ದಾವಣಗೆರೆ ಉಪ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದರ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನ ವಿಧಾನಪರಿಷತ್ ಸದಸ್ಯ ದಾವಣಗೆರೆ ಮೂಲದ ಅಬ್ದುಲ್ ಜಬ್ಬಾರ್ ಅವರನ್ನು ಪಕ್ಷದಿಂದಲೇ ಅಮಾನತು ಮಾಡಲಾಗಿದೆ.
ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತುಗೊಳಿಸಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆದೇಶ ಹೊರಡಿಸಿದ್ದಾರೆ. ಆದರೆ ಉಚ್ಛಾಟನೆ ಬದಲು ಅಮಾನತಷ್ಟೇ ಆಗಿರುವ ಹಿನ್ನೆಲೆಯಲ್ಲಿ ಜಬ್ಬಾರ್ ಎಂಎಲ್‌ಸಿ ಸ್ಥಾನಕ್ಕೆ ಯಾವುದೇ ಕುತ್ತಿಲ್ಲ.
ಈ ಮೂಲಕ ಪಕ್ಷ ವಿರೋಧಿ ಚಟುವಟಿಕೆಯ ಹಿನ್ನೆಲೆಯಲ್ಲಿ ಇಬ್ಬರು ವಿಧಾನಪರಿಷತ್ ಸದಸ್ಯರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
ವಿಧಾನಪರಿಷತ್ ಸದಸ್ಯರೂ ಆಗಿರುವ ನಸೀರ್ ಅಹ್ಮದ್ ಅವರಿಗೆ ನೀಡಲಾಗಿದ್ದ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹುದ್ದೆಯನ್ನು ಹೈಕಮಾಂಡ್ ಸೂಚನೆ ಮೇರೆಗೆ ವಾಪಸ್ ಪಡೆಯಲಾಗಿತ್ತು.
ದಾವಣಗೆರೆ ಉಪ ಚುನಾವಣೆಯಲ್ಲಿ ಟಿಕೆಟ್ ಕೈ ತಪ್ಪಿದ್ದ ಕಾರಣ ಉಪ ಚುನಾವಣೆ ಪ್ರಚಾರಕ್ಕೆ ಜಬ್ಬಾರ್ ಹೋಗಿರಲಿಲ್ಲ ಮತ್ತು ಪಕ್ಷದ ವಿರುದ್ಧವೇ ಹೇಳಿಕೆಗಳನ್ನು ನೀಡಿದ್ದರು.
ಇನ್ನು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸಾದಿಕ್ ಪೈಲ್ವಾನ್ ಅವರನ್ನು ಭೇಟಿ ಮಾಡಿ ನಾಮಪತ್ರ ವಾಪಸ್ ಪಡೆಯುವಂತೆ ಮನವೊಲಿಕೆ ಮಾಡುವ ಜವಾಬ್ದಾರಿಯನ್ನು ಶಿವಾಜಿನಗರದ ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್, ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆಗಿರುವ ಎಂಎಲ್‌ಸಿ ಸಲೀಂ ಅಹ್ಮದ್ ಮತ್ತು ಎಂಎಲ್‌ಸಿ ನಸೀರ್ ಅಹ್ಮದ್‌ಗೆ ನೀಡಲಾಗಿತ್ತು. ಆದರೆ ನಸೀರ್ ಅಹ್ಮದ್ ದಾವಣಗೆರೆ ಭೇಟಿ ನೀಡಿ ಸಾದಿಕ್ ಪೈಲ್ವಾನ್ ಮನವೊಲಿಕೆ ಮಾಡಿರಲಿಲ್ಲ.


