ಭಾರೀ ಮಳೆಯಿಂದ ಕಲ್ಯಾಣ ಕರ್ನಾಟಕದ ಎರಡು ಜಿಲ್ಲೆಗಳೂ ಒಳಗೊಂಡಂತೆ ಮೂರು ಜಿಲ್ಲೆಗಳಲ್ಲಿ ಶಾಲೆಗಳಿಗೆ ಆಗಿರುವ ಹಾನಿಯ ಬಗ್ಗೆ ಸ್ಥಳ ಪರಿಶೀಲನೆ ನಡೆಸಿ ವರದಿ ಸಲ್ಲಿಸುವುದಕ್ಕೆ ರಾಜ್ಯ ಸರ್ಕಾರ ಐವರು ತಹಶೀಲ್ದಾರ್‌ಗಳ ಮೂರು ತಂಡ ರಚಿಸಿದೆ.
ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಹಾಗೂ ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ಆಯುಕ್ತಾಲಯಲ್ಲಿದರುವ ತಹಶೀಲ್ದಾರ್‌ಗಳಿಗೆ ಜವಾಬ್ದಾರಿ ನೀಡಲಾಗಿದೆ.
ತಹಶೀಲ್ದಾರ್‌ಗಳಾದ ಕೆ.ಕೋಮಲ ಮತ್ತು ಪ್ರಶಾಂತ್ ಎನ್.ಎಸ್ ಇಬ್ಬರೂ ಬೀದರ್ ಜಿಲ್ಲೆಯಲ್ಲೂ, ತಹಶೀಲ್ದಾರ್‌ಗಳಾದ ಆರ್.ಮಂಜುಳಮ್ಮ ಮತ್ತು ವಿ.ಭಾಗ್ಯ ಹಾವೇರಿ ಜಿಲ್ಲೆಯಲ್ಲೂ ಮತ್ತು ತಹಶೀಲ್ದಾರ್ ಆರ್.ವಿ.ಮಂಜುನಾಥ್ ಕಲ್ಬುರ್ಗಿ ಜಿಲ್ಲೆಯಲ್ಲೂ ಅಧ್ಯಯನ ಕೈಗೊಳ್ಳಲಿದ್ದಾರೆ.
ಅಕ್ಟೋಬರ್ 27, 28 ಮತ್ತು 29ರಂದು ಅಧ್ಯಯನ ಕೈಗೊಂಡು ಚಿತ್ರಗಳೊಂದಿಗೆ ಸವಿವರವಾದ ವರದಿಯನ್ನು ಆಯಕ್ತಾಲಯಕ್ಕೆ ಸಲ್ಲಿಸುವಂತೆ ಸೂಚಿಸಲಾಗಿದೆ.
ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳ ನೇತೃತ್ವದಲ್ಲಿ ನಿನ್ನೆ ನಡೆಸಿದ್ದ ಸಭೆಯಲ್ಲಿ ಅಧ್ಯಯನ ತಂಡ ರಚಿಸುವುದಕ್ಕೆ ನಿರ್ಧರಿಸಲಾಗಿತ್ತು.


