ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ 84 ವರ್ಷದ ಇಳಿ ವಯಸ್ಸಿನ ರಾಜಕಾರಣಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ (Ex Chief Minister B.S.Yediyurappa) ಆತಂಕ ಶುರುವಾಗಿದೆ. ಪೋಕ್ಸೋ (POCSO) ಪ್ರಕರಣಕ್ಕೆ ಸಂಬಂಧಿಸಿದಂತೆ ಇವತ್ತು ವಾದ-ಪ್ರತಿವಾದ ಆಲಿಸಿದ ಕರ್ನಾಟಕ ಹೈಕೋರ್ಟ್ (Karnataka High Court) ನ್ಯಾಯಮೂರ್ತಿ ಎಂ.ಐ.ಅರುಣ್ (Justice M.I.Arun) ಅವರ ನೇತೃತ್ವದ ಏಕಸದಸ್ಯ ನ್ಯಾಯಪೀಠ ಆದೇಶವನ್ನು ಕಾಯ್ದಿರಿಸಿದೆ.
ಯಡಿಯೂರಪ್ಪ (Yediyurappa) ಪರ ಹಿರಿಯ ವಕೀಲ ಸಿ ವಿ ನಾಗೇಶ್ (C.V.Nagesh) ವಾದಿಸಿದರು.
ಹೊಸದಾಗಿ ಪ್ರಕರಣವನ್ನು ಪರಿಗಣಿಸುವಂತೆ ಸಮನ್ವಯ ಪೀಠ (Coordinated Bench) ನೀಡಿದ್ದ ಆದೇಶವನ್ನು ವಿಚಾರಣಾ ನ್ಯಾಯಾಲಯ ಪರಿಗಣಿಸಿಲ್ಲ ಮತ್ತು ವಿವೇಚನೆಯನ್ನು ಬಳಸಿಲ್ಲ. ತನಿಖಾಧಿಕಾರಿ ಸಲ್ಲಿಸಿರುವ ಇಡೀ ಸಾಕ್ಷ್ಯವನ್ನು ಪರಿಗಣಿಸುವಂತೆ ಹೈಕೋರ್ಟ್ ಹೇಳಿತ್ತು. ಆದರೆ ಇಡೀ ಸಾಕ್ಷ್ಯವನ್ನು ಪರಿಗಣಿಸಿಲ್ಲ ಎಂದು ಸಿ.ವಿ.ನಾಗೇಶ್ ಅವರು ವಾದಿಸಿದರು.
ಸಂತ್ರಸ್ತೆಯ ಹೇಳಿಕೆಯನ್ನೇ ಆಧರಿಸಿ ಪೋಕ್ಸೋ ಪ್ರಕರಣದಲ್ಲಿ ಅಪರಾಧಿ ಎಂದು ನಿರ್ಧರಿಸಲಾಗುತ್ತದೆಯಲ್ಲವೇ..? ಸಂತ್ರಸ್ತೆಯ ಹೇಳಿಕೆ ಮತ್ತು ಯಡಿಯೂರಪ್ಪ ಜೊತೆಗಿನ ಆಡಿಯೋ ರೆಕಾರ್ಡಿಂಗ್ ಯಡಿಯೂರಪ್ಪ ವಿರುದ್ಧವೇ ಇದೆ. ಉಳಿದ ಸಾಕ್ಷ್ಯಗಳು ನಿಮ್ಮ ಪರವಾಗಿವೆ ಎಂದು ನ್ಯಾಯಮೂರ್ತಿ ಅರುಣ್ ಅವರು ಪ್ರಶ್ನಿಸಿದರು.
ಸಂಜ್ಞೆ ಪರಿಗಣಿಸುವುದಕ್ಕೆ ಸಂತ್ರಸ್ತೆಯ ಹೇಳಿಕೆಯೇ ಸಾಕು ಎಂದು ವಿಚಾರಣಾ ನ್ಯಾಯಾಲಯ ಹೇಳಿಲ್ಲ. ಸಂತ್ರಸ್ತೆಯ ಹೇಳಿಕೆಯನ್ನು ತನಿಖಾಧಿಕಾರಿ ಪರೀಕ್ಷೆಗೆ ಒಳಪಡಿಸಿದ್ದಾರೆ. ಆ ಹೇಳಿಕೆಯನ್ನೇ ತನಿಖಾಧಿಕಾರಿಯು ಸಂಗ್ರಹಿಸುವ ಸಾಕ್ಷಿಗಳನ್ನು ವಿಚಾರಣಾ ನ್ಯಾಯಾಲಯ ನೋಡಬೇಕು ಎಂದು ಹಿರಿಯ ವಕೀಲ ಸಿ.ವಿ.ನಾಗೇಶ್ ಅವರು ವಾದಿಸಿದರು.
ಬಾಲಕಿ ಮತ್ತು ಯಡಿಯೂರಪ್ಪ ನಡುವಿನ ಸಂಭಾಷಣೆಯ ಆಡಿಯೋ ರೆಕಾರ್ಡಿಂಗ್‌ನ್ನು ಹೇಗೆ ಮೀರುತ್ತೀರಿ..? ಎಂದು ನ್ಯಾಯಮೂರ್ತಿ ಅರುಣ್ ಅವರು ಮರು ಪ್ರಶ್ನೆ ಹಾಕಿದರು.
ಆಡಿಯೋ ರೆಕಾರ್ಡಿಂಗ್ ಇಲ್ಲ ಎಂದು ಯಡಿಯೂರಪ್ಪ ಪರ ವಕೀಲ ಸಿ.ವಿ.ನಾಗೇಶ್ ಅವರು ಉತ್ತರಿಸಿದರು.
