ವಿಧಾನಸಭಾ ಚುನಾವಣೆಗೆ ಇನ್ನೂ ಎರಡೂವರೆ ವರ್ಷ ಬಾಕಿ ಇರುವಾಗಲೇ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ಮುಂದಿನ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ರಾಜಕೀಯ ಬೆಳವಣಿಗೆಗಳು ಆರಂಭವಾಗಿವೆ.
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್‌ಗೆ ಹೊಸ ಅಧ್ಯಕ್ಷರ ನೇಮಕ ಚರ್ಚೆಗಳ ನಡುವೆಯೇ ಬೆಳ್ತಂಗಡಿ ಕ್ಷೇತ್ರಕ್ಕೆ 2028ರ ವಿಧಾನಸಭಾ ಚುನಾವಣೆಯಲ್ಲಿ ಅಭ್ಯರ್ಥಿ ಯಾರು ಎಂಬ ಚರ್ಚೆ ಕಾಂಗ್ರೆಸ್ ಕಾರ್ಯಕರ್ತರಲ್ಲೇ ಈಗ ಶುರುವಾಗಿದೆ.
ಈಗ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿರುವ ಕಾರಣ ಮುಂದಿನ ಚುನಾವಣೆಗೆ ಸಂಬಂಧಿಸಿದಂತೆ ಬಹಿರಂಗವಾಗಿ ಯಾವ ಕಾಂಗ್ರೆಸ್ ನಾಯಕರೂ ಮಾತಾಡದೇ ಇದ್ದರೂ ಬದಲಾಗುತ್ತಿರುವ ರಾಜಕೀಯ ಸನ್ನಿವೇಶಗಳ ಹಿನ್ನೆಲೆಯಲ್ಲಿ ಕ್ಷೇತ್ರದ ಕಾಂಗ್ರೆಸ್ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರಲ್ಲಿ ಚರ್ಚೆ ಈಗಲೇ ಆರಂಭವಾಗಿರುವುದು ನಿಜ.
2023ರಲ್ಲಿ ವಸಂತ ಬಂಗೇರ ಬದಲಿಗೆ ಈಗ ವಿಧಾನಪರಿಷತ್ ಸದಸ್ಯರಾಗಿರುವ ಮಾಜಿ ರಾಜ್ಯಸಭಾ ಸಂಸದ ಬಿ.ಕೆ.ಹರಿಪ್ರಸಾದ್ ಅವರ ಸಹೋದರ ಬಿ.ಕೆ.ಶಿವರಾಂ ಅವರ ಮಗ ರಕ್ಷಿತ್ ಶಿವರಾಂಗೆ ಟಿಕೆಟ್ ನೀಡಲಾಗಿತ್ತು.
ಕಾಂಗ್ರೆಸ್‌ನೊಳಗೆ ತೀವ್ರ ಪ್ರತಿರೋಧದ ಹೊರತಾಗಿಯೂ ರಕ್ಷಿತ್ ಶಿವರಾಂಗೆ ಟಿಕೆಟ್ ನೀಡಲಾಯಿತು. ಬೆಂಗಳೂರಿನ ಮಲ್ಲೇಶ್ವರದ ಹುಡುಗ ಎಂದು ಬೆಳ್ತಂಗಡಿಯಲ್ಲಿ ಕರೆಸಿಕೊಂಡು ಹೊರಗಿನವ ಎಂಬ ಹಣೆಪಟ್ಟಿ ಕಟ್ಟಿಕೊಂಡ ರಕ್ಷಿತ್ ತಮ್ಮನ್ನು ಬಿಲ್ಲವ ಸಮುದಾಯದ ಯುವ ನಾಯಕ ಎಂದು ಬಿಂಬಿಸಿಕೊಳ್ಳಲು ನಡೆಸಿದ ಪ್ರಯತ್ನ ಫಲ ಕಾಣಲಿಲ್ಲ. ಕ್ಷೇತ್ರದಲ್ಲಿ ಬಿಲ್ಲವ ಮತಗಳು ಅಧಿಕವಿದ್ದರೂ ಆ ಮತಗಳು ರಕ್ಷಿತ್‌ಗೆ ಜೊತೆಗೆ ನಿಲ್ಲಲಿಲ್ಲ.
