಬಜಾರ್ ಸ್ಥಾಪಿಸುವ ಆಲೋಚನೆ ಇದೆ.