ಯಡಿಯೂರಪ್ಪ ಮತ್ತು ಬಾಲಕಿಯ ನಡುವಿನ ಆಡಿಯೋ ರೆಕಾರ್ಡಿಂಗ್‌ನ್ನು ನಾಶಪಡಿಸಲಾಗಿದೆ. ಆಡಿಯೋ ರೆಕಾರ್ಡಿಂಗ್ ಇಲ್ಲ ಎನ್ನುವುದಾದರೆ ಯಡಿಯೂರಪ್ಪ ಯಾಕೆ ಎರಡು ಲಕ್ಷ ರೂಪಾಯಿ ಸಂತ್ತಸ್ತೆಗೆ ನೀಡುತ್ತಿದ್ದರು..? ಎಂದು ವಿಶೇಷ ಸರ್ಕಾರಿ ಅಭಿಯೋಜಕ ಪ್ರೊ.ರವಿವರ್ಮಕುಮಾರ್ ಪ್ರತಿವಾದಿಸಿದರು.
ಅರುಣ್ ಅವರು ನನ್ನ ತಾಯಿಯ ಫೋನ್ ಪಡೆದು ಎಲ್ಲಾ ದಾಖಲೆಗಳು, ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಿದ್ದ ಸಂಭಾಷಣೆಯ ವೀಡಿಯೋವನ್ನೂ ಡಿಲೀಟ್ ಮಾಡಿದ್ದಾರೆ. ಸಂತ್ರಸ್ತೆಗೆ ಎರಡು ಲಕ್ಷ ರೂಪಾಯಿ ಕೊಟ್ಟಿದ್ದನ್ನು ನಿರಾಕರಿಸಿಲ್ಲ. ಸಂಭಾಷಣೆಯನ್ನು ಸಂತ್ರಸ್ತೆಯ ಫೋನ್‌ನಲ್ಲಿ ದಾಖಲಿಸಲಾಗಿತ್ತು. ಅದರ ಒಂದು ಫೈಲ್‌ನ್ನು ಸಂತ್ರಸ್ತೆಯ ಫೋನ್‌ಗೆ ಹಾಕಲಾಗಿತ್ತು. ಅದನ್ನು ಡಿಲೀಟ್ ಮಾಡಿಸಲಾಗಿದೆ. ಆದರೆ ಸಂತ್ರಸ್ತೆಯ ಫೋನ್‌ನಲ್ಲಿ ಅಸಲಿ ವೀಡಿಯೋ ಇದೆ ಎಂದು ಪ್ರೊ.ರವಿವರ್ಮಾ ಕುಮಾರ್ ವಾದಿಸಿದರು.
ಪ್ರಾಸಿಕ್ಯೂಷನ್ ಸಂಗ್ರಹಿಸಿದ ದಾಖಲೆ ಆಧರಿಸಿ ವಿಚಾರಣಾ ನ್ಯಾಯಾಲಯ ಸಂಜ್ಞೆ ಪರಿಗಣಿಸಬೇಕಿತ್ತು ಎಂಬುದು ಯಡಿಯೂರಪ್ಪ ಪರ ವಕೀಲರ ವಾದವಾಗಿದೆ. ಸಂತ್ರಸ್ತೆಯ ಹೇಳಿಕೆಯನ್ನು ಮಾತ್ರ ವಿಚಾರಣಾ ನ್ಯಾಯಾಲಯ ಪರಿಣಿಸಿದೆ ಎಂದು ಅವರ ಆಕ್ಷೇಪವಾಗಿದೆ ಎಂದು ನ್ಯಾಯಮೂರ್ತಿ ಅರುಣ್ ಅವರು ಸರ್ಕಾರದ ಪರ ವಕೀಲರನ್ನು ಪ್ರಶ್ನಿಸಿದರು.
ಸಂತ್ರಸ್ತೆಯನ್ನು ಖಾಸಗಿ ಕೊಠಡಿಗೆ ಕರೆದೊಯ್ದು ಯಡಿಯೂರಪ್ಪ ಆಕೆಯ ಎದೆಯನ್ನು ಅದುಮಿದ್ದಾರೆ. ಇದನ್ನು ವಿಚಾರಣಾ ನ್ಯಾಯಾಲಯ ಪರಿಗಣಿಸಿದೆ. ನಂತರ ಸಂತ್ರಸ್ತೆ ಅಳುತ್ತಾ ಹೊರಬಂದಿದ್ದಾರೆ. ಇದನ್ನೂ ವಿಚಾರಣಾ ನ್ಯಾಯಾಲಯ ಪರಿಗಣಿಸಿದೆ. ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಯಲ್ಲೂ ಆಡಿಯೋದಲ್ಲಿರುವ ಧ್ವನಿ ಯಡಿಯೂರಪ್ಪನವರದ್ದೇ ಎಂದು ಸಾಬೀತಾಗಿದೆ ಎಂದು ಪ್ರೊ.ರವಿವರ್ಮಾ ಕುಮಾರ್ ವಾದಿಸಿದರು.
ವಾದ-ಪ್ರತಿವಾದ ಆಲಿಸಿದ ನ್ಯಾಯಮೂರ್ತಿ ಅರುಣ್ ಅವರು ವಾಸ್ತವಿಕ ಅಂಶಗಳನ್ನು ದಾಖಲಿಸುತ್ತೇನೆ ಎಂದು ಹೇಳಿ ಆದೇಶವನ್ನು ಕಾಯ್ದಿರಿಸಿದರು.


