ಗೋ ಕಳ್ಳ ಸಾಗಾಣಿಕೆ ಸಂಬಂಧ ಪೊಲೀಸರ ಮೇಲೆ ಗುಂಪು ಕಟ್ಟಿಕೊಂಡು ಕಲ್ಲು ತೂರಾಟ ಮಾಡಿದ್ದ ಗಲಭೆಕೋರರ ಮೇಲಿನ ಪ್ರಕರಣವನ್ನು ಕೈಬಿಡುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ತಮ್ಮದೇ ಸರ್ಕಾರಕ್ಕೆ ಶಿಫಾರಸ್ಸು ಮಾಡಿರುವ ಸ್ಫೋಟಕ ದಾಖಲೆ ಪ್ರತಿಕ್ಷಣಕ್ಕೆ ಲಭ್ಯವಾಗಿದೆ.
ಕಲ್ಬುರ್ಗಿ (Kalburgi) ಜಿಲ್ಲೆಯ ಚಿತ್ತಾಪುರ (Chittapur) ಪೊಲೀಸ್ ಠಾಣೆಯಲ್ಲಿ 2019ರಲ್ಲಿ ಗಲಭೆಕೋರರ ವಿರುದ್ಧದ ಪ್ರಕರಣವನ್ನು ಹಿಂಪಡೆಯುವಂತೆ ಚಿತ್ತಾಪೂರ ಶಾಸಕರೂ (MLA) ಆಗಿರುವ ಸಚಿವ ಪ್ರಿಯಾಂಕ್ ಖರ್ಗೆ ಮನವಿಯನ್ನು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.
(ಪ್ರತಿಕ್ಷಣ ಸುದ್ದಿಗಾಗಿ ವಾಟ್ಸಾಪ್ ನಂಬರ್ 97411 83147 ಅಥವಾ pratikshananews@gmail.com ನ್ನು ಸಂಪರ್ಕಿಸಿ)
ಗಲಭೆಕೋರರ ವಿರುದ್ಧದ ಪ್ರಕರಣವನ್ನು ಹಿಂಪಡೆಯುವಂತೆ ಸಚಿವ ಪ್ರಿಯಾಂಕ್ ಖರ್ಗೆ ಮಾಡಿದ ಮನವಿ ಮೇರೆಗೆ ಆಗಸ್ಟ್ 4, 2025ರಂದು ನಡೆದಿದ್ದ ಸಂಪುಟ ಉಪ ಸಮಿತಿ ಪ್ರಕರಣವನ್ನು ಕೈ ಬಿಡುವಂತೆ ಸರ್ಕಾರಕ್ಕೆ ಶಿಫಾರಸ್ಸನ್ನೂ ಮಾಡಿತ್ತು.
RSS ಲಾಠಿ ಹಿಡಿದು ಮೆರವಣಿಗೆ ಮಾಡುವುದರಿಂದ ದೇಶದಲ್ಲಿ ಕಾನೂನು-ಸುವ್ಯವಸ್ಥೆಗೆ ಧಕ್ಕೆ ಆಗುತ್ತದೆ ಎಂದು ವಾದಿಸುತ್ತಿರುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರ ಮಗ ಪ್ರಿಯಾಂಕ್ ಖರ್ಗೆ ಅವರು ಪೊಲೀಸ್ ಅಧಿಕಾರಿಯೇ ಖುದ್ದು ಕೊಟ್ಟ ದೂರಿನ ಆಧಾರದಲ್ಲಿ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ ಗಲಭೆಕೋರರ ಪ್ರಕರಣವನ್ನು ಹಿಂಪಡೆಯುವಂತೆ ಸರ್ಕಾರಕ್ಕೆ ಮನವಿ ಮಾಡಿರುವುದು ಅಚ್ಚರಿ ಮೂಡಿಸಿದೆ.

ಏನಿದು ಪ್ರಕರಣ..?
