ಕೌಶಲ್ಯ ತರಬೇತಿಗಾಗಿ ರಾಜ್ಯ ಸರ್ಕಾರ ಬಿಡುಗಡೆ ಮಾಡಿದ್ದ 1 ಕೋಟಿ ರೂಪಾಯಿಯನ್ನು ದುರ್ಬಳಕೆ ಮಾಡಿಕೊಂಡಿರುವ ಗಂಭೀರ ಆರೋಪ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮೂಡಲಕಟ್ಟೆಯಲ್ಲಿರುವ ಮೂಡಲಕಟ್ಟೆ ತಾಂತ್ರಿಕ ಸಂಸ್ಥೆ (Moodalakatte Institute of Technology (MIT) ವಿರುದ್ಧ ಕೇಳಿಬಂದಿದೆ.
2006-11ರ ಕೈಗಾರಿಕಾ ನೀತಿಯ ಪ್ರಕಾರ ಸುವರ್ಣ ಕೌಶಲ್ಯಾಭಿವೃದ್ಧಿ ಯೋಜನೆಯಡಿ ಅನುದಾನ ಬಿಡುಗಡೆ ಮಾಡಲಾಗಿತ್ತು.
ಈ ಯೋಜನೆಯಡಿ ತರಬೇತಿ ಕೇಂದ್ರ ಸ್ಥಾಪನೆಗಾಗಿ ಮೆಷಿನರಿ ಅಥವಾ ಯಂತ್ರಗಳ ಒಟ್ಟು ವೆಚ್ಚದ ಶೇಕಡಾ 75ರಷ್ಟನ್ನು ಗರಿಷ್ಠ 2 ಕೋಟಿ ರೂಪಾಯಿವರೆಗೆ ಖಾಸಗಿ ಸಂಸ್ಥೆಗಳಿಗೆ ಸರ್ಕಾರವೇ ಮಂಜೂರು ಮಾಡುತ್ತಿತ್ತು.
(ಪ್ರತಿಕ್ಷಣ ಸುದ್ದಿಗಾಗಿ ವಾಟ್ಸಾಪ್ ನಂಬರ್ 97411 83147 ಅಥವಾ pratikshananews@gmail.com ನ್ನು ಸಂಪರ್ಕಿಸಿ)
ಈ ಶೇಕಡಾ 75ರಷ್ಟು ಮೊತ್ತವನ್ನು ಬಿಡುಗಡೆ ಮಾಡುವ ಸಲುವಾಗಿ ತರಬೇತಿಯನ್ನು ನೀಡುವ ಸಂಸ್ಥೆ ಹೊಂದಿರುವ ಕಟ್ಟಡವನ್ನು ಅಡಮಾನ ಇಡುವ ಸಂಬಂಧ ಒಪ್ಪಂದ ಮಾಡಿಕೊಳ್ಳುವುದು ಕಡ್ಡಾಯವಾಗಿತ್ತು. ಉಳಿದ ಶೇಕಡಾ 25ರಷ್ಟು ಮೊತ್ತವನ್ನು ತರಬೇತಿ ನೀಡುವ ಆ ಸಂಸ್ಥೆ ಖರೀದಿಸಿ ಅಳವಡಿಸಿದ ಬಳಿಕ ಬಿಡುಗಡೆ ಮಾಡಬೇಕಿತ್ತು.
ಅನುದಾನ ಬಿಡುಗಡೆಗೂ ಮೊದಲು ಇಲಾಖೆಯ ಜೊತೆಗೆ ಆ ತರಬೇತಿ ಸಂಸ್ಥೆ ಒಪ್ಪಂದವನ್ನು ಮಾಡಿಕೊಂಡು ಬಿಡುಗಡೆಯಾದ ಅನುದಾನದಷ್ಟೇ ಮೊತ್ತದ ಬ್ಯಾಂಕ್ ಗ್ಯಾರಂಟಿಯನ್ನೂ ಕೊಡಬೇಕಿತ್ತು.
ಒಂದು ವೇಳೆ ಯೋಜನೆ ಅನುಷ್ಠಾನಕ್ಕೆ ವಿಫಲವಾದರೆ ಆಗ ಆ ಒಪ್ಪಂದದಲ್ಲಿ ಉಲ್ಲೇಖಿಸಲಾದ ಬಡ್ಡಿಯೊಂದಿಗೆ ಬಿಡುಗಡೆ ಮಾಡಲಾದ ಅಷ್ಟೂ ಅನುದಾನವನ್ನೂ ಇಲಾಖೆಗೆ ವಾಪಸ್ ಕೊಡಬೇಕಿತ್ತು ಮತ್ತು ಒಂದು ವೇಳೆ ಡಿಫಾಲ್ಟ್ ಆದರೆ ಇಲಾಖೆಯು ಆ ಬ್ಯಾಂಕ್ ಗ್ಯಾರಂಟಿಯನ್ನು ಅನುದಾನವನ್ನು ವಾಪಸ್ ಪಡೆದುಕೊಳ್ಳುವುದಕ್ಕೆ ಬಳಸಿಕೊಳ್ಳಬೇಕಿತ್ತು.
