ಬಿಹಾರ ಮತದಾರರ ಪಟ್ಟಿ ಸಂಬಂಧ ಸಲ್ಲಿಕೆ ಆಗಿರುವ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂಕೋರ್ಟ್‌ನ ದ್ವಿಸದಸ್ಯ ಪೀಠ ನವೆಂಬರ್ 4ನೇ ತಾರೀಖಿಗೆ ಮುಂದೂಡಿದೆ. ವಿಶೇಷ ಎಂದರೆ ನವೆಂಬರ್ 6ರಂದು ಬಿಹಾರದಲ್ಲಿ ಮೊದಲ ಹಂತದ ಮತದಾನ ನಡೆಯಲಿದೆ.
ಬಿಹಾರದಲ್ಲಿ ಚುನಾವಣಾ ಆಯೋಗ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ಕೈಗೊಂಡಿದ್ದ ವಿಶೇಷ ಅಭಿಯಾನವನ್ನು ಪ್ರಶ್ನಿಸಿ ಪ್ರಜಾಪ್ರಭುತ್ವ ಸುಧಾರಣೆಗಾಗಿ ಇರುವ ಸಂಸ್ಥೆ ADR ಮತ್ತು ಇತರರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಇವತ್ತು ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜೋಯ್‌ಮಲ್ಯ ಬಾಗಚಿ ಅವರಿದ್ದ ಪೀಠ ನಡೆಸಿತ್ತು.
ಬಿಹಾರ ವಿಧಾನಸಭಾ ಚುನಾವಣೆಗಾಗಿ (Bihar Assembly Election) ಚುನಾವಣಾ ಆಯೋಗ ಮತದಾರರ ಅಂತಿಮ ಪಟ್ಟಿಯಲ್ಲಿ ತೆಗೆದು ಹಾಕಲಾಗಿರುವ ಮತ್ತು ಸೇರ್ಪಡೆ ಮಾಡಲಾಗಿರುವ ಪಟ್ಟಿಯನ್ನು ಪ್ರಕಟಿಸುವಂತೆ ಎಡಿಆರ್ ಪರ ಹಾಜರಾಗಿದ್ದ ಸುಪ್ರೀಂಕೋರ್ಟ್‌ನ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರು ವಾದಿಸಿದರು.
ಅಂತಿಮ ಮತದಾರರ ಪಟ್ಟಿಯಲ್ಲಿ ತೆಗೆದು ಹಾಕಲಾಗಿರುವ ಮತ್ತು ಸೇರ್ಪಡೆ ಗೊಳಿಸಲಾಗಿರುವ ಹೆಸರನ್ನು ಬಿಡುಗಡೆಗೊಳಿಸುವ ಪ್ರಕ್ರಿಉಯೆ ನಡೆಯುತ್ತಿದೆ ಎಂದು ಚುನಾವಣಾ ಆಯೋಗ ಸುಪ್ರೀಂಕೋರ್ಟ್‌ಗೆ ಮಾಹಿತಿ ನೀಡಿತು.
ಅವರು (ಚುನಾವಣಾ ಆಯೋಗ) ತಮ್ಮ ಜವಾಬ್ದಾರಿಯನ್ನು ಪೂರ್ಣಗೊಳಿಸುತ್ತಾರೆ ಎಂಬ ಬಗ್ಗೆ ನಮಗೆ ಅನುಮಾನಗಳಿಲ್ಲ. ಅವರು ಪ್ರಕಟಿಸಲೇಬೇಕು. ನಾವು ಈ ಪ್ರಕರಣವನ್ನು ಮುಗಿಸುತ್ತಿಲ್ಲ. ಚುನಾವಣಾ ಆಯೋಗ ಏನನ್ನು ಪ್ರಕಟಿಸುತ್ತೆ ಎಂಬುದನ್ನು ಕಾಯುತ್ತಿದ್ದೇವೆ
ಎಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಸೂರ್ಯಕಾಂತ್ ಹೇಳಿದರು.
ಬಿಹಾರ ವಿಧಾನಸಭಾ ಚುನಾವಣೆ ಎರಡು ಹಂತದಲ್ಲಿ ನಡೆಯಲಿದೆ. ಮೊದಲ ಹಂತದಲ್ಲಿ 121 ವಿಧಾನಸಭಾ ಕ್ಷೇತ್ರಗಳಿಗೆ ನವೆಂಬರ್ 6ರಂದು ಮತದಾನ ನಡೆಯಲಿದೆ. ಎರಡನೇ ಹಂತದಲ್ಲಿ 122 ವಿಧಾನಸಭಾ ಕ್ಷೇತ್ರಗಳಿಗೆ ನವೆಂಬರ್ 11ರಂದು ಮತದಾನ ನಡೆಯಲಿದೆ. ನವೆಂಬರ್ 14ರಂದು ಫಲಿತಾಂಶ ಪ್ರಕಟವಾಗಲಿದೆ.


