ರಾಜಧಾನಿ ಬೆಂಗಳೂರಲ್ಲಿ ಬರೋಬ್ಬರೀ 5 ಕೋಟಿ ರೂಪಾಯಿಯಷ್ಟು ಮಾರುಕಟ್ಟೆ ಮೌಲ್ಯ ಹೊಂದಿರುವ ಭೂಮಿಯನ್ನು ನಕಲಿ ಜಿಪಿಎ (fake GPA) ಸೃಷ್ಟಿಸಿ ಆ ಮೂಲಕ ಪೊಲೀಸ್ ಅಧಿಕಾರಿಯ ಪತ್ನಿಯ ಹೆಸರಿಗೆ ಅಕ್ರಮವಾಗಿ ಪರಭಾರೆ ಮಾಡಿರುವ ಗಂಭೀರ ಆರೋಪ ಕೇಳಿಬಂದಿದೆ.
ಈ ಸಂಬಂಧದ ದೂರಿನ ಪ್ರತಿ ಪ್ರತಿಕ್ಷಣ (Pratikshana)ಕ್ಕೆ ಲಭ್ಯವಾಗಿದೆ.
ಬೆಂಗಳೂರು (Bengaluru) ದಕ್ಷಿಣ ತಾಲೂಕಿನ ಕೆಂಗೇರಿ (Kengeri) ಹೋಬಳಿಯ ನಾಯಂಡಹಳ್ಳಿಯಲ್ಲಿರುವ 309.829 ಚದರ ಮೀಟರ್ ವೀಸ್ತೀರ್ಣದ ಭೂಮಿಯನ್ನು ಪೊಲೀಸ್ ಅಧಿಕಾರಿಯಾಗಿರುವ ಶಂಕರ್ ನಾಯಕ್.ಜಿ.ಕೆ. (Police Officer Shankar Naik.G.K) ಇವರ ಪತ್ನಿ ಕವಿತ.ಎಂ. (Kavita) ಅವರ ಹೆಸರಿಗೆ ನಕಲಿ ಜಿಪಿಎ ಮೂಲಕ ಅಕ್ರಮವಾಗಿ ವರ್ಗಾವಣೆ ಮಾಡಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಈ ಸಂಬಂಧ ದೂರು ಸಲ್ಲಿಕೆಯಾಗಿದೆ.
ಜಿಪಿಎಯೇ (fake GPA) ನಕಲಿ:
ಪೊಲೀಸ್ ಅಧಿಕಾರಿ ಶಂಕರ್ ನಾಯಕ್ ಅವರ ಪತ್ನಿ ಕವಿತ ಅವರ ಹೆಸರಿಗೆ ಈ ಭೂಮಿಯ ಶುದ್ಧಕ್ರಯಪತ್ರ ಮಾಡಿಸುವುದಕ್ಕೆ ಸಬ್ರಿಜಿಸ್ಟ್ರಾರ್ ಕಚೇರಿಗೆ ದಾಖಲೆಯಾಗಿ ಸಲ್ಲಿಸಿದ್ದು ಒಂದು ನಕಲಿ ಜಿಪಿಎ ಎನ್ನುವುದು ಮತ್ತೊಂದು ಆಘಾತಕಾರಿ ಸಂಗತಿ.
ಈಗಿನ ಬೆಂಗಳೂರು ದಕ್ಷಿಣ ಜಿಲ್ಲೆಯ (ಈ ಹಿಂದಿನ ರಾಮನಗರ) ಕನಕಪುರ ತಾಲೂಕಿನ ಉಯ್ಯಂಬಳ್ಳಿ ಹೋಬಳಿಯಲ್ಲಿರುವ ನಾಯಕನಹಳ್ಳಿ ಗ್ರಾಮದ ನಿವಾಸಿಯಾಗಿರುವ 87 ವರ್ಷದ (2024ರಲ್ಲಿ ಶುದ್ಧ ಕ್ರಯ ಪತ್ರ ಮಾಡಿಸಿಕೊಡುವಾಗಿನ ವಯಸ್ಸು) ಗುಂಡೇಗೌಡ ಅವರು ತಮಗೆ ಬೆಂಗಳೂರಿನ ನಿವಾಸಿಯಾಗಿರುವ 56 ವರ್ಷದ ಬಿ.ಎನ್.ರೇಣುಕಾ ಅವರು 1989ರ ಜನವರಿ ೧ರಂದು ಜನರಲ್ ಪವರ್ ಆಫ್ ಅಟಾರ್ನಿಯನ್ನು ಬರೆದುಕೊಟ್ಟಿದ್ದಾರೆ ಎಂದು ನಕಲಿ ಜಿಪಿಎಯನ್ನು ಸೃಷ್ಟಿಸಿ ಆರೋಪ ಕೇಳಿಬಂದಿದೆ.