2018ರಲ್ಲಿ ಬಿಜೆಪಿ ಶಾಸಕ ಹರೀಶ್ ಪೂಂಜಾ ಗೆದ್ದಿದ್ದು 22,974 ಮತಗಳ ಅಂತರದಲ್ಲಿ. 2023ರಲ್ಲಿ ಪೂಂಜಾ ಸತತವಾಗಿ ಗೆದ್ದಿದ್ದು ಬರೋಬ್ಬರೀ 18,216 ಮತಗಳ ಅಂತರದಲ್ಲಿ. ಬಿಜೆಪಿ ಸರ್ಕಾರದ ವಿರುದ್ಧ ಆಡಳಿತ ವಿರೋಧಿ ಅಲೆ, ಐದು ಗ್ಯಾರಂಟಿ ಯೋಜನೆಗಳ ಭರವಸೆ, ಅಲ್ಪಸಂಖ್ಯಾತ ಮತ ಲೆಕ್ಕಾಚಾರದ, ಬಿಲ್ಲವ ಯುವ ನಾಯಕ ಎಂಬ ಘೋಷಣೆಗಳ ಹೊರತಾಗಿಯೂ ಬಿಜೆಪಿ ಶಾಸಕ ಹರೀಶ್ ಪೂಂಜಾಗೆ ಪ್ರಬಲ ಸ್ಪರ್ಧೆ ನೀಡುವುದಕ್ಕೆ ರಕ್ಷಿತ್ ಶಿವರಾಂಗೆ ಸಾಧ್ಯವಾಗಲಿಲ್ಲ.

ಮರು ವರ್ಷವೇ ನಡೆದ ಲೋಕಸಭಾ ಚುನಾವಣೆಯಲ್ಲಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ಗಿಂತಲೂ ಬಿಜೆಪಿ ಮತಗಳಿಕೆಯೇ ಹೆಚ್ಚಿತ್ತು. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಪದ್ಮರಾಜ್ ರಾಮಯ್ಯಗೆ 78,101 ಮತಗಳು ಸಿಕ್ಕರೆ, ಬಿಜೆಪಿ ಸಂಸದ ಬ್ರಿಜೇಶ್ ಚೌಟಗೆ 1,01,408 ಮತಗಳು ಸಿಕ್ಕಿದ್ದವು.
2023ರಲ್ಲಿ ಕಾಂಗ್ರೆಸ್ ಭಾರೀ ಬಹುಮತದೊಂದಿಗೆ ಅಧಿಕಾರಕ್ಕೆ ಬಂದರೂ ಲೋಕಸಭಾ ಚುನಾವಣೆಯಲ್ಲಿ ಬೆಳ್ತಂಗಡಿಯ ಬಿಲ್ಲವ ಮತಗಳನ್ನು ಕಾಂಗ್ರೆಸ್‌ಗೆ ತಂದುಕೊಡುವಲ್ಲಿ ರಕ್ಷಿತ್ ಶಿವರಾಂ ವಿಫಲರಾದರು ಎನ್ನುವುದು ಕಾಂಗ್ರೆಸ್‌ನವರೇ ಆಡುತ್ತಿರುವ ಮಾತು.
ಹರೀಶ್ ಕುಮಾರ್:
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರೂ ಆಗಿರುವ ಈಗ ಮೆಸ್ಕಾಂನ ಅಧ್ಯಕ್ಷರಾಗಿರುವ ಹರೀಶ್ ಕುಮಾರ್ ಮೂಲತಃ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದವರೇ. ಇವರ ಗ್ರಾಮ ಬೆಳ್ತಂಗಡಿ ತಾಲೂಕಿನ ನಡ. ಬೆಳ್ತಂಗಡಿ ಗ್ರಾಮೀಣ ಬ್ಲಾಕ್ ಕಾಂಗ್ರೆಸ್‌ನ ಅಧ್ಯಕ್ಷರಾಗಿದ್ದರು. ವಿಧಾನಪರಿಷತ್ ಸದಸ್ಯರಾಗಿದ್ದರು. 2017ರಿಂದ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರೂ ಆಗಿದ್ದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಇವರೂ ಕೂಡಾ ಕ್ಷೇತ್ರದಿಂದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದರು. ಇವರು ಕೂಡಾ ಬಿಲ್ಲವ ಸಮುದಾಯಕ್ಕೆ ಸೇರಿದವರು. ಆದರೆ ಕಳೆದ ಚುನಾವಣೆಯಲ್ಲಿ ವಸಂತ ಬಂಗೇರ ಮತ್ತು ರಕ್ಷಿತ್ ಶಿವರಾಂ ಜೊತೆಗಿನ ಟಿಕೆಟ್ ಸಂಘರ್ಷದಿಂದಾಗಿ ಹರೀಶ್ ಕುಮಾರ್ ಸ್ವಲ್ಪ ಅಂತರ ಕಾಯ್ದುಕೊಂಡಿದ್ದರು.
ಅದರಲ್ಲೂ ರಕ್ಷಿತ್ ಶಿವರಾಂಗೆ ಚಿಕ್ಕಪ್ಪ ಬಿ.ಕೆ.ಹರಿಪ್ರಸಾದ್ ಅವರ ಕೃಪಾಕಟಾಕ್ಷ ಇದ್ದ ಕಾರಣ ಅವರನ್ನು ಎದುರು ಹಾಕಿಕೊಂಡು ಟಿಕೆಟ್ ಗಿಟ್ಟಿಸಿಕೊಳ್ಳುವುದು ಕಷ್ಟ ಸಾಧ್ಯವಾಗಿತ್ತು. ರಕ್ಷಿತ್ ಶಿವರಾಂ ಯುವಕ, ಒಂದು ಚಾನ್ಸ್ ಕೊಟ್ಟು ನೋಡೋಣ ಎಂಬ ಒತ್ತಡದಿಂದಲೂ ಹರೀಶ್ ಕುಮಾರ್‌ಗೆ ಟಿಕೆಟ್ ಸಿಗಲಿಲ್ಲ.
