RSS ಮತ್ತು ಇತರೆ ಸಂಘಗಳು ಆಯೋಜಿಸುವ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸರ್ಕಾರಿ ಅಧಿಕಾರಿಗಳು ಮತ್ತು ನೌಕರರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಆದೇಶ ಹೊರಡಿಸುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದಿದ್ದಾರೆ.
ಸಾರ್ವಜನಿಕ ಸ್ಥಳಗಳಲ್ಲಿ RSS ಚಟುವಟಿಕೆಗಳಿಗೆ ನಿಷೇಧ ಹೇರಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಇದೇ ತಿಂಗಳು ಸಚಿವ ಪ್ರಿಯಾಂಕ್ ಖರ್ಗೆ ಪತ್ರ ಬರೆದಿದ್ದರು. ಈಗ ಎರಡನೇ ಪತ್ರವನ್ನೂ ಬರೆದಿದ್ದಾರೆ.
ಆರ್‌ಎಸ್‌ಎಸ್ ಮತ್ತು ಇತರೆ ಸಂಘಗಳಿಗೆ ವಂತಿಗೆ ನೀಡುವ ಅಥವಾ ಅವುಗಳೊಂದಿಗೆ ಸಂಬಂಧ ಹೊಂದಿರುವ ಸರ್ಕಾರಿ ನೌಕರರು ಮತ್ತು ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದಕ್ಕೆ ಸುತ್ತೋಲೆ ಹೊರಡಿಸುವಂತೆಯೂ ಸಚಿವ ಪ್ರಿಯಾಂಕ್ ಖರ್ಗೆ ಮನವಿ ಮಾಡಿದ್ದಾರೆ.,
ಕರ್ನಾಟಕ ರಾಜ್ಯದಲ್ಲಿ ಸರ್ಕಾರಿ ನೌಕರರುಗಳಿಗೆ ಕರ್ನಾಟಕ ನಾಗರಿಕ ಸೇವಾ(ನಡತೆ) ನಿಯಮಗಳು, 2021 ಅಡಿ ನಿಯಮ 5(1) ಪ್ರಕಾರ ಈ ಕೆಳಕಂಡ ನಿಯಮವು ಈಗಾಗಲೇ ಜಾರಿಯಲ್ಲಿರುತ್ತದೆ.
“ಯಾರೇ ಸರ್ಕಾರಿ ನೌಕರನು, ಯಾವುದೇ ರಾಜಕೀಯ ಪಕ್ಷದ ಅಥವಾ ರಾಜಕಾರಣದಲ್ಲಿ ಭಾಗವಹಿಸುವಂಥ ಯಾವುದೇ ಸಂಘ ಸಂಸ್ಥೆಯ ಸದಸ್ಯನಾಗಿರತಕ್ಕದ್ದಲ್ಲ ಅಥವಾ ಅವುಗಳೊಂದಿಗೆ ಅನ್ಯಥಾ ಸಂಬಂಧ ಹೊಂದಿರತಕ್ಕದ್ದಲ್ಲ ಅಥವಾ ಯಾವುದೇ ರಾಜಕೀಯ ಚಳುವಳಿ ಅಥವಾ ಚಟುವಟಿಕೆಯಲ್ಲಿ ಭಾಗವಹಿಸತಕ್ಕದ್ದಲ್ಲ, ಅದರ ಸಹಾಯಾರ್ಥ ವಂತಿಗೆ ನೀಡತಕ್ಕದ್ದಲ್ಲ ಅಥವಾ ಅದಕ್ಕೆ ಯಾವುದೇ ರೀತಿಯ ನೆರವು ನೀಡತಕ್ಕದಲ್ಲ.” ಎಂದು ಸ್ಪಷ್ಟವಾಗಿ ನಿರ್ದೇಶನ ನೀಡಲಾಗಿದ್ದರೂ ಸಹ ಇತ್ತೀಚಿನ ದಿನಗಳಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಾಗೂ ಇತರೆ ಸಂಘ ಸಂಸ್ಥೆಗಳು ಹಮ್ಮಿಕೊಳ್ಳುವ ಕಾರ್ಯಕ್ರಮಗಳು ಹಾಗೂ ಚಟುವಟಿಕೆಗಳಲ್ಲಿ ಸರ್ಕಾರಿ ಅಧಿಕಾರಿಗಳು ಹಾಗೂ ನೌಕರರು ಭಾಗವಹಿಸುತ್ತಿರುವುದನ್ನು ಗಮನಿಸಲಾಗಿದೆ.
ಆದ್ದರಿಂದ ರಾಜ್ಯದ ಸರ್ಕಾರಿ ಅಧಿಕಾರಿ ಮತ್ತು ನೌಕರರು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಾಗೂ ಇತರೆ ಸಂಘ ಸಂಸ್ಥೆಗಳು ಹಮ್ಮಿಕೊಳ್ಳುವ ಕಾರ್ಯಕ್ರಮಗಳು ಹಾಗೂ ಚಟುವಟಿಕೆಗಳಲ್ಲಿ ಭಾಗವಹಿಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಿ ಹಾಗೂ ಇದನ್ನು ಉಲ್ಲಂಘಿಸುವ ಅಧಿಕಾರಿ ನೌಕರರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸುವ ಸುತ್ತೋಲೆಯನ್ನು ಹೊರಡಿಸಲು ಸಂಬಂಧಪಟ್ಟವರಿಗೆ ಸೂಕ್ತ ನಿರ್ದೇಶನ ನೀಡುವಂತೆ ಕೋರಿದೆ.
ಎಂದು ಪತ್ರದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ & ಜೈವಿಕ ತಂತ್ರಜ್ಞಾನ ಸಚಿವರೂ ಆಗಿರುವ ಪ್ರಿಯಾಂಕ್ ಖರ್ಗೆ ಮನವಿ ಮಾಡಿದ್ದಾರೆ.