2019ರ ಆಗಸ್ಟ್ 12ರಂದು ಚಿತ್ತಾಪುರ ಠಾಣೆಯ PSI ನಟರಾಜ ಲಾಡೆ ಅವರೇ ಚಿತ್ತಾಪೂರ ಠಾಣೆಯಲ್ಲಿ ನೀಡಿದ ದೂರು ಆಧರಿಸಿ ದಾಖಲಾದ FIRನಲ್ಲಿರುವ ಸಾರಾಂಶ:
ಆಗಸ್ಟ್ 11, 2019ರಂದು ಸಂಜೆ 4 ಗಂಟೆಯಿಂದ ಸಂಜೆ 10 ಗಂಟೆಯವರೆಗೆ ಚಿತ್ತಾಪೂರ ಪಟ್ಟಣದ ದಿಗ್ಗಾಂವ ಕ್ರಾಸ್ ಹತ್ತಿರ ಚೆಕ್‌ಪೋಸ್ಟ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಚಿತ್ತಾಪೂರ ಠಾಣೆ ಮುಖ್ಯ ASI ಶ್ರೀಮತಿ ಅಂಬುಬಾಯಿ ಮತ್ತು ಸಿವಿಲ್ ಪೊಲೀಸ್ ಕಾನ್ಸ್‌ಸ್ಟೇಬಲ್ ಶಿವಯ್ಯ ಅವರು ದಿಗ್ಗಾಂವ ಕ್ರಾಸ್ ಹತ್ತಿರ ಅನಧಿಕೃತವಾಗಿ ಹಾಗೂ ಸುರಕ್ಷತಾ ಕ್ರಮ ಕೈಗೊಳ್ಳದೇ ಹಿಂಸಾತ್ಮಕವಾಗಿ ಗೋವುಗಳನ್ನು ಸಾಗಿಸ್ತಿದ್ದ ಬುಲೆರೋ ವಾಹನವನ್ನು ಹಿಡಿದು ಠಾಣೆಗೆ ತಂದಿದ್ದರು.
ಅನಧಿಕೃತವಾಗಿ ದನಗಳನ್ನು ಸಾಗಿಸುತ್ತಿದ್ದ ವಾಹನ ಹಿಡಿದು ತಂದ ವಿಷಯ ಮುಸ್ಲಿಂ ಜನಾಂಗದವರಿಗೆ ಗೊತ್ತಾಗಿ ಅವತ್ತೇ ರಾತ್ರಿ 10 ಗಂಟೆಗೆ 25 ರಿಂದ 30 ಮಂದಿ ಜನರು ಗುಂಪು ಕಟ್ಟಿಕೊಂಡು ಚಿತ್ತಾಪೂರ ಠಾಣೆ ಮುಂದೆ ಜಮಾಯಿಸಿದ್ದರು. ವಶಪಡಿಸಿಕೊಂಡಿದ್ದ ಬೊಲೆರೋವನ್ನು ಮತ್ತು ದನಗಳನ್ನು ಬಿಡುವಂತೆ ಪೊಲೀಸರನ್ನು ಒತ್ತಾಯಿಸಿದ್ದರು.
ಠಾಣೆಯ ಆವರಣದಿಂದ ತೆರಳುವಂತೆ ಪೊಲೀಸರು ಮನವಿ ಮಾಡಿಕೊಂಡರೂ ಕದಲಿಲ್ಲ. ಚಿತ್ತಾಪೂರ ಪಟ್ಟಣದ ಶೇಖ್ ಮೋಸೀನ, ಮಹಮ್ಮದ್ ಫಯಾಜ್, ಮಹಮ್ಮದ್ ಯೂಸುಫ್, ಇಮ್ರಾನ್, ನೂರ್ ಮಹಮ್ಮದ್ ಆಸೀಫ್, ಮಹಮ್ಮದ್ ಝಾಕೀರ್, ಮಹಮ್ಮದ್ ವಾಜೀದ್, ಮುಜಾಹೀದ, ಮಹಮ್ಮದ್ ಖಲೀಲ್, ರಿಯಾಜ್, ಫಾರೀಕ್, ಬಾಬಾ ಸೌದಾಗಾರ್ ಮತ್ತು ಇತರೆ 15 ರಿಂದ 20 ಮಂದಿ ಪೊಲೀಸರೊಂದಿಗೆ ವಾದಕ್ಕಿಳಿದಿದ್ದರು.