ಆ ನಕಲಿ ಜಿಪಿಎಯಲ್ಲಿ ಹೇಳಲಾಗಿರುವ ಪ್ರಕಾರ ಜನವರಿ 1, 1989ರಲ್ಲಿ ಈ ಜಿಪಿಎಯನ್ನು ಬರೆದುಕೊಡುವ ವೇಳೆಗೆ ಗುಂಡೇಗೌಡ ಅವರಿಗೆ 52 ವರ್ಷ ಮತ್ತು ರೇಣುಕಾ ಅವರಿಗೆ 21 ವರ್ಷ ವಯಸ್ಸಾಗಿತ್ತು ಎಂದು ಹೇಳಲಾಗಿದೆ. ಈ ಜಿಪಿಎ (GPA) ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಣಿಯಾಗಿಲ್ಲ ಎನ್ನವುದು ಮತ್ತೊಂದು ಗಮನಾರ್ಹ ಅಂಶ.
ಕಾಣಿಸಿದ್ದು 2 ಕೋಟಿ ರೂ…! ಕೊಟ್ಟಿದ್ದು ಬರೀ 2 ಲಕ್ಷ ರೂ.ಗಳಂತೆ..!
ತಾವು ಜಿಪಿಎ ಹೋಲ್ಡರ್ ಎಂದು ಘೋಷಿಸಿಕೊಂಡಿರುವ ಈಗ 89 ವರ್ಷದ ಗುಂಡೇಗೌಡ ಅವರು ಪೊಲೀಸ್ ಅಧಿಕಾರಿಯಾಗಿರುವ ಶಂಕರ್ ನಾಯಕ್ ಅವರ ಪತ್ನಿ ಕವಿತ ಅವರಿಗೆ ಶುದ್ಧಕ್ರಯಪತ್ರವನ್ನು ಮಾಡಿಕೊಟ್ಟಿದ್ದು ಬೆಂಗಳೂರಿನ ಕೋರಮಂಗಲದ ಬಿಡಿಎ ಕಟ್ಟಡದಲ್ಲಿರುವ ಬೊಮ್ಮನಹಳ್ಳಿ ಹಿರಿಯ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ. 2024ರ ಜುಲೈ 3ರಂದು ಈ ಶುದ್ಧಕ್ರಯ ಪತ್ರವನ್ನು ಮಾಡಿಕೊಡಲಾಗಿದೆ.
ಈ ಭೂ ವ್ಯವಹಾರಕ್ಕೆ ಒಟ್ಟು 2 ಕೋಟಿ 5 ಲಕ್ಷ ರೂಪಾಯಿಯಗಳನ್ನು ಭೂ ಮಾಲೀಕರು (ಬಿ.ಎನ್.ರೇಣುಕಾ) ಅವರ ಪರವಾಗಿ ಜಿಪಿಎ ಹೋಲ್ಡರ್ (POA) ಎಂದು ತಮ್ಮನ್ನು ತಾವು ಕರೆಸಿಕೊಂಡಿರುವ ಗುಂಡೇಗೌಡ ಅವರಿಗೆ ನೀಡಲಾಗಿದೆ ಎಂದು ಕೊಡಲಾಗಿದೆ ಎಂದು ಕ್ರಯಪತ್ರದಲ್ಲಿ ತೋರಿಸಲಾಗಿದೆ.