ಕೈಗಾರಿಕೆ ಮತ್ತು ವಾಣಿಕ್ಯ ಇಲಾಖೆಯ ಆಯುಕ್ತರು ಈ ಎಲ್ಲಾ ನಿಯಮಗಳನ್ನು ಉಲ್ಲಂಘಿಸಿ MITಗೆ 1.01 ಕೋಟಿ ರೂಪಾಯಿ ಅನುದಾನವನ್ನು ಬಿಡುಗಡೆ ಮಾಡಿರುವುದು ದಾಖಲೆಗಳಲ್ಲಿ ಗೊತ್ತಾಗಿದೆ.
ಮೂಡಲಕಟ್ಟೆ ತಾಂತ್ರಿಕ ಸಂಸ್ಥೆಯು (MIT) ಕೌಶಲ್ಯ ತರಬೇತಿ ಕೇಂದ್ರವನ್ನು ಸ್ಥಾಪನೆ ಮಾಡುವ ಸಲುವಾಗಿ 6.55 ಕೋಟಿ ರೂಪಾಯಿಯನ್ನು ಬಿಡುಗಡೆ ಮಾಡುವಂತೆ ಪ್ರಸ್ತಾಪವನ್ನು ಸಲ್ಲಿಸಿತ್ತು. ಅದರಲ್ಲಿ ತರಬೇತಿ ಸಂಸ್ಥೆಗಾಗಿ 3 ಕೋಟಿ 17 ಲಕ್ಷ ರೂಪಾಯಿ ಮೊತ್ತದಷ್ಟು ಮೆಷಿನರಿ ಖರೀದಿಯ ಲೆಕ್ಕವೂ ಒಳಗೊಂಡಿತ್ತು.
ಆ ಪ್ರಸ್ತಾಪವನ್ನು ಆಧರಿಸಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಆಯುಕ್ತರು ಫೆಬ್ರವರಿ 2018ರಲ್ಲಿ 1.58 ಕೋಟಿ ರೂಪಾಯಿ ಮೊತ್ತದ ಅನುದಾನವನ್ನು ಬಿಡುಗಡೆಗೆ ಅನುಮೋದಿಸುತ್ತಾರೆ. ಇದರ ಮೊದಲ ಕಂತಿನ ಭಾಗವಾಗಿ ಮಾರ್ಚ್ 2018ರಲ್ಲಿ 1.01 ಕೋಟಿ ರೂಪಾಯಿ ಅನುದಾನವನ್ನು ಬಿಡುಗಡೆ ಮಾಡಲಾಗುತ್ತದೆ.
ಅನುದಾನ ಬಿಡುಗಡೆ ಆದ ಬಳಿಕ ಒಂದು ವೇಳೆ ತರಬೇತಿ ಕೇಂದ್ರ ತೆರೆಯಲು ವಿಫಲವಾದರೆ ಆಗ MITಯು ಬಿಡುಗಡೆಯಾದ ಅನುದಾನವನ್ನು ಶೇಕಡಾ 6ರಷ್ಟು ಬಡ್ಡಿಯೊಂದಿಗೆ ವಾಪಸ್ ಕೊಡಬೇಕಾಗಿತ್ತು.
ಆದರೆ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಆಯುಕ್ತರು ಅನುದಾನ ಬಿಡುಗಡೆಯ ವೇಳೆ MITಯ ಜೊತೆಗೆ ಒಪ್ಪಂದವನ್ನು ಮಾಡಿಕೊಂಡಿರಲಿಲ್ಲ, ಕಟ್ಟಡದ ಅಡಮಾನ ಒಪ್ಪಂದ ಮಾಡಿರಲಿಲ್ಲ ಮತ್ತು ಅನುದಾನಕ್ಕೆ ಸಮವಾದ ಬ್ಯಾಂಕ್ ಗ್ಯಾರಂಟಿಯನ್ನೂ ಪಡೆದುಕೊಂಡಿರಲಿಲ್ಲ.
ಕೌಶಲ್ಯ ತರಬೇತಿ ಕೇಂದ್ರಕ್ಕಾಗಿ ಅನುದಾನ ಪಡೆದ ಬಳಿಕ MITಯು ತರಬೇತಿ ಕೇಂದ್ರವನ್ನೇ ಸ್ಥಾಪನೆ ಮಾಡಿಲ್ಲ. ಹೀಗಾಗಿ ಸರ್ಕಾರದ 1.01 ಕೋಟಿ ರೂಪಾಯಿ ಮೊತ್ತದ ಅನುದಾನ ದುರ್ಬಳಕೆ ಆಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.


