ತುಮಕೂರಲ್ಲಿರುವ ಎಚ್‌ಎಎಲ್ ಹೆಲಿಕಾಪ್ಟರ್ (HAL Helicopter) ವಿಭಾಗದಲ್ಲಿ ಉದ್ಯೋಗ ಕೊಡಿಸುವುದಾಗಿ ಹೇಳಿ ನಂಬಿಸಿ ವಂಚಿಸಿದ್ದ ಪ್ರಕರಣದಡಿ ತುಮಕೂರು ಎಚ್‌ಎಎಲ್ ಹೆಲಿಕಾಪ್ಟರ್ ವಿಭಾಗದಲ್ಲಿ (Tumakuru HAL Helicopter) ಹಿರಿಯ ತಂತ್ರಜ್ಞನಾಗಿ ಕೆಲಸ ಮಾಡುತ್ತಿದ್ದ ಆಂಧ್ರಪ್ರದೇಶ ಮೂಲದ ಅಧಿಕಾರಿಯನ್ನು ಸೇವೆಯಿಂದ ವಜಾಗೊಳಿಸಲಾಗಿದೆ.
ಹೈದರ್‌ಬಾದ್ ಮತ್ತು ಪಶ್ಚಿಮ ಗೋದಾವರಿ ಜಿಲ್ಲೆಯ ನಿವಾಸಿಯಾಗಿರುವ ರಾಕೇಶ್ ವರ್ಮ ಘದಿರಾಜುನನ್ನು ಸೇವೆಯಿಂದ ವಜಾಗೊಳಿಸಿರುವ ಬಗ್ಗೆ ಹಿಂದೂಸ್ತನ್ ಏರೋನಾಟಿಕ್ಸ್ ಲಿಮಿಟೆಡ್ (Hindustan Aeronautics Ltd), ಹೆಲಿಕಾಪ್ಟರ್ ವಿಭಾಗ, ತುಮಕೂರು ಇವರು ಸಾರ್ವಜನಿಕ ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದಾರೆ.
ಎಚ್‌ಎಎಲ್ ಹೆಲಿಕಾಪ್ಟರ್ ವಿಭಾಗದಲ್ಲಿ ಕೆಲಸ ಕೊಡಿಸುವುದಾಗಿ ಹಣ ಪಡೆದು ವಂಚಿಸಿದ ಆರೋಪದಡಿ ರಾಕೇಶ್ ವರ್ಮಾನ ವಿರುದ್ಧ ಇದೇ ವರ್ಷದ ಜನವರಿ 28ರಂದು ಆರೋಪಪಟ್ಟಿ ಸಲ್ಲಿಕೆಯಾಗಿತ್ತು. ಇದಾದ ಬಳಿಕ ಈತನ ವಿರುದ್ಧ ಸತತ ಮೂರು ಇಲಾಖಾ ವಿಚಾರಣೆಗಳನ್ನೂ ನಡೆಸಲಾಗಿತ್ತು. ಆದರೆ ಈತ ಆ ಮೂರು ಇಲಾಖಾ ವಿಚಾರಣೆಗಳಿಗೂ ಗೈರಾಗಿದ್ದ.
ಈತ ಗೈರಾದ ಹಿನ್ನೆಲೆಯಲ್ಲಿ ಏಕಪಕ್ಷೀಯ ಇಲಾಖಾ ವಿಚಾರಣೆಯನ್ನು ಕೈಗೊಂಡು ಈತನನ್ನು ಆಗಸ್ಟ್ 28ರಿಂದ ಸೇವೆಯಿಂದ ವಜಾಗೊಳಿಸಲಾಗಿದೆ.
ಈತನ ವಿಳಾಸಕ್ಕೆ ನೋಟಿಸ್‌ನ್ನೂ ಕಳುಹಿಸಲಾಗಿತ್ತು. ಆದರೆ ಮೂರು ವಿಳಾಸಗಳಲ್ಲೂ ಈತ ಇಲ್ಲ ಎಂಬ ಮಾಹಿತಿ ವಾಪಸ್ ಆಗಿದೆ.
ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಪ್ರಕಟಣೆ ಹೊರಡಿಸಿರುವ ಎಚ್‌ಎಎಲ್‌ನ ಮುಖ್ಯ ವ್ಯವಸ್ಥಾಪಕರು ಕಂಪನಿಗೆ ಸೇರಿದ ಗುರುತಿನ ಚೀಟಿ, ಮೆಡಿಕಲ್ ಕಾರ್ಡ್, ಉಪಕರಣ, ಕಂಪನಿಯ ಎಲ್ಲಾ ವಸ್ತುಗಳು ಹಿಂದಿರುಗಿಸುವಂತೆ ಸೂಚಿಸಿದ್ದಾರೆ.