ಈ 2 ಕೋಟಿ 5 ಲಕ್ಷ ರೂಪಾಯಿಗಳಲ್ಲಿ 5 ಲಕ್ಷ ರೂಪಾಯಿಯನ್ನು ನಗದು ರೂಪದಲ್ಲೂ ಉಳಿದ ಬಾಕಿ 2 ಕೋಟಿ ರೂಪಾಯಿಯನ್ನು ಬ್ಯಾಂಕ್ ಆಫ್ ಇಂಡಿಯಾದ 6 ಚೆಕ್ಗಳ ಮೂಲಕ ಗುಂಡೇಗೌಡ ಅವರಿಗೆ ಪಾವತಿಸಲಾಗಿದೆ ಎಂದು ತೋರಿಸಲಾಗಿದೆ.
ಆದರೆ ಪ್ರತಿಕ್ಷಣಕ್ಕೆ ಲಭ್ಯವಾಗಿರುವ ಮಾಹಿತಿಗಳ ಪ್ರಕಾರ ಗುಂಡೇಗೌಡ ಅವರಿಗೆ ಸಿಕ್ಕಿದ್ದು ಬರೀ 2 ಲಕ್ಷ ರೂಪಾಯಿಯಂತೆ..! ಹಾಗಾದ್ರೆ ಉಳಿದ 2 ಕೋಟಿ 3 ಲಕ್ಷ ರೂಪಾಯಿ ಯಾರ ಖಾತೆಗೆ ಜಮೆ ಆಗಿತ್ತು ಎನ್ನುವುದು ಕುತೂಹಲದ ಪ್ರಶ್ನೆ.
ಹಿರಿಯ ಸಬ್ರಿಜಿಸ್ಟ್ರಾರ್ ಮೌನ:
ನಕಲಿ ಜಿಪಿಎ (fake GPA) ಆಧಾರದಲ್ಲಿ ಶುದ್ಧ ಕ್ರಯ ಮಾಡಿಕೊಟ್ಟಿರುವ ಬೊಮ್ಮಹಳ್ಳಿಯ ಹಿರಿಯ ಉಪ ನೋಂದಣಾಧಿಕಾರಿ (Bommanahalli Senior Sub Registrar Ramachandra) ರಾಮಚಂದ್ರ ಅವರಿಗೆ ಪ್ರತಿಕ್ಷಣ (Pratikshana) ಪ್ರತಿಕ್ರಿಯೆಯನ್ನು ಕೇಳಿತ್ತು. ಆದರೆ ರಾಮಚಂದ್ರ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಶುದ್ಧಕ್ರಯ ಪತ್ರದಲ್ಲಿ ಹಿರಿಯ ನೋಂದಣಾಧಿಕಾರಿ ರಾಮಚಂದ್ರ ಅವರ ಡಿಜಿಟಲ್ ಸಹಿಯೇ ಇದೆ.
ಪ್ರತಿಕ್ರಿಯೆ ನೀಡದ ಪೊಲೀಸ್ ಅಧಿಕಾರಿ ಪತ್ನಿ:
ನಕಲಿ ಜಿಪಿಎ (fake GPA) ಆಧರಿಸಿ ಬೃಹತ್ ಆಸ್ತಿಯನ್ನು ತಮ್ಮ ಹೆಸರಿಗೆ ಬರೆಸಿಕೊಂಡ ಪೊಲೀಸ್ ಅಧಿಕಾರಿ ಶಂಕರ್ ನಾಯಕ್ ಅವರ ಪತ್ನಿ ಕವಿತ.ಎಂ. ಅವರಿಗೂ ಪ್ರತಿಕ್ಷಣ (Pratikshana) ಪ್ರತಿಕ್ರಿಯೆಯನ್ನು ಕೇಳಿತ್ತು. ಕವಿತ ಅವರಿಂದಲೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
GPA ಮೇಲೆ ಆಸ್ತಿ ವರ್ಗಾವಣೆ ಮಾಡುವಂತಿಲ್ಲ:
ಜನರಲ್ ಪವರ್ ಆಫ್ ಅಟಾರ್ನಿ ಮೇಲೆ ಆಸ್ತಿ ಹಕ್ಕಿ ವರ್ಗಾವಣೆ ಮಾಡುವಂತಿಲ್ಲ ಎಂದು 15 ವರ್ಷಗಳ ಹಿಂದೆಯೇ ಸುಪ್ರೀಂಕೋರ್ಟ್ ಸೂರಜ್ ಲ್ಯಾಂಪ್ ಇಂಡಸ್ಟ್ರೀಸ್ ಮತ್ತು ಹರಿಯಾಣ ಸರ್ಕಾರದ ಪ್ರಕರಣದಲ್ಲಿ ಐತಿಹಾಸಿಕ ತೀರ್ಪು ನೀಡಿತ್ತು. ಜೊತೆಗೆ ಕಳೆದ ವರ್ಷ ಇದೇ ತೀರ್ಪನ್ನು ಪುನರುಚ್ಚರಿಸಿತ್ತು.