ಪೊಲೀಸರ ಮನವಿ ಮಾಡಿಕೊಂಡರೂ ಕೇಳದೇ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಚಿತ್ತಾಪೂರ ಠಾಣೆ ಪೊಲೀಸರು ಮತ್ತು ಬಕ್ರೀದ್ ಹಿನ್ನೆಲೆಯಲ್ಲಿ ಭದ್ರತೆ ನಿಯೋಜನೆಗಾಗಿ ಬಂದಿದ್ದ DAR ಪೊಲೀಸರು ಅಕ್ರಮವಾಗಿ ಗುಂಪು ಸೇರಿದ್ದವರನ್ನು ಚದುರಿಸುವ ಪ್ರಯತ್ನ ಮಾಡಿದ್ದರು.
ಈ ವೇಳೆ ಠಾಣೆಯ ಮುಂಭಾಗದಿಂದ ಬಸೀದ ಗಂಜ್‌ಚೌಕ ಕಡೆಗೆ ಓಡಿದ ಗುಂಪು ಪೊಲೀಸರ ಮೇಲೆ ಏಕಾಏಕಿ ಕಲ್ಲು ತೂರಾಟ ನಡೆಸಿತ್ತು. ಈ ವೇಳೆ ಶೇಖ್ ಮೋಸೀನ್ ಎಂಬಾತ ಎಸೆದ ಕಲ್ಲು ರಸ್ತೆ ಪಕ್ಕದಲ್ಲೇ ನಿಲ್ಲಿಸಿದ್ದ ಶೈಲೇಂದ್ರ ತೇಲ್ಕರ ಎಂಬವರ ಸ್ವಿಫ್ಟ್ ಡಿಜೈರ್ ಕಾರಿಗೆ ಅಪ್ಪಳಿಸಿ ಕಾರಿನ ಗಾಜು ಪುಡಿಪುಡಿಯಾಗಿತ್ತು. ಮಹಮ್ಮದ್ ಫಯಾಜ್, ಮಹಮ್ಮದ್ ಯೂಸುಫ್, ಇಮ್ರಾನ್, ನೂರ್ ಮಹಮ್ಮದ್ ಆಸೀಫ್ ಇವರು ಎಸೆದ ಕಲ್ಲುಗಳು ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದ ಇತರೆ ಖಾಸಗಿ ವಾಹನಗಳಿಗೆ ಅಪ್ಪಳಿಸಿ ಆ ವಾಹನಗಳಿಗೆ ಭಾರೀ ಹಾನಿಯಾಗಿತ್ತು
ಎಂದು PSI ನಟರಾಜ ಲಾಡೆ ಕೊಟ್ಟ ದೂರಿನ ಮೇರೆಗೆ ಎಫ್‌ಐಆರ್ ದಾಖಲಾಗಿತ್ತು.
ಆ ಎಫ್‌ಐಆರ್‌ನಲ್ಲಿ ಶೇಖ್ ಮೋಸೀನ್ – A1, ಮಹಮ್ಮದ್ ಫಯಾಜ್ -A2, ಮಹ್ಮದ್ ಯೂಸುಫ್ – A3, ಇಮ್ರಾನ್ – A4, ನೂರ್ – A5, ಮಹಮ್ಮದ್ ಝಾಕೀರ್ – A6, ಮಹಮ್ಮದ್ ವಾಜಿ – A7, ಮುಜಾಹಿದ್ ಮನ್ಸೂರ್ – A8, ಮಹಮ್ಮದ್ ಖಲೀಲ್ – A9, ಇಕ್ಬಾಲ್ – A10, ರಿಯಾಜ್ – A11, ಫಾರೂಕ್ – A12, ಬಾಬಾ ಸೌದಾಗಾರ್ – A13 ಆರೋಪಿಗಳಾಗಿದ್ದಾರೆ.
ಇವರ ವಿರುದ್ಧ IPC ಕಲಂ 143, 147, 148, 353, 427, 149ರಡಿಯಲ್ಲಿ FIR ದಾಖಲಾಗಿತ್ತು.

ಈಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿ, ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದ ತಮ್ಮದೇ ವಿಧಾನಸಭಾ ಕ್ಷೇತ್ರದ ಆರೋಪಿಗಳ ವಿರುದ್ಧದ ಪ್ರಕರಣವನ್ನು ಹಿಂಪಡೆಯುವಂತೆ ಸಚಿವ ಪ್ರಿಯಾಂಕ್ ಖರ್ಗೆ ತಮ್ಮದೇ ಕಾಂಗ್ರೆಸ್ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.