ದಕ್ಷಿಣ ಕನ್ನಡದಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿರುವ ಹಿರಿಯರಿಗೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮಣೆ ಹಾಕಿ ಎನ್ನುವುದು ಹರೀಶ್ ಕುಮಾರ್ ಬಣದ ಆಗ್ರಹ.
ರಂಜನ್ ಗೌಡ:
ಮುಂದಿನ ಚುನಾವಣೆಗೆ ಕಾಂಗ್ರೆಸ್‌ನಿಂದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ ರಂಜನ್ ಗೌಡ. ಬೆಳ್ತಂಗಡಿಗೆ ರಕ್ಷಿತ್ ಶಿವರಾಂ ಕಾಲಿಟ್ಟಿದ್ದೇ 2020ರ ವೇಳೆಗೆ. ಅದಕ್ಕಿಂತಲೂ ಮೊದಲು ಬೆಳ್ತಂಗಡಿಯಲ್ಲಿ ಕಾಂಗ್ರೆಸ್ ಸಂಘಟನೆಯಲ್ಲಿ ಸಕ್ರಿಯರಾಗಿದ್ದವರು ರಂಜನ್ ಗೌಡ. ಮಾಜಿ ಸಚಿವ ಕೆ ಗಂಗಾಧರ್ ಗೌಡ ಅವರ ಮಗ. ಬೆಳ್ತಂಗಡಿ ಕ್ಷೇತ್ರದಲ್ಲಿ ಬಿಲ್ಲವರ ಮತಗಳ ಜೊತೆಗೆ ಒಕ್ಕಲಿಗರ ಮತಗಳು ನಿರ್ಣಾಯಕವಾಗಿವೆ.

ಕಳೆದ ಚುನಾವಣೆಯಲ್ಲಿ ವಸಂತ ಬಂಗೇರ ಅಥವಾ ನನಗೆ ಟಿಕೆಟ್ ಕೊಡಿ ಎಂದು ಮಾಜಿ ಸಚಿವ ಗಂಗಾಧರ್ ಗೌಡ ಅವರು ವಾದಿಸಿದ್ದರು. ಆದರೆ ರಕ್ಷಿತ್ ಶಿವರಾಂ ಹೈಕಮಾಂಡ್ ಪ್ರಭಾವದ ಕಾರಣದಿಂದ ಇಬ್ಬರಿಗೂ ಟಿಕೆಟ್ ಸಿಗಲಿಲ್ಲ.
ವಸಂತ ಬಂಗೇರ ಮತ್ತು ಗಂಗಾಧರ್ ಗೌಡ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ರಕ್ಷಿತ್ ಶಿವರಾಂ ವಿಫಲರಾಗಿದ್ದೇ ಚುನಾವಣಾ ಸೋಲಿಗೆ ಕಾರಣ ಎನ್ನುವುದು ಬೆಳ್ತಂಗಡಿ ರಾಜಕಾರಣ ತಿಳಿದವರಿಗೆ ಅರ್ಥವಾಗುವ ವಿಷಯ.
ರಂಜನ್ ಗೌಡ ಈಗ 2028ರ ವಿಧಾನಸಭಾ ಚುನಾವಣೆಗೆ ತಯಾರಾಗುತ್ತಿದ್ದಾರೆ. ಯುವಕ, ಹೊಸ ಮುಖ ಎಂಬ ಕಾರಣಕ್ಕೆ ನೀವು ರಕ್ಷಿತ್ ಶಿವರಾಂಗೆ ಟಿಕೆಟ್ ನೀಡಿದ್ದೀರಿ, ಮುಂದಿನ ಚುನಾವಣೆಯಲ್ಲಿ ನಮಗೆ ಅವಕಾಶ ಕೊಡಿ ಎನ್ನುವುದು ರಂಜನ್ ಗೌಡ ಅವರ ಆಗ್ರಹ.
ಬೆಳ್ತಂಗಡಿ ಕಾಂಗ್ರೆಸ್‌ನೊಳಗೆ ಸದ್ದಿಲ್ಲದೇ ಆರಂಭವಾಗಿರುವ ಈ ಚಟುವಟಿಕೆಗಳು ಮುಂದಿನ ಚುನಾವಣೆ ಬರುವ ಹೊತ್ತಲ್ಲಿ ಇನ್ನಷ್ಟು ಬಿಸಿ ಏರಿ ಲೆಕ್ಕಾಚಾರವನ್ನೇ ಬದಲಿಸಿಬಿಡಬಹುದು.