ಪೊಲೀಸ್ ಅಧಿಕಾರಿ ಶಂಕರ್ ನಾಯಕ್ ಅವರ ಪತ್ನಿ ಕವಿತ ಅವರ ಹೆಸರಿಗೆ ನಕಲಿ ಜಿಪಿಎ (fake GPA) ಮೇಲೆಯೇ ಶುದ್ಧಕ್ರಯ ಪತ್ರ ಮಾಡಿಕೊಟ್ಟಿರುವ ಹಿರಿಯ ಉಪ ನೋಂದಣಾಧಿಕಾರಿ ರಾಮಚಂದ್ರ ಅವರ ಕಾರ್ಯವೈಖರಿ ಮೇಲೆ ಸಾಕಷ್ಟು ಅನುಮಾನಗಳು ಉಂಟಾಗಿವೆ.
2011ರಲ್ಲೇ ಜಿಪಿಎ ಆಧಾರದಲ್ಲಿ ಆಸ್ತಿ ಹಕ್ಕಿನ ವರ್ಗಾವಣೆ ಮಾಡುವಂತಿಲ್ಲ ಎಂದು ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ನೀಡಿದ್ದರೂ, ಅದಾದ ಬಳಿಕ 2014 ಮತ್ತು 2023ರಂದು ಎರಡು ಬೇರೆ ಬೇರೆ ಪ್ರಕರಣಗಳಲ್ಲಿ ಕರ್ನಾಟಕ ಹೈಕೋರ್ಟ್ ಇದೇ ತೀರ್ಪು ನೀಡಿತ್ತು. ಅಂದರೆ ಜಿಪಿಎ ಹೋಲ್ಡರ್ಗೆ ತನಗೆ ಜಿಪಿಎ ಮಾಡಿಕೊಡಲಾಗಿರುವ ಆಸ್ತಿಯನ್ನು ಹಕ್ಕನ್ನು ವರ್ಗಾವಣೆ ಮಾಡುವುದಕ್ಕೆ ಯಾವುದೇ ಅಧಿಕಾರವನ್ನು ಹೊಂದಿರುವುದಿಲ್ಲ.
ಕರ್ನಾಟಕ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಮಾಹಿತಿಗಳ ಪ್ರಕಾರ ಶುದ್ಧಕ್ರಯಕ್ಕೆ ಈ ಕೆಳಗಿನ ದಾಖಲೆಗಳನ್ನು ಸಲ್ಲಿಕೆ ಮಾಡುವುದು ಕಡ್ಡಾಯ.
1)ಕ್ರಯ ಪತ್ರದ ಕರಡು (Draft Sale Deed): ನೋಂದಣಿ ಮಾಡಿಸಲಿರುವ ಆಸ್ತಿಯ ಒಪ್ಪಂದದ ಪತ್ರ
2)ತಾಯಿ ಪತ್ರ (Mother Deed/Parent Deed): ಆಸ್ತಿಯ ಹಿಂದಿನ ಮಾಲೀಕತ್ವದ ಇತಿಹಾಸವನ್ನು ತಿಳಿಸುವ ಮೂಲ ದಾಖಲೆ.
3)ಖಾತಾ ಪ್ರಮಾಣಪತ್ರ ಮತ್ತು ಉತಾರ (Khata Certificate & Extract): ಬಿಬಿಎಂಪಿ, ಬಿಡಿಎ ಅಥವಾ ಸ್ಥಳೀಯ ಸಂಸ್ಥೆಗಳು ನೀಡಿದ ಇ-ಖಾತಾ (E-Khata) ಕಡ್ಡಾಯ.
