ತನಿಖೆ ನೆಪದಲ್ಲಿ ಓಲಾ (OLA) ಕಂಪನಿಯ ಮಾಲೀಕ ಭವಿಷ್ ಅಗರ್‌ವಾಲ್ (Bhavish Agarwal) ಮತ್ತು ಇತರರಿಗೆ ಕಿರುಕುಳ ನೀಡದಂತೆ ಬೆಂಗಳೂರಿನ ಸುಬ್ರಹ್ಮಣ್ಯ ನಗರ ಠಾಣೆ (Bengaluru Police) ಪೊಲೀಸರಿಗೆ ಕರ್ನಾಟಕ ಹೈಕೋರ್ಟ್ ಎಚ್ಚರಿಕೆ ನೀಡಿದೆ.
ಓಲಾ ಸಿಇಒ (Ola CEO) ಭವಿಷ್ ಅಗರ್‌ವಾಲ್, ಸುಬ್ರತ್ ಕುಮಾರ್ ದಾಸ್ ಮತ್ತು ಕಂಪನಿ (OLA) ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಮೊಹಮ್ಮದ್ ನವಾಜ್ (Justice Mohammad Nawaz) ಈ ಆದೇಶ ನೀಡಿದ್ದಾರೆ.
ಓಲಾ ಕಂಪನಿಯ ಉದ್ಯೋಗಿ ಅಶ್ವಿನ್ ಕಣ್ಣನ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ಆತ್ಮಹತ್ಯೆ ಪತ್ರದಲ್ಲಿ ಓಲಾ ಕಂಪನಿಯ ಕಿರುಕುಳದ ಬಗ್ಗೆ ಆರೋಪ ಮಾಡಿದ್ದರು. ಓಲಾ ಕಂಪನಿ ತಮ್ಮ ಸಂಬಳವನ್ನು ಬಾಕಿ ಉಳಿಸಿಕೊಂಡಿದೆ ಎಂದೂ, ಬಾಕಿ ಸವಲತ್ತುಗಳನ್ನು ಕೊಟ್ಟಿಲ್ಲವೆಂದು ಆತ್ಮಹತ್ಯೆ ಪತ್ರದಲ್ಲಿ ಆರೋಪಿಸಲಾಗಿತ್ತು. ಅಕ್ಟೋಬರ್ 6ರಂದು ಅಶ್ವಿನ್ ಅವರ ಸಹೋದರ ಪೊಲೀಸರಿಗೆ ದೂರು ನೀಡಿದ್ದರು.
ಆ ದೂರು ಆಧರಿಸಿ ಭಾರತೀಯ ನ್ಯಾಯ ಸಂಹಿತೆಯ ಕಲಂ 108 (ಆತ್ಮಹತ್ಯೆಗೆ ಪ್ರಚೋದನೆ), 3(5)(ಒಂದೇ ಉದ್ದೇಶ)ದಡಿ ಮೂವರ ವಿರುದ್ಧ FIR ದಾಖಲಿಸಿಕೊಂಡಿದ್ದರು.
ತಮ್ಮ ವಿರುದ್ಧ ದಾಖಲಾಗಿರುವ FIRನ್ನು ರದ್ದುಗೊಳಿಸುವಂತೆ ಕೋರಿ ಭವಿಷ್ ಅಗರ್‌ವಾಲ್ ಕರ್ನಾಟಕ ಹೈಕೋರ್ಟ್‌ಗೆ (Karnataka High Court) ಅರ್ಜಿ ಸಲ್ಲಿಸಿದ್ದರು. ತನಿಖೆಗೆ ತಡೆ ಕೊಡಬೇಕು ಮತ್ತು ಯಾವುದೇ ಪ್ರತಿಕೂಲ ಕ್ರಮ ಕೈಗೊಳ್ಳದಂತೆ ಪೊಲೀಸರಿಗೆ ಸೂಚಿಸಬೇಕು ಎಂದು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.