4)ಋಣಭಾರ ಪ್ರಮಾಣಪತ್ರ (Encumbrance Certificate – EC): ಆಸ್ತಿಯ ಮೇಲೆ ಯಾವುದೇ ರೀತಿಯ ಸಾಲ ಅಥವಾ ಕಾನೂನು ಬಾಕಿ ಇಲ್ಲದಿರುವುದನ್ನು ಖಚಿತಪಡಿಸಿಕೊಳ್ಳಲು ಕನಿಷ್ಠ 13 ರಿಂದ 30 ವರ್ಷಗಳ ‘ಇಸಿ’.
5)ಇತ್ತೀಚಿನ ಆಸ್ತಿ ತೆರಿಗೆ ಪಾವತಿಸಿದ ರಶೀದಿ (Property Tax Receipt): ಪ್ರಸಕ್ತ ವರ್ಷದವರೆಗೆ ಆಸ್ತಿ ತೆರಿಗೆ ಪಾವತಿಸಿರುವ ರಸೀದಿಗಳು.
6)ಕೃಷಿ ಭೂಮಿ/ಜಮೀನು ಆಗಿದ್ದರೆ ಹೆಚ್ಚುವರಿ ದಾಖಲೆಗಳುಪಹಣಿ ಪತ್ರ (RTC / Pahani): ಜಮೀನಿನ ಮಾಲೀಕತ್ವ ತಿಳಿಸುವ ಪ್ರಸ್ತುತ ಸಾಲಿನ ಆರ್.ಟಿ.ಸಿ.
7)ಭೂ ಪರಿವರ್ತನಾ ಆದೇಶ (DC Conversion Certificate): ಕೃಷಿ ಭೂಮಿಯನ್ನು ಕೃಷಿಯೇತರ (ರೆಸಿಡೆನ್ಶಿಯಲ್/ಕಮರ್ಷಿಯಲ್) ಉದ್ದೇಶಕ್ಕೆ ಬಳಸಲು ಪಡೆದ ಡಿಸಿ ಕನ್ವರ್ಷನ್ ಪತ್ರ.
8)ಆಸ್ತಿಯ ನಕ್ಷೆ ಮತ್ತು ಸರ್ವೇ ದಾಖಲೆಗಳು: 11E ಸ್ಕೆಚ್ ಅಥವಾ ಹದ್ದುಬಸ್ತು ನಕ್ಷೆ
9) ವಂಶವೃಕ್ಷ
ಆದರೆ ಬೊಮ್ಮನಹಳ್ಳಿಯ ಹಿರಿಯ ಉಪ ನೋಂದಣಾಧಿಕಾರಿ ರಾಮಚಂದ್ರ (Bommanahalli Senior Sub Registrar Ramachandra) ಅವರು ಕರ್ನಾಟಕ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ನ ಐತಿಹಾಸಿಕ ತೀರ್ಪುಗಳನ್ನೇ ಉಲ್ಲಂಘಿಸಿ ನಕಲಿ ಜಿಪಿಎ ಆಧಾರದಲ್ಲಿ ಪೊಲೀಸ್ ಅಧಿಕಾರಿ ಶಂಕರ್ ನಾಯಕ್ ಪತ್ನಿ ಕವಿತ ಅವರಿಗೆ ಶುದ್ಧಕ್ರಯಪತ್ರವನ್ನು ಮಾಡಿಸಿಕೊಟ್ಟ ಹಿನ್ನೆಲೆಯಲ್ಲಿ ರಾಮಚಂದ್ರ ಅವರ ವಿರುದ್ಧ ಇಲಾಖಾ ತನಿಖೆ ಕೈಗೊಂಡು ಕ್ರಮಕೈಗೊಳ್ಳುವಂತೆ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಆಯುಕ್ತರಿಗೆ ದೂರು ಸಲ್ಲಿಕೆಯಾಗಿದೆ.
ಯಾರು ಈ ಶಂಕರ್ ನಾಯಕ್..?
ಶಂಕರ್ ನಾಯಕ್ .ಜಿ.ಕೆ. ಅವರು ಬೆಂಗಳೂರಿನ ಬ್ಯಾಟರಾಯನಪುರ ಹಾಗೂ ಬೆಂಗಳೂರು ದಕ್ಷಿಣ ಜಿಲ್ಲೆಯು ಬಿಡದಿ ಠಾಣೆಯಲ್ಲಿ ಪೊಲೀಸ್ ಅಧಿಕಾರಿಯಾಗಿದ್ದರು.


